ದಪ್ಪ ಮೀಸೆಯ ಅವಳಪ್ಪನ ಅಮಲು ಕಣ್ಣುಗಳಲಿ
ಕದಡಿದ ನೆಮ್ಮದಿಯ
ಹುಡುಕಿ ಸೋತಿದ್ದಾಳೆ!
ಅಪ್ಪನ ಸೀಸೆಯ
ಕಡು ಕಂದು ನೀರಿಗೆ
ಅವಳ ಕಣ್ಣೀರಿನ ದಾಹ
ತೀರಬಹುದೆಂದು
ಕಾದಿದ್ದಾಳೆ!
ನಿನ್ನೆಯ ಕನಸಿಗೆ ನಾಳೆಗಳಿಲ್ಲ
ಇಂದಿನ ಬದುಕಿಗೆ ಆಸರೆಯಿಲ್ಲ
ಕುಡುಕನಮಗಳು ಚುಚ್ಚುವರೆಲ್ಲ
ಸ್ನೇಹಿತರಿಲ್ಲ ಬಂಧುಗಳಿಲ್ಲ
ಅವಳು ತಲೆ ಎತ್ತಿ ಬದುಕುವುದನ್ನೇ
ಮರೆತಿದ್ದಾಳೆ!
ಸೀಸೆಯ ನೀರಿಗೆ
ಬೆಂಕಿಯ ಸೇಡು
ಸುಟ್ಟಿದೆ ಬದುಕು
ಬೆಂದಿದೆ ಭಾವ
ಹೂವಿನಂತಹ ಹುಡುಗಿ
ಮುದುಡಿದ್ದಾಳೆ!
ಬಣ್ಣಗೆಟ್ಟ ಅವಳ ಕಥೆಗಳು
ಯಾರೋ ಕೇಳುತ್ತೇನೆ ಅನ್ನುತ್ತಾರೆ
ಅಪಾತ್ರರ ಕಣ್ಣ
ಅನುಕಂಪಕ್ಕೆ ಮಿಡಿಯುತ್ತಾಳೆ!
ಎಲ್ಲರಲ್ಲೂ ಅಪ್ಪನನ್ನು
ಹುಡುಕಿ ಸೋಲುತ್ತಾಳೆ!
ಬಣ್ಣ ತುಂಬುತ್ತೇನೆಂದು ಬಂದವರು ಮಸಿಯ ಬಳಿಯುತ್ತಾರೆ
ಹೃದಯ ಒಡೆಯುತ್ತಾರೆ
ಎಂದೂ ಮುಗಿಯದ
ಏಕಾಂಗಿ ಅವಳ ಕವಿತೆಗೆ
ಹೆಸರು ಯಾಕೆ ಅನ್ನುತ್ತಾಳೆ!
ಅವಳು ಮಾತು ಮತ್ತು
ನಗುವುದನ್ನು ಮರೆತಿದ್ದಾಳೆ!
ಅನುಕಂಪ ಸುಡುಗಾಡು
ಅನುಭೂತಿ ಬಿಡುಗಡೆಯನ್ನುತ್ತಾಳೆ!!
-ಅಕ್ಷತಾ ಪ್ರಶಾಂತ್
ಕವಯಿತ್ರಿ/ಆಪ್ತಸಮಾಲೋಚಕಿ/
ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ