ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಹಾಗೂ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರೊಂದಿಗೆ ಮಾತುಕತೆ ಸಂವಾದ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಕಿನ್ನಿಗೋಳಿ ಎಳತ್ತೂರು ಗುತ್ತಿನಲ್ಲಿ ನಡೆಯಿತು.
ಇಂದಿರಾ ಹೆಗ್ಗಡೆಯವರು ಬಾಲ್ಯದ ತಮ್ಮ ನೆನಪುಗಳನ್ನು ಅಕ್ಕರೆಯಿಂದ ಹಂಚಿಕೊಂಡರು. ತಾವು ಸಾಹಿತಿಯಾಗಿ ರೂಪುಗೊಂಡ ಹಾಗೂ ಇತಿಹಾಸ ಸಂಶೋಧಕ ಪ್ರೊ. ಎಂ. ಚಿದಾನಂದ ಮೂರ್ತಿಯವರ ಮಾರ್ಗದರ್ಶನ ಪಡೆದು ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ ಕ್ರಮಗಳನ್ನು ತಿಳಿಸಿದರು.
ಹಿರಿಯ ಸಾಹಿತಿ ಹಾಗೂ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರು ಪ್ರಸಕ್ತ ಸಂದರ್ಭದಲ್ಲಿ ಜನಪದ ಆಚರಣೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉಲ್ಲೇಖಿಸಿ ಮಾತುಕತೆ ನಡೆಸಿದರು. ಮೂಡಬಿದ್ರಿ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ಸುಧಾರಾಣಿ ಮಾತನಾಡಿ “ಸ್ತ್ರೀ ಪರ ಚಿಂತನೆ ಹಾಗೂ ಜನಪರ ನಿಲುವು ಮೂಲಕ ಜಾನಪದ ಸಂಸ್ಕೃತಿಯ ಆಳವಾದ ಅಧ್ಯಯನದ ಮೂಲಕ ಸಂಶೋಧನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆಯನ್ನು ಇಂದಿರಾ ಹೆಗ್ಗಡೆ ಮಾಡಿದ್ದಾರೆ” ಎಂದರು.
ಎಸ್.ಆರ್. ಹೆಗ್ಡೆ ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ “ಸಾಹಿತಿಯಾಗಿ ರೂಪುಗೊಂಡ ಇಂದಿರಾ ಹೆಗ್ಗಡೆ ಸಂಶೋಧಕಿಯಾಗಿ ರೂಪುಗೊಂಡ ಸತ್ಯಗಳ ಹುಡುಕಾಟ ಹಾಗೂ ಹೊಸ ಹೊಳಹು ಮೂಲಕ ತುಳುನಾಡಿನಲ್ಲಿ ಹೊಸ ಹೊಸ ವಿಚಾರಗಳ ಅನ್ವೇಷಣೆಗೆ ಹಾದಿ ಸೃಷ್ಟಿಸಿದ್ದಾರೆ” ಎಂದರು.
ಗುತ್ತಿನಾರ್ ಬಾಲಕೃಷ್ಣ ಯಾನೆ ಶಂಕರ ರೈ ಹಾಗೂ ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಇಂದಿರಾ ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು. ಸಂತೋಷ್ ಹೆಗ್ಡೆ ಸ್ವಾಗತಿಸಿ, ಲಾವಣ್ಯ ಶೆಟ್ಟಿ ಕವನಗಳನ್ನು ಹಾಡಿದರು. ಎಸ್.ಆರ್. ಹೆಗ್ಡೆ ಚಾರಿಟಬಲ್ ಟ್ರಸ್ಟ್ ಕೋಶಾಧಿಕಾರಿ ಜ್ಯೋತಿ ಚೇಲ್ಯಾರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ ಕಾರ್ಯಕ್ರಮ ನಿರ್ವಹಿಸಿದರು. ಬೆನೆಟ್ ಅಮ್ಮನ್ನ, ದೇವಿಕಾ ನಾಗೇಶ್, ರೂಪಕಲ ಆಳ್ವ, ಸರಿತಾ ಹೆಗ್ಡೆ, ಸುಜಾತ, ಉದಯ ಕುಮಾರ್ ಹಬ್ಬು ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.