ಉಡುಪಿ : ದಿನಾಂಕ 07-12-2023ರಂದು ಆರಂಭವಾದ ಉಡುಪಿಯ 28 ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನದ ಸಮಾರೋಪ ದಿನಾಂಕ 20-12-2023ರಂದು ಸಂಪನ್ನಗೊಂಡಿತು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರಗಳ ಪರ್ಯಂತ ನಡೆದ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 28 ಶಾಲೆಗಳ ಸುಮಾರು 900 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು “ಈ ಕಲೆ ಮಕ್ಕಳನ್ನು ಸಂಸ್ಕೃತೀ ಸಂಪನ್ನರಾಗಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಯಕ್ಷಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ” ಎಂದು ಆಶೀರ್ವದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಶ್ರೀ ಯಶ್ಪಾತಲ್ ಸುವರ್ಣರು “ಶುದ್ಧ ಸಂಕಲ್ಪದಿಂದ ಆರಂಭಗೊಂಡ ಈ ಮಹಾ ಅಭಿಯಾನವನ್ನು ನಾವೆಲ್ಲ ಸೇರಿ ಬೆಳೆಸೋಣ” ಎಂದರು. ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಕೆ. ಗಣಪತಿಯವರು ಶುಭಾಶಂಸನೆಗೈದರು. ಅಭ್ಯಾಗತರಾಗಿ ಡಾ. ನಿ.ಬೀ. ವಿಜಯ ಬಲ್ಲಾಳ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್.ವಿ. ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷ ಶಿಕ್ಷಣದ ಗುರುಗಳನ್ನು ಮತ್ತು ಪ್ರಸಾಧನ ತಜ್ಞರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು. ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ನಾರಾಯಣ ಎಂ. ಹೆಗಡೆ ಸ್ವಾಗತಿಸಿ, ಎಚ್. ಎನ್. ಶೃಂಗೇಶ್ವರ ವಂದಿಸಿಸಿ, ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ದಿನಾಂಕ 07-12-2023ರಂದು ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ – ‘ಕನಕಾಂಗಿ ಕಲ್ಯಾಣ’, ಮಾಧವಕೃಪಾ ಆಂಗ್ಲಮಾಧ್ಯಮ ಶಾಲೆ, ಮಣಿಪಾಲ – ‘ವಿದ್ಯುನ್ಮತೀ ಕಲ್ಯಾಣ’, ದಿನಾಂಕ 08-12-2023ರಂದು ಆದಿಉಡುಪಿ ಪ್ರೌಢ ಶಾಲೆ, ಆದಿಉಡುಪಿ – ‘ಮಧುರ ಮಹೀಂದ್ರ’, ಸರಕಾರಿ ಪ್ರೌಢ ಶಾಲೆ, ಹನುಮಂತನಗರ – ‘ಕುಶ ಲವ’, ದಿನಾಂಕ 09-12-2023ರಂದು ಶ್ರೀ ನಾರಾಯಣ ಗುರು ಆಂಗ್ಲ ಮಾ. ಶಾಲೆ, ಮಲ್ಪೆ – ‘ವೀರವರ್ಮ ಕಾಳಗ’, ಕ್ರಿಶ್ಚಿಯನ್ ಪ್ರೌಢ ಶಾಲೆ, ಉಡುಪಿ – ‘ಸಮುದ್ರ ಮಥನ’, ದಿನಾಂಕ 10-12-2023ರಂದು ಪರ್ಕಳ ಪ್ರೌಢ ಶಾಲೆ, ಪರ್ಕಳ – ‘ಚಕ್ರವ್ಯೂಹ’, ಡಾ. ಟಿ.ಎಂ.ಎ.ಪೈ ಪ್ರೌಢಶಾಲೆ, ಕಲ್ಯಾಣಪುರ –‘ವೀರ ಬರ್ಭರಿಕ’, ದಿನಾಂಕ 11-12-2023ರಂದು ಮಿಲಾಗ್ರಿಸ್ ಆಂಗ್ಲ ಮಾ. ಪ್ರೌಢಶಾಲೆ, ಕಲ್ಯಾಣಪುರ – ‘ಶ್ರೀಕೃಷ್ಣ ಗುರುದಕ್ಷಿಣೆ’, ಸರಕಾರಿ ಪ್ರೌಢ ಶಾಲೆ, ಅಜ್ಜರಕಾಡು – ‘ಸುಭದ್ರಾ ಸ್ವಯಂವರ’, ದಿನಾಂಕ 12-12-2023ರಂದು ಸರಕಾರಿ ಪ.ಪೂ ಕಾಲೇಜು, ತೆಂಕನಿಡಿಯೂರು –‘ರುಕ್ಮಾವತಿ ಕಲ್ಯಾಣ’, ಸೈಂಟ್ ಸಿಸಿಲಿ ಪ್ರೌಢಶಾಲೆ, ಉಡುಪಿ – ‘ಸೇತು ಬಂಧನ’, ದಿನಾಂಕ 13-12-2023ರಂದು ಸರಕಾರಿ ಪದವಿಪೂರ್ವ ಕಾಲೇಜು, ಉಡುಪಿ –‘ಚಕ್ರವ್ಯೂಹ’, ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇಂದ್ರಾಳಿ – ‘ಮೀನಾಕ್ಷಿ ಕಲ್ಯಾಣ’, ದಿನಾಂಕ 14-12-2023ರಂದು ಗುಂಡಿಬೈಲು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಡುಪಿ – ‘ಪಂಚವಟಿ’, ಸರಕಾರಿ ಪ್ರೌಢ ಶಾಲೆ, ಇಂದಿರಾನಗರ – ‘ವೀರ ಅಭಿಮನ್ಯು’, ದಿನಾಂಕ 15-12-2023ರಂದು ಬಿ.ಎಮ್.ಆಂ.ಮಾ. ಪ್ರೌಢಶಾಲೆ, ಪರ್ಕಳ – ‘ರಾಣಿ ಶಶಿಪ್ರಭೆ’, ಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು – ‘ವಿದ್ಯುನ್ಮತಿ ಪ್ರಕರಣ’, ದಿನಾಂಕ 16-12-2023ರಂದು ಮಣಿಪಾಲ ಪದವಿಪೂರ್ವ ಕಾಲೇಜು, ಮಣಿಪಾಲ – ‘ಶ್ರೀಕೃಷ್ಣ ಪಾರಿಜಾತ’, ಮಿಲಾಗ್ರಿಸ್ ಕನ್ನಡ ಮಾ. ಪ್ರೌಢ ಶಾಲೆ, ಕಲ್ಯಾಣಪುರ – ‘ಇಂದ್ರಜಿತು ಕಾಳಗ’, ದಿನಾಂಕ 17-12-2023ರಂದು ಎಸ್.ವಿ.ಎಸ್.ಟಿ. ಪ್ರೌಢಶಾಲೆ, ಕಿದಿಯೂರು – ‘ಶ್ರೀಕೃಷ್ಣ ಗುರುದಕ್ಷಿಣೆ’, ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜು, ಉಡುಪಿ – ‘ಸೇತು ಬಂಧನ’, ದಿನಾಂಕ 18-12-2023ರಂದು ಸರಕಾರಿ ಪ್ರೌಢಶಾಲೆ, ಶೆಟ್ಟಬೆಟ್ಟು – ‘ವೀರಮಣಿ ಕಾಳಗ’, ಯು. ಕಮಲಾ ಬಾಯಿ ಪ್ರೌಢಶಾಲೆ, ಕಡಿಯಾಳಿ – ‘ವಿದ್ಯುನ್ಮತಿ ಕಲ್ಯಾಣ’, ದಿನಾಂಕ 19-12-2023ರಂದು ಅನಂತೇಶ್ವರ ಪ್ರೌಢಶಾಲೆ, ಉಡುಪಿ – ‘ರುಕ್ಮಿಣಿ ಸ್ವಯಂವರ’, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಂಜಿಬೆಟ್ಟು – ‘ರತ್ನಾವತೀ ಕಲ್ಯಾಣ’, ದಿನಾಂಕ 20-12-2023ರಂದು ಸರಕಾರಿ ಪದವಿಪೂರ್ವ ಕಾಲೇಜು, ಮಲ್ಪೆ – ‘ವೈವಸ್ವತ ಗರ್ವಭಂಗ’, ನಿಟ್ಟೂರು ಪ್ರೌಢಶಾಲೆ, ಉಡುಪಿ – ‘ಜಾಂಬವತಿ ಕಲ್ಯಾಣ’ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನೀಡಿದರು.