ಮಂಗಳೂರು: ನಗರದ ಅಂಬೇಡ್ಕರ್ ಭವನದಲ್ಲಿ 22-04-2023 ಶನಿವಾರ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಏಕಾಂತದಿಂದ ಲೋಕಾಂತರಕೆ’ ಗ್ರಂಥ ಲೋಕಾರ್ಪಣೆಯಾಯಿತು. ಕೃತಿ ಬಿಡುಗಡೆ ಮಾಡಿದ ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಮಾತನಾಡುತ್ತಾ ‘ನಮ್ಮಲ್ಲಿ ವಿವಿಧ ಜಾತಿ – ಧರ್ಮಗಳನ್ನು ಪ್ರತಿನಿಧಿಸುವ ಸಮುದಾಯಗಳಿವೆ. ಆದರೆ ಸಾಹಿತ್ಯ ಜಾತ್ಯತೀತವಾದುದು. ಸಾರ್ವಕಾಲಿಕ ಮೌಲ್ಯಗಳ ದಾಖಲಾತಿಯೊಂದಿಗೆ ಸಮಾಜದ ಕಣ್ತೆರೆಸುವ ಸಾಹಿತ್ಯ ಕೃತಿಗಳು ಬರಬೇಕು. ಆಧುನಿಕ ಯುವ ಸಮುದಾಯದಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸುವ ಸಲುವಾಗಿ ಉತ್ತಮ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಏಕಾಂತದಿಂದ ಲೋಕಾಂತರಕೆ’ ಕೃತಿಯ ಇಂಗ್ಲಿಷ್ ರೂಪಾತರವು ಬರುವಂತಾಗಲಿ” ಎಂದು ಅವರು ಹಾರೈಸಿದರು.
ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಹಿರಿಯ ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಾಂತರ್ಗತವಾದ ತುಳುನಾಡಿನ ಬಹುರೂಪೀ ಚಿತ್ರಣಗಳನ್ನು ಅನಾವರಣಗೊಳಿಸಲು ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಒಟ್ಟು 100 ಯಾನಗಳಾಗಿ ವಿಂಗಡಿಸಿರುವ ಬರಹಗಳಲ್ಲಿ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ವಿಷಯಗಳು ಸಿಂಹ ಪಾಲು ಪಡೆದಿವೆ” ಎಂದರು. ಈ ಕೃತಿಗೆ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಬೆನ್ನುಡಿ ನೀಡಿದ್ದಾರೆ.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಶುಭಾಶಂಸನೆ ಮಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ, ಎಜೆ ಸಮೂಹ ಸಂಸ್ಥೆಗಳ ಡಾ. ಎ.ಜೆ. ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಡಾ. ಎಂ. ಮೋಹನ ಆಳ್ವ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸವಣೂರು ಸೀತಾರಾಮ ರೈ, ದ.ಕ. ಜಿಲ್ಲಾ ಹಾಲುತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸಿ.ಎ. ಸುಧೀರ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಕೋಲಾರು ಸತೀಶ್ಚಂದ್ರ ಭಂಡಾರಿ, ಸಿಟಿ ಆಸ್ಪತ್ರೆ ಆಡಳಿತ ನಿರ್ದೇಶಕ ಭಾಸ್ಕರ ಶೆಟ್ಟಿ , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಥಾಣೆ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ, ಸದಾಶಯ ತ್ರೈಮಾಸಿಕದ ಉಪ ಸಂಪಾದಕ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಅತಿಥಿಗಳಾಗಿದ್ದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿ, ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ವಂದಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.