ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ದಿನಾಂಕ 26-03-2024ರ ಮಂಗಳವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ಫಾ. ಬೊನವೆಂಚರ್ ನಝರತ್ “ಜಾನಪದವು ಮೌಖಿಕ ಪರಂಪರೆಯ ವಾಹಕ. ಅದು ಸಂಸ್ಕೃತಿ, ಜಾತಿ, ಧರ್ಮ, ಪಂಥಗಳನ್ನು ಬೆಸೆಯುತ್ತದೆ. ಇಂಥ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕೊಂಕಣಿ ಭಾಷೆಯು ಬಾಂಧವ್ಯ ಬೆಸೆಯುವ ಕಲೆಯನ್ನು ಹೊಂದಿದ್ದು, ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷಾಭಿವೃದ್ಧಿಗೆ ಶ್ರಮಿಸುತ್ತಿದೆ. ಕೊಂಕಣಿ ಭಾಷಿಗರು ತಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯ ಬಗ್ಗೆ ಅಭಿರುಚಿ ಮೂಡಿಸಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ” ಎಂದರು.
ಕಥೋಲಿಕ್ ಬೋರ್ಡ್ ನಿಯೋಜಿತ ಕಾರ್ಯದರ್ಶಿ ಲಿಯೋ ಲಾಸ್ರಾದೊ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಆನ್ಸನ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಜಯವಂತ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಮುಂಬೈಯ ಜಾನಪದ ಕಾರ್ಯಕರ್ತ ವಿಲ್ಸನ್ ಪಿಂಟೊ ಆಷಯ ನುಡಿಗಳನ್ನಾಡಿದರು.
ಸಭಾಕಾರ್ಯಕ್ರಮದ ಬಳಿಕ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕುಲಶೇಖರದ ಐರಿನ್ ರೆಬೆಲ್ಲೋ ‘ಕೊಂಕಣಿ ಕ್ರಿಶ್ಚಿಯನ್ ಜಾನಪದ ಮತ್ತು ಭವಿಷ್ಯ’ ಹಾಗೂ ಮಂಗಳೂರಿನ ಬಿಂದುಮಾಧವ ಶೆಣೈ, ‘ಕೊಂಕಣಿ ಜಿ. ಎಸ್. ಬಿ. ಜಾನಪದ ಮತ್ತು ಭವಿಷ್ಯ’ ಬಗ್ಗೆ ಮಾತನಾಡಿದರು. ಮೂಡುಬಿದಿರೆ ಆಳ್ವಾಸ್ ಹೋಮಿ ಯೋಪಥಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೊ ಗೋಷ್ಠಿಯಲ್ಲಿ ಸಂಯೋಜಕರಾಗಿ ಭಾಗವಹಿಸಿದರು.
ಪ್ರಾಂಶುಪಾಲ ಫಾ. ಮೈಕೆಲ್ ಸಾಂತುಮಯೋರ್ ಸ್ವಾಗತಿ, ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರಾವ್ಯಾ ಎನ್. ಕಾರ್ಯಕ್ರಮ ನಿರೂಪಿಸಿ, ಸಂಯೋಜಕಿ ಟ್ರೆಸ್ಸಿ ಪಿಂಟೊ ವಂದಿಸಿದರು.