ಬೆಂಗಳೂರು : ಈ ಹೊತ್ತಿಗೆ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ, ‘ಸಾಹಿತ್ಯ ಅಕಾಡೆಮಿ ನವದೆಹಲಿ’ಯವರ ಸಹಯೋಗದೊಂದಿಗೆ ನಡೆಸಿದ, ‘ಮಧುರ ಚೆನ್ನರ ಕಾವ್ಯ ಮಾಧುರ್ಯ’ – ಕವನ ವಾಚನ ಮತ್ತು ವಿಶ್ಲೇಷಣೆಯ ಕಾರ್ಯಕ್ರಮ ದಿನಾಂಕ 14-05-2023ರಂದು ಜಯನಗರದ ಸಿರಿಸಂಪಿಗೆಯಲ್ಲಿ ನಡೆಯಿತು.
”ಭಾವ, ಭಾಷೆ, ಲಯ ಮುಂತಾದವುಗಳಿಂದ ಅತ್ಯುತ್ತಮ ಕನ್ನಡ ಕವನಗಳನ್ನು ನೀಡಿದ, ಹೊಸಗನ್ನಡ ಕಾವ್ಯಕ್ಕೆ ಜಾನಪದ ಸತ್ವವನ್ನು ತುಂಬಿ ಆತ್ಮಚಿಂತನೆಯ ಅನುಭಾವ ಮಾರ್ಗದಲ್ಲಿ ಅದನ್ನು ನಡೆಸಿಕೊಂಡು ಹೋಗಿ ಕೃತಕೃತ್ಯರಾದ ಮಧುರಚೆನ್ನರು ಎಂದಿಗೂ ಮಾಸದಂತಹುದು” ಅನ್ನುವ ಚನ್ನವೀರ ಕಣವಿಯವರ ವಿಮರ್ಶೆಯಂತೆ ಇಂದು ಮಧುರ ಚೆನ್ನರ ಕವನ ವಾಚನ ಹಾಗೂ ವಿಶ್ಲೇಷಣೆಯನ್ನ, ಕಾವ್ಯ ಮಾಧುರ್ಯವನ್ನು ಪ್ರೊ. ಜಿ. ಅಶ್ವತ್ಥನಾರಾಯಣ, ಸುಮಾ ಅನಿಲ್, ದಾದಾಪೀರ ಜೈಮುನ್, ರೇಣುಕಾ ಕೋಡಗಂಟಿ, ಚೈತ್ರಾ ಶಿವಯೋಗಿಮಠ, ಪ್ರವೀಣ್ ಕುಮಾರ್ ಜಿ. ಹಾಗೂ ಈ ಹೊತ್ತಿಗೆಯ ಸಂಸ್ಥಾಪಕಿ, ರೂವಾರಿ ಜಯಲಕ್ಷ್ಮಿ ಪಾಟೀಲ್ ರವರು ನೀಡಿದರು.
ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಮಾತನಾಡಿ, ಮಧುರ ಚೆನ್ನರ ಅನ್ವರ್ಥನಾಮದಂತೆ ‘ಅವರ ಬದುಕು ಮಧುರ, ಅವರ ಸಾಹಿತ್ಯ/ಕಾವ್ಯ ಚೆನ್ನ’ ಎಂದು ಹೇಳಿದರು. ಜನಪದ ಸಾಹಿತ್ಯವನ್ನು ಸಂಶೋಧನೆ ಮಾಡಿ ಅದನ್ನು ಪ್ರಕಟಿಸಿರುವುದು ಒಂದು ಗಮನಾರ್ಹ ಸಂಗತಿ ಎನ್ನುತ್ತಾ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಧುರ ಚೆನ್ನರ ಸಾಹಿತ್ಯ ಎಷ್ಟು ಮಹತ್ವದ್ದು ಎಂದುದನ್ನು ತಿಳಿಸಿದರು.
ಜಯಲಕ್ಶ್ಮೀ ಪಾಟೀಲರು ಮಾತನಾಡುತ್ತಾ ಮಧುರ ಚೆನ್ನರ ಬದುಕು, ಬರಹ, ಅನುಭವ, ಅನುಭಾವ, ಬೇಂದ್ರೆ ಮತ್ತು ಅವರ ನಡುವಿನ ಅಪರೂಪದ ಗೆಳೆತನ, ಪರಸ್ಪರ ಒಬ್ಬರ ಮೇಲೊಬ್ಬರ ಮೇಲೆ ವ್ಯಕ್ತಪಡಿಸಿರುವ ರೀತಿಯನ್ನು ಬಹಳ ಸೊಗಸಾಗಿ ತಿಳಿಸಿಕೊಟ್ಟರು.
ಸುಮಾ ಅನಿಲ್ ಅವರು ‘ಶೃತಾಶೃತ ವೀಣಾರವ’ ಕವನ ವಾಚನ ಮಾಡಿ, ‘ಬರುವುದೇನು ಉಂಟು ಒಮ್ಮೆ, ಬರುವ ಕಾಲಕೆ ಬಹುದು, ಬಯಕೆ ಬರುವುದರ ಕಣ್ಸನ್ನೆ ಕಾಣು’ ಎನ್ನುವ ಮಧುರ ಚೆನ್ನರ ಒಳಗಿನ ದೃಷ್ಟಿಯನ್ನು ಕಟ್ಟಿಕೊಡುವ ಕವನದ ವಿಮರ್ಶೆಯನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದರು.
ರೇಣುಕಾ ಕೊಡಗಂಟಿಯವರು – ‘ಸುಖ-ದು:ಖ’ ಕವನ ವಾಚನ ಮಾಡಿ, ಸುಖವಾಗಲಿ ದುಃಖವಾಗಲಿ ಯಾವುದೂ ಶಾಶ್ವತವಲ್ಲ ಜೀವನದಲ್ಲಿ ಎನ್ನುವುದನ್ನು ಈ ಕವನ ಹೇಗೆ ಸಶಕ್ತವಾಗಿ ಹೊಮ್ಮಿಸಿದೆ ಎಂದು ವಿವರಿಸುತ್ತ, ಮಧುರಚೆನ್ನರ ಕಾವ್ಯ ಮತ್ತು ಜನಪದ ಸಾಹಿತ್ಯದ ಸಾಂಗತ್ಯ ‘ಜನವಾಣಿ ಬೇರು, ಕವಿವಾಣಿ ಪುಷ್ಪ’ ವಿದ್ದಂತೆ ಎಂದು ವಿಶ್ಲೇಷಿಸಿದರು. ಅರವಿಂದ ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ ಇತ್ಯಾದಿ ವಿಷಯಗಳ ಕುರಿತು ಮಧುರಚೆನ್ನರು ಬರೆದ ಲೇಖನಗಳು ಆಯಾ ಕ್ಷೇತ್ರಗಳಲ್ಲಿ ಕಾರ್ಯ ಮಾಡುವವರಿಗೆ ಉಪಯುಕ್ತವಾಗಿವೆ ಎಂದು ತಿಳಿಸಿದರು.
ದಾದಾಪೀರ್ ಅವರು ಮಧುರ ಚೆನ್ನರ ‘ಅಭೀಪ್ಸಾ’ ಕವನವನ್ನು ವಾಚಿಸಿ, ಕವಿಯ ಆಳವಾದ ಆಕಾಂಕ್ಷೆಯನ್ನು, ದೈವತ್ವದ, ಬಾಹ್ಯ ಸ್ವರೂಪದ, ಸೌಂದರ್ಯವನ್ನು ಅದಕ್ಕೂ ಮಿಗಿಲಾಗಿ ಅಂತರಂಗದ ಐಸಿರಿಯನ್ನು ಕಾಣಲು ಹಂಬಲಿಸುತ್ತಿರುವುದನ್ನು, ಅಮೂರ್ತತೆಯನ್ನು, ಭಾಷೆಯ ಮಾಧುರ್ಯವನ್ನು ಕವಿ ಇಲ್ಲಿ ಹೇಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ವಿಶ್ಲೇಷಿಸಿದರು.
ಪ್ರವೀಣ್ ಅವರು ‘ನನ್ನ ನಲ್ಲ’ ಕವನ ವಾಚಿಸಿ ಗತಿಸಿಹೋದ ಕಾಲದ ಬಗ್ಗೆ ಕವಿತೆ ಇಲ್ಲಿ ಹೇಗೆ ಮಾತನಾಡುತ್ತದೆ ಎಂಬುದನ್ನು ತಿಳಿಸುತ್ತಾ ಭ್ರಮೆಗಳಿಂದ ಹೊರ ಬಂದಾಗ ಮಾತ್ರ ಸತ್ಯ ದರ್ಶನ ಸಾಧ್ಯ ಎಂದು ಹೇಳಿದರು.’ನನ್ನ ನಲ್ಲ’ ಅವರ ಹದಿನಾಲ್ಕು ವರ್ಷಗಳ ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುತ್ತದೆ ಎಂದು, ಕವಿಯ ಹೆಂಗರುಳಿನ ಬಗ್ಗೆಯೂ ವಿಶ್ಲೇಷಿಸಿದರು.
ಚೈತ್ರ ಶಿವಯೋಗಿಮಠ ಅವರು ‘ನೋಂಪಿ’ ಕವನ ವಾಚಿಸಿ, ”ಮನಸಿನ ಮಾತಿದು ಮನದಂತಾದರೆ ಮನುವಿನ ಮಗನಂತಾಗುವೆನು’ ಎನ್ನುತ್ತಾ ಕವನದ ಭಾವ ತೀವ್ರತೆಯನ್ನು,ಇಲ್ಲಿಯ ಅನುಭಾವದ ಅಭಿವ್ಯಕ್ತಿ ಶಬ್ದಕ್ಕೆ ಮೀರಿದ ಅನುಭವವನ್ನು ವ್ಯಕ್ತಪಡಿಸುತ್ತದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಗೀತಾ ಕುಂದಾಪುರ ಹಾಗೂ ಸವಿತಾ ಗುರುಪ್ರಸಾದ್ ವಂದನಾರ್ಪಣೆಯನ್ನು ಮಾಡಿದರು.
- ಸವಿತ ಗುರುಪ್ರಸಾದ್