ಮಂಗಳೂರು : ಕಲೆ, ಸಾಂಸ್ಕೃತಿಕ ಪರಂಪರೆಗಾಗಿ ಭಾರತೀಯ ರಾಷ್ಟ್ರೀಯ ಟ್ರಸ್ಟ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಹಯೋಗದಲ್ಲಿ ‘ದೃಶ್ಯ– ಬಾಂಧವ್ಯ’ ಎಂಬ ಶೀರ್ಷಿಕೆಯಡಿ ಕಲಾ ಪ್ರದರ್ಶನವನ್ನು ದಿನಾಂಕ :03-06-2023ರಿಂದ 10-06-2023ರವರೆಗೆ ಆಯೋಜಿಸಿದೆ. 2021ರಲ್ಲಿ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಗ್ರಾಮದಲ್ಲಿ ನಡೆದ ಕಲಾಶಿಬಿರದಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಗರದ ಬಲ್ಲಾಳ್ ಬಾಗಿನ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆರಂಭಗೊಂಡಿದೆ.
ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದ ಕ್ಯುರೇಟರ್ ಧನಲಕ್ಷ್ಮೀ ಅಮ್ಮಾಳ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರದರ್ಶನದಲ್ಲಿರುವ ವರ್ಣಚಿತ್ರಗಳ ಸಂಗ್ರಹವನ್ನು ಶ್ಲಾಘಿಸಿದರಲ್ಲದೆ ಶ್ರೀಮಂತಿ ಬಾಯಿ ವಸ್ತು ಸಂಗ್ರಹಾಲಯ, ಇಂಟಾಕ್ ಮತ್ತು ಆರ್ಟ್ ಕನರಾ ಟ್ರಸ್ಟ್ ನಡುವಿನ ಸಹಯೋಗದ ಸಾಧ್ಯತೆಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ಸಹಮತದ ಐವನ್ ಡಿ’ಸಿಲ್ವಾ ಅವರು 2021ರಲ್ಲಿ ನಡೆದ ಕಲಾ ಶಿಬಿರದ ಕಲ್ಪನೆ ಮತ್ತು ಅದರ ಮಹತ್ವವನ್ನು ವಿವರಿಸಿದರು. ಕಲಾವಿದ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಬಿ.ಸಿ. ಬಾಪು ದಿನೇಶ್ ಮಾತನಾಡಿ ಭವಿಷ್ಯದಲ್ಲಿ ಇದೇ ರೀತಿಯ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿದರು.
ಕೊಟ್ಟಗೆಹಾರದಲ್ಲಿ ನಡೆದ ಕಲಾ ಶಿಬಿರದಲ್ಲಿ ಕಲಾವಿದರಾದ ಹರೀಶ್ ಕೊಡಿಯಾಲಬೈಲ್, ಜೀವನ್ ಸಾಲ್ಯಾನ್, ಲಿಂಗರಾಜ್, ನಯನಾಮೃತ, ನೇಮಿರಾಜ್ ಶೆಟ್ಟಿ, ರಾಜೇಂದ್ರ ಕೇದಿಗೆ, ರೇಷ್ಮಾ ಎಸ್. ಶೆಟ್ಟಿ, ಸಂತೋಷ್ ಅಂದ್ರಾದೆ, ಸತೀಶ್ ಬಿ.ಆರ್, ಶ್ರೀಧರ್ ಎಂ., ಸುಲೋಚನಾ ವಿ, ಸುರೇಶಚಂದ್ರ ದತ್ತ, ಸುರೇಶ್ ಟಿ.ಡಿ., ವಿಲ್ಸನ್ ಸೋಜಾ, ವಿಶ್ವಾಸ್ ಎಂ. ಭಾಗವಹಿಸಿದ್ದರು. ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಶಚಂದ್ರ ಬಸು ಸ್ವಾಗತಿಸಿ, ನಿರೂಪಿಸಿದರು. ನೇಮಿರಾಜ್ ಶೆಟ್ಟಿ ಕಲಾ ಪ್ರದರ್ಶನದ ಬಗ್ಗೆ ಮಾತನಾಡಿ, ವಂದಿಸಿದರು.
ಕಲಾ ಪ್ರದರ್ಶನವು ಜೂನ್ 10ರವರೆಗೆ ಎಲ್ಲ ದಿನಗಳಲ್ಲೂ ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ತೆರೆದಿರುತ್ತದೆ.