ಮಂಗಳೂರು : ಕೇದಿಗೆ ಪ್ರತಿಷ್ಠಾನ ಮಂಗಳೂರು ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೀಜನ್ ಸಹಯೋಗದೊಂದಿಗೆ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 17 ಆಗಸ್ಟ್ 2024ರಂದು ನಡೆಯಿತು.



ಕೇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ ನಿವೃತ್ತ ಸೇನಾನಿ ವಿಕ್ರಂ ದತ್ತಾ ಅವರಿಗೆ ರಾಷ್ಟ್ರ ಸೇವಾ ನಿಷ್ಠ, ಸಂಘಟಕ ಸುಧಾಕರ ರಾವ್ ಪೇಜಾವರ ಅವರಿಗೆ ಸಮಾಜ ಸೇವಾ ನಿಷ್ಠ, ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ಚಿತ್ರಕಲಾ ನಿಷ್ಠ, ಕೃಷಿಕ ದಯಾಪ್ರಸಾದ್ ಚೀಮುಳ್ಳು ಅವರಿಗೆ ಕೃಷಿ ಕ್ಷೇತ್ರ ನಿಷ್ಠ, ಕಲಾವಿದ ಎಲ್ಲೂರು ರಾಮಚಂದ್ರ ಭಟ್ ಅವರಿಗೆ ಯಕ್ಷಗಾನ ಕಲಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.




ಮಂಗಳೂರಿನ ಕೇದಿಗೆ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಕೇದಿಗೆ ಅರವಿಂದ ರಾವ್ ಇವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ಅಧ್ಯಕ್ಷರಾದ ಚಿತ್ರಕುಮಾರ್, ಮಹಿಳೆಯೊಬ್ಬರಿಗೆ ಹೊಲಿಗ ಯಂತ್ರ ವಿತರಿಸಿದರು. ಸಂಘದ ವತಿಯಿಂದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೀಜನ್‌ನ ತ್ರೈಮಾಸಿಕ ಸಂಚಿಕೆ ಬಿಡುಗಡೆಗೊಳಿಸಿದರು.


ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಮಂಗಳೂರು ಲೀಜನ್ ಅಧ್ಯಕ್ಷ ದತ್ತಾತ್ರೇಯ ಬಾಳ, ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್ ಶುಭ ಹಾರೈಸಿದರು. ಅಶೋಕ್ ಎಂ.ಕೆ., ಗಾಯತ್ರಿ ಅರವಿಂದ ರಾವ್, ಸುಜಾತಾ ಸುವರ್ಣ, ಡಾ.ನಾಗೇಶ್ವರಿ, ರವಿ ಎಚ್.ಎನ್., ಹರೀಶ್.ಆರ್., ಸುನಂದಾ ಶಿವರಾಂ ಸನ್ಮಾನಪತ್ರ ವಾಚಿಸಿದರು.


ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಉಪಸ್ಥಿತರಿದ್ದರು. ಹರೀಶ ಎ. ವಂದಿಸಿ, ಅರೆಹೊಳೆ ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಲೀಜನ್ ಸದಸ್ಯರು ಆಟಿ ಸಂಭ್ರಮ ಮತ್ತು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದರು. ‘ಆಟಿ’ ಅಂದು ಇಂದು ಮುಂದೆ ? ಎಂಬ ಬಗ್ಗೆ ಹರೀಶ ಎ. ಅವರು ಉಪನ್ಯಾಸ ನೀಡಿದರು.