ಸುಳ್ಯ : ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಮತ್ತು ಸನ್ಮಾನ ಸಮಾರಂಭವು ದಿನಾಂಕ 12 ನವೆಂಬರ್ 2024ರಂದು ಸುಳ್ಯದ ಹಳೆಗೇಟಿನ ಶಿವಕೃಪಾ ನಿಲಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಭಾಗವಹಿಸಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಸಾಧಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಧಾಕೃಷ್ಣ ಉಳಿಯತ್ತಡ್ಕ, ಸುಭಾಸ್ ಪಂಜ, ಬಾಲಕೃಷ್ಣ ನೆಟ್ಟಾರು, ರಚನಾ ಚಿದ್ಗಲ್ಲು ಹಾಗೂ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ. ಗೋಕುಲ್ ದಾಸ್ ಇವರುಗಳನ್ನು ಸನ್ಮಾನಿಸಲಾಯಿತು. ಗಾಯಕರಾದ ವಿಜಯಕುಮಾರ್ ಮತ್ತು ಸಂಧ್ಯಾ ಮಂಡೆಕೋಲುರವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಆತಿಥ್ಯ ನೀಡಿದ ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ- ಬಾಲಚಂದ್ರರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕ.ಸಾ.ಪ. ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕ.ಸಾ.ಪ. ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಕ.ಸಾ.ಪ. ಗೌರವ ಕೋಶಾಧಿಕಾರಿ ದಯಾನಂದ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚಂದ್ರಮತಿ ಸ್ವಾಗತಿಸಿ, ತೇಜಸ್ವಿ ಕಡಪಳ ವಂದಿಸಿ, ಕ.ಸಾ.ಪ. ನಿರ್ದೇಶಕಿ ಲತಾ ಶ್ರೀ ಸುಪ್ರೀತ್ ಮೋಂಟಡ್ಕ ನಿರೂಪಿಸಿದರು.