ಮಂಗಳೂರು : ಮಹಿಳಾ ತಾಳಮದ್ದಳೆ ಬಳಗ ‘ಯಕ್ಷ ಮಂಜುಳಾ ಕದ್ರಿ’ ಇದರ ವತಿಯಿಂದ ಇತ್ತೀಚೆಗೆ ಅಗಲಿದ ತೆಂಕುತಿಟ್ಟಿನ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಇವರಿಗೆ ನುಡಿ ನಮನ ಕಾರ್ಯಕ್ರಮ ದಿನಾಂಕ 15 ಡಿಸೆಂಬರ್ 2024 ರಂದು ‘ಯಕ್ಷ ಮಂಜುಳಾ ಕದ್ರಿ’ ಇದರ ಅಧ್ಯಕ್ಷೆಯಾದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಇವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿದ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನಕ್ಕೆ ಒಬ್ಬರೇ ಲೀಲಕ್ಕ…. ಪತಿ ಕಲಾಗುರು ಹರಿನಾರಾಯಣ ಬೈಪಡಿತ್ತಾಯರ ಪ್ರೋತ್ಸಾಹ- ಮಾರ್ಗದರ್ಶನದಲ್ಲಿ ಅರಳಿ, ಉತ್ತಮ ಕಲಾವಿದೆಯಾದ ಇವರು ಯಕ್ಷಗಾನ ಮೇಳದಲ್ಲಿ ವೃತ್ತಿಪರ ಭಾಗವತರಾಗಿ ದಾಖಲೆ ನಿರ್ಮಿಸಿದವರು. ಈ ಪತಿ – ಪತ್ನಿ ಜೋಡಿ ಅಪೂರ್ವ” ಎಂದರು.
‘ಯಕ್ಷ ಮಂಜುಳಾ ಕದ್ರಿ’ ಇದರ ಅಧ್ಯಕ್ಷೆಯಾದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಮಾತನಾಡಿ “ಯಕ್ಷಗಾನ ಕ್ಷೇತ್ರದ ಗಾನಸರಸ್ವತಿಯಾಗಿ ತನ್ನ ಕಂಠ ಸಿರಿಯಿಂದ ಹೊಸ ಶಕೆಯನ್ನು ಆರಂಭಿಸಿದ ಸಾಧಕ ಶ್ರೇಷ್ಠ ಮಹಿಳಾ ಮಣಿ ಲೀಲಾವತಿ ಬೈಪಡಿತ್ತಾಯ. ಯಕ್ಷ ಮಂಜುಳಾ ಬಳಗದ ಭಾಗವತರಾಗಿದ್ದ ಲೀಲಕ್ಕ ನಮಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು.” ಎಂದು ಸಂತಾಪ ವ್ಯಕ್ತಪಡಿಸಿದರು.
ಸ್ಥಾಪಕ ಸದಸ್ಯೆ, ಕರ್ಣಾಟಕ ಬ್ಯಾಂಕ್ ಇದರ ಜನರಲ್ ಮ್ಯಾನೇಜರ್ ಸುಮನಾ ಘಾಟೆ ಮಾತನಾಡಿ “ಲೀಲಕ್ಕನ ವಿನಯತೆ, ಮುಗ್ಧತೆ, ಧೈರ್ಯ, ಸ್ಫೂರ್ತಿ ಅನನ್ಯವಾದುದು.” ಎಂದರು.
ಯಕ್ಷಗುರು ರವಿ ಅಲೆವೂರಾಯ ವರ್ಕಾಡಿ ಮಾತನಾಡಿ “ಜೀವನದ ಎಲ್ಲಾ ಅಡೆತಡೆಗಳನ್ನು ಮೀರಿ ಸಾಮಾಜಿಕ ಬೇಲಿಗಳನ್ನು ದಾಟಿ ಇತಿಹಾಸ ನಿರ್ಮಿಸಿದ ಏಕೈಕ ಸಾಧಕಿ ಲೀಲಕ್ಕ. ಯಕ್ಷ ರಂಗಕ್ಕೊಂದು ಹಿಮ್ಮೇಳದ ಆದರ್ಶ ದಾಂಪತ್ಯ ಇವರದ್ದು.” ಎಂದು ಹೇಳಿದರು.
ಸದಸ್ಯೆ ಅರುಣಾ ಸೋಮಶೇಖರ್ ಸ್ಮರಿಸಿದರು. ಯಕ್ಷ ಮಂಜುಳಾದ ಪ್ರಭಾಕರ ರಾವ್ ಪೇಜಾವರ, ಮಧುಸೂದನ ಅಲೆವೂರಾಯ, ಸುಚೇತಾ ಜೋಶಿ, ರೂಪಾ ರಾಧಾಕೃಷ್ಣ, ಶೈಲಜಾ ಶ್ರೀಕಾಂತ್ ರಾವ್, ಅನುಪಮಾ ಅಡಿಗ, ಸುಧಾ ವಿ. ರಾವ್, ಶೋಭಾ ಪೇಜಾವರ, ನಿವೇದಿತಾ ಶೆಟ್ಟಿ ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Next Article ‘ಮುಂಬಯಿ ಮತ್ತು ಮಹಿಳೆ’ ಕೃತಿ ಲೋಕಾರ್ಪಣೆ | ಡಿಸೆಂಬರ್ 24
Related Posts
Comments are closed.