ಕಾಸರಗೋಡು : ಒಂದು ವಿಶಿಷ್ಟ ಕಾಲಘಟ್ಟದ ಸಾಂಸ್ಕೃತಿಕ- ಸಾಹಿತ್ಯಕ ಮತ್ತು ಭಾಷಾ ಸಂಬಂಧಿ ಅಗತ್ಯಗಳನ್ನು ಮನಗಂಡು ದುಡಿಯುವ ಕೆಲವರು ಚರಿತ್ರೆಯ ಭಾಗವಾಗುತ್ತಾರೆ. ಅಂಥವರನ್ನು ಆ ಪರಿಸರ ಮರೆಯುವುದಿಲ್ಲ. 1943ರಲ್ಲಿ ನೀರ್ಚಾಲಿನಲ್ಲಿ ಜನ್ಮವೆತ್ತಿ ಅಂದಿನ ಪ್ರತಿಕೂಲ ದಿನಮಾನದಲ್ಲಿಯೂ ವಿದ್ಯಾಸಂಪನ್ನನಾಗಿ ಕಾಸರಗೋಡಿಗೇ ಮೊದಲನೆಯದಾದ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲನಾಗಿ ಜೊತೆಗೆ ಕವಿ ಸಾಹಿತಿ ವಿಮರ್ಶಕನಾಗಿ ಹೀಗೆ ವಿವಿಧ ರಂಗಗಳಲ್ಲಿ ಮಾದರಿ ವ್ಯಕ್ತಿತ್ವವೆನಿಸಿ ತನ್ನ 52ನೇ ವಯಸ್ಸಿಗೆ ವಿದಾಯ ಹೇಳಿದ ದಿ. ಗಂಗಾಧರ ಭಟ್ ಎಂದಿಗೂ ಸ್ಮರಣಾರ್ಹರು. ಕಾಸರಗೋಡು ರಂಗ ಚಿನ್ನಾರಿ ಸಂಸ್ಥೆ ದಿನಾಂಕ 28 ಅಕ್ಟೋಬರ್ 2025ರಂದು ಆಯೋಜಿಸಿದ ಸಂಸ್ಮರಣ ಕಾರ್ಯಕ್ರಮದಲ್ಲಿ ಸ್ವಾಗತ ಹೇಳಿದ ಚಿನ್ನಾ, ಕಾಸರಗೋಡು ಹಿರಿಯ ವಿಶ್ರಾಂತ ಶಿಕ್ಷಕ, ಸಣ್ಣಕತೆಗಾರ, ಸಾಹಿತಿ ವೈ. ಸತ್ಯನಾರಾಯಣ ಹಾಗೂ ಪಿ.ಎನ್. ಮೂಡಿತ್ತಾಯರು ಕಾಸರಗೋಡು ಕನ್ನಡಿಗರ ಸ್ಮರಣೆಯಲ್ಲಿ ಎಂದಿಗೂ ಅಳಿಯಬಾರದ ಧೀಮಂತನ ಬಗ್ಗೆ ನೆನಪಿಸಿಕೊಂಡರು.


ಇಂಗ್ಲೀಷ್ ಎಂ.ಎ. ಓದಿದ ಗಂಗಾಧರ ಭಟ್ ಕಾಸರಗೋಡು ಕನ್ನಡಿಗರ ಸಮ್ಮೇಳನ ಹಾಗೂ 1978ರ ಅದ್ದೂರಿ ಯುವಜನ ಸಮ್ಮೇಳನಗಳಲ್ಲಿ ಕಾರ್ಯದರ್ಶಿಯಾಗಿ ದುಡಿದವರು. ಉದಯವಾಣಿಯಲ್ಲಿ ಬಹುಕಾಲ ಪುಸ್ತಕ ವಿಮರ್ಶೆ ಮಾಡುತ್ತಾ ಬಂದರೆ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಕೆನರಾ ಟೈಂಸ್ ಗೆ ಬಾತ್ಮೀದಾರರಾಗಿಯೂ ಮಿಂಚಿದರೆಂಬುದನ್ನು ಸತ್ಯನಾರಾಯಣರು ಸ್ಮರಿಸಿಕೊಂಡರು.

‘ಮುಪ್ಪಿಲ್ಲ ನೆನಪುಗಳಿಗೆ’, ‘ನೆರಳು’ ಮತ್ತು ‘ನಾಕನರಕ’ ಎಂಬ ಮೂರು ಕವನ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಚಳುವಳಿಗೆ ಪ್ರೇರಕ ಶಕ್ತಿಯಾಗಿಯೂ ಆ ಸಂಧಿಕಾಲದಲ್ಲಿ ಕಾಸರಗೋಡಿನಲ್ಲಿ ನವ್ಯ ಸಾಹಿತ್ಯ ಸಂಘವನ್ನು ಹಾಗೂ ಶ್ರೀಶ ದೇವಪೂಜಿತ್ತಾಯ ಅವರೊಂದಿಗೆ ಮುನ್ನಡೆಸಿ ಕೆಲವು ಕೃತಿ ಪ್ರಕಟಣೆಗೂ ಕಾರಣರಾದ ಬಗ್ಗೆ ಪ್ರೊ ಪಿ.ಎನ್. ಮೂಡಿತ್ತಾಯ ವಿವರಿಸಿದರು.

ಶ್ರೀ ಸತೀಶ್ಚಂದ್ರ ಭಂಡಾರಿ ವಂದಿಸಿದರು. ಹೆಸರಾಂತ ನಿರ್ಮಾಪಕ ಹಾಗೂ ಈ ಟಿವಿಯ ಪ್ರವರ್ತಕ ಕೆ.ಎಸ್. ಶ್ರೀಧರ್, ಚಲನಚಿತ್ರ ವಿತರಕ ನಿರ್ಮಾಪಕ ಟಿ.ಎ. ಶ್ರೀನಿವಾಸ್, ಗಣೇಶ ಪ್ರಸಾದ ಪಾಣೂರು, ಶಂಕರನಾರಾಯಣ ಭಟ್ ತೆಕ್ಕೆಕ್ಕರೆ ಡಾಕ್ಟರ್ ಯು. ಮಹೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
