ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 25-01-2024ರಂದು ನಡದ ಕುಮಾರ ವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡುತ್ತಾ “ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬರಾದ ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. ‘ಗದುಗಿನ ನಾರಣಪ್ಪ’ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಕುವೆಂಪು ‘ಕುಮಾರ ವ್ಯಾಸ ಯುಗ’ವೆಂದು ಕರೆದಿದ್ದು ಅದು ರೂಪಿಸಿದ ಪರಂಪರೆಯ ಹಿನ್ನೆಲೆಯಲ್ಲಿ ಎಂದು ಅಭಿಪ್ರಾಯಪಟ್ಟರು.
“ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ. ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವ ಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲಾ ಪಾತ್ರಗಳು ಅದರದೇ ರೀತಿಯಲ್ಲಿ ಮಾತನಾಡುತ್ತದೆ, ಬೈಯುತ್ತದೆ, ನಗುತ್ತದೆ ಹಾಗೂ ಅಳುತ್ತದೆ ಸಹ. ಕುಮಾರವ್ಯಾಸ ಆಳವಾದ ದೈವಭಕ್ತ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ಗದುಗಿನ ವೀರ ನಾರಾಯಣನ ಎದುರು ಒದ್ದೆ ಬಟ್ಟೆಯುಟ್ಟು ಅದು ಒಣಗುವವರೆಗೂ ಕುಮಾರ ವ್ಯಾಸ ಬರೆಯುತ್ತಿದ್ದನೆಂಬ ನಂಬಿಕೆ ಇದೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಕೇವಲ ಎರಡು ರೂಪಾಯಿ ಬೆಲೆಯಲ್ಲಿ ಕುಮಾರ ವ್ಯಾಸ ಭಾರತವನ್ನು ಪ್ರಕಟಿಸಿ ನಾಡಿನ ಮೂಲೆ ಮೂಲೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಗಮಕಿಗಳು ನಾಡಿನೆಲ್ಲೆಡೆ ಕುಮಾರ ವ್ಯಾಸನನ್ನು ತಲುಪಿಸಲು ಇದು ಕಾರಣವಾಯಿತು” ಎಂದು ನಾಡೋಜ ಡಾ. ಮಹೇಶ ಜೋಶಿಯವರು ಹೇಳಿದರು.
ಹಿರಿಯ ಬರಹಗಾರರಾದ ಪ್ರೊ. ಕೆ.ಎಸ್. ಭಗವಾನ್ ಅವರು ಮಾತನಾಡಿ “ಕನ್ನಡದ ಪುಣ್ಯ ಪ್ರತಿ ಕಾಲಘಟ್ಟದಲ್ಲಿಯೂ ಪಂಪ, ಬಸವಣ್ಣ, ಕುಮಾರ ವ್ಯಾಸ, ಕುವೆಂಪು ಮಹಾಕವಿಗಳಾಗಿ ಹುಟ್ಟಿ ಬಂದಿದ್ದಾರೆ. ಕುವೆಂಪು ಅವರು ವರ್ಣಿಸಿದಂತೆ ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು. ಕುಮಾರ ವ್ಯಾಸನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ತ.ಸು.ಶಾಮರಾಯರು ‘ಕುಮಾರ ವ್ಯಾಸ ನಿಘಂಟ’ನ್ನು ರಚಿಸಿದ್ದು ಅದು ಎಲ್ಲರಿಗೂ ತಲುಪುವಂತೆ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಕುಮಾರ ವ್ಯಾಸ ಜನ ಸಾಮಾನ್ಯರನ್ನು ಪೌರಾಣಿಕತೆಯ ಎತ್ತರಕ್ಕೆ ಏರಿಸಿದ ಕವಿ. ಅವನ ಪಾತ್ರಗಳು ಸರಳವಾಗಿ ಸಹಜವಾಗಿ ಜನರಿಗೆ ಸ್ಪಂದಿಸಿದವು ಇಲ್ಲಿ ಶ್ರೀಕೃಷ್ಣ ‘ಪಾರ್ಥನ ಬಂಡಿಯ ಬೋವ’ನಾಗುತ್ತಾನೆ, ಭೀಷ್ಮರೆದುರು ಚಕ್ರವ ಬಿಚ್ಚಿದವ ‘ನಾಚಿ ಮುಚ್ಚುತ್ತಾನೆ’ ಇದು ಬೃಹತ್ ಮತ್ತು ಮಹತ್ ಎರಡನ್ನೂ ಒಂದುಗೂಡಿಸಿಕೊಂಡ ಕಾವ್ಯ” ಎಂದು ಹೇಳಿ ಕೆಲವು ಕುತೂಹಲಕರ ಪದ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಮಾರ ವ್ಯಾಸನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.