ಕಡಬ : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಡಬ ತಾಲೂಕು ಮತ್ತು ಶ್ರೀ ಮಂಜುನಾಥೇಶ್ವರ ಮಹಿಳಾ ಭಜನಾ ಮಂಡಳಿ ಇದರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಹಾಗೂ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ಕೊಂಬಾರು ಮಣಿಭಾಂಡ ಮಂಜುಶ್ರೀ ಭಜನಾ ಮಂದಿರದಲ್ಲಿ ದಿನಾಂಕ : 18-06-2023ರಂದು ಜರಗಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಶ್ರೀ ರಾಮಚಂದ್ರ ಗೌಡ, “ದೇವರ ನಾಮ ಸಂಕೀರ್ತನೆಯಿಂದ ನಮಗೆ ಮಾನಸಿಕ ನೆಮ್ಮದಿ, ಭಗವಂತನ ಕೃಪಾಕಟಾಕ್ಷ ದೊರೆಯುತ್ತದೆ. ಪ್ರತಿ ಮನೆಗಳಲ್ಲಿಯೂ ನಾವು ದಿನಕ್ಕೆ ಒಂದು ಹೊತ್ತಿಗಾದರೂ ಮನೆ ಮಂದಿ ಎಲ್ಲರೂ ಸೇರಿ ಭಜನೆ ಹಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಮನೆ ಮಕ್ಕಳಿಗೂ ಭಜನೆಯ ಬಗ್ಗೆ ಆಸಕ್ತಿ ಮೂಡಿಸಬೇಕು” ಎಂದರು.
ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಆರಕ್ಷಕ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ, “ಭಜನೆ ಎನ್ನುವುದು ಮನೆ ಮತ್ತು ಮನಗಳನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ” ಎಂದರು. ವಿಹಿಂಪ ಕಡಬ ನಗರದ ಅಧ್ಯಕ್ಷ ಸತ್ಯನಾರಾಯಣ ಹೆಗ್ಡೆ ನಡುಮಜಲು ಮಾತನಾಡಿದರು. ಕೊಂಬಾರು ಮಣಿಭಾಂಡ ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಓಡಪ್ಪ ಗೌಡ ತೇರೆಬೀದಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಕಡಬ ತಾ.ಯೋ. ಮೇದಪ್ಪ ಗೌಡ ನಾವೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನ ಕಡಬ ತಾಲೂಕು ಅಧ್ಯಕ್ಷ ಸುಂದರ ಗೌಡ ಒಗ್ಗು ಬಿಳಿನೆಲೆ, ಪ್ರಸನ್ನಕುಮಾರ್ ಕೆ.ಎನ್. ಕುಮಾರಪುರ ಕಟ್ಟೆ, ಪರಮೇಶ್ವರ ಗೌಡ, ವಿಜಯಕುಮಾರ್ ನಡುತೋಟ ಮತ್ತು ವಿನೋದ್ ಕುಮಾರ್ ಉಪಸ್ಥಿತರಿದ್ದರು. ಭಜನಾ ತರಬೇತಿ ನೀಡಿದ ತರಬೇತುದಾರರನ್ನು ಗೌರವಿಸಲಾಯಿತು. ಪರಿಸರದ 8 ಭಜನಾ ತಂಡಗಳು ಕುಣಿತ ಭಜನೆಯಲ್ಲಿ ಭಾಗವಹಿಸಿದವು. ಸಂಧ್ಯಾ ಪೆರುಂದೋಡಿ ಸ್ವಾಗತಿಸಿ, ಚಿದಾನಂದ ಗೌಡ ದೇವುಪಾಲ್ ಪ್ರಸ್ತಾವನೆಗೈದರು. ಅಪೂರ್ವ ಚೇತನ್ ಕುಮಾರ್ ಪೆರುಂದೋಡಿ ನಿರೂಪಿಸಿ, ಮಮತಾ ಅಮ್ಚೂರು ವಂದಿಸಿದರು.