ಬೆಂಗಳೂರು : ಗಾಯಕ ಜಗದೀಶ್ ಶಿವಪುರ ಅವರು ಸಂಗೀತ ಕ್ಷೇತ್ರದಲ್ಲಿ ಐದು ದಶಕಗಳನ್ನು ಪೂರೈಸಿದ ಹೊಸ್ತಿಲಲ್ಲಿ ಮಂಗಳೂರಿನ ‘ಮಧುರತರಂಗ’ವು ದಿನಾಂಕ : 01-07-2023ರಂದು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸ್ವರಕಂಠೀರವ’ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸಂಗೀತದಲ್ಲಿ ಒಲವು, ಸ್ಪೂರ್ತಿ ಮತ್ತು ಆತುರ ಈ ಬಗ್ಗೆ ವಿಚಾರ ಮಂಡನೆ ಮಾಡಿದ ಪ್ರಸಿದ್ಧ ಗಾಯಕಿ ಶ್ರೀಮತಿ ಸುಮಾ ಎಲ್.ಎನ್. ಶಾಸ್ತ್ರಿ ಮಾತನಾಡುತ್ತಾ “ಸಂಗೀತ ದೊಡ್ಡ ಸಾಗರದಂತೆ, ಅಲ್ಲಿ ಕಲಿತಷ್ಟು ಹೊಸ ವಿಷಯಗಳು ಸಿಗುತ್ತವೆ. ಸಂಗೀತದಲ್ಲಿ ಎಲ್ಲರಿಗೂ ಆಸಕ್ತಿ ಇರುತ್ತದೆ. ಆದರೆ ಕಲೆ ಕೆಲವರಿಗೆ ಮಾತ್ರ ಒಲಿಯುತ್ತದೆ. ಸಿನೇಮಾ ಗೀತೆಗಳನ್ನು ಹಾಡುವುದು ಸುಲಭವಲ್ಲ. ನಿಗದಿತ ಅವಧಿಯಲ್ಲಿ ಶೃತಿ ಮತ್ತು ತಾಳ ನಿಖರವಾಗಿ ಇರುವಂತೆ ಹಾಡಬೇಕಾಗುತ್ತದೆ. ಹಾಡುಗಾರಿಕೆಯ ಕಲೆ ಮಕ್ಕಳಲ್ಲಿ ಇದ್ದರೆ ಅದನ್ನು ಹೆತ್ತವರು ಗುರುತಿಸಿ ಪ್ರೋತ್ಸಾಹಿಸಬೇಕು. ಎಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ವೃತ್ತಿ ಶಿಕ್ಷಣದ ಜತೆಗೆ ಕಲೆಗೂ ಆದ್ಯತೆ ನೀಡಬೇಕು” ಎಂದು ಹೇಳಿದರು.
ಉಡುಪಿ ನಗರಸಭಾ ಸದಸ್ಯೆ ಶ್ರೀಮತಿ ಮಾನಸ ಚಿದಾನಂದ ಪೈ ಅವರು ಮಾತನಾಡಿ “ಜಗದೀಶ್ ಅವರು ಏಕಲವ್ಯನಂತೆ ರಾಜ್ ಕುಮಾರ್ ಅವರನ್ನು ಹೃದಯದಲ್ಲಿ ಇಟ್ಟುಕೊಂಡು ನಟನೆ ಮತ್ತು ಸಂಗೀತ ರೂಢಿಸಿಕೊಂಡವರು. ಈಗ ಸಂಗೀತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನೂ ಗುರುತಿಸಿ, ಪ್ರೋತ್ಸಾಹಿಸುವ ಅವರ ಕೆಲಸ ಶ್ಲಾಘನೀಯ” ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್, “ಕಲಾವಿದನಿಗೆ ಆರೋಗ್ಯ ಹಾಗೂ ಆರ್ಥಿಕ ಶಕ್ತಿ ಇದ್ದಲ್ಲಿ ಆತ ಅರಳುತ್ತಾ ಹೋಗುತ್ತಾನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಗದೀಶ್ ಶಿವಪುರ ಇವರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಎಸ್. ಕಲ್ಕೂರ ಅವರಿಗೆ ‘ನುಡಿ ಚತುರ ಮಾಣಿಕ್ಯ’ ಪ್ರಶಸ್ತಿಯನ್ನು ಗೌರವ ಪೂರ್ವಕ ಪ್ರದಾನ ಮಾಡಿದರು. ಕ್ರೀಡಾಪಟು ಕುಮಾರಿ ಶರಣ್ಯ ಹಾಗೂ ತಬಲಾ ವಾದಕ ಶ್ರೀ ಬಿ.ಎಸ್. ವೇಣುಗೋಪಾಲ ರಾಜು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಹಿತ್ಯ ಮತ್ತು ಕಾವ್ಯದ ಸಮ್ಮಿಲನವಾದ ಚಂಪೂಕಾವ್ಯವನ್ನು ಕಲಾ ಸಾಹಿತಿ ಎಚ್. ಜನಾರ್ದನ ಹಂದೆಯವರು ಪ್ರಸ್ತುತ ಪಡಿಸಿದರು. ನಯ ವಿನಯದ ನಿರಹಂಕಾರಿ ಕಲಾವಿದ ಶ್ರೀ ಜಗದೀಶ್ ಶಿವಪುರ ಇವರು ಪ್ರಾರಂಭದ ದಿನಗಳಲ್ಲಿ ಶ್ರೀ ವಿ. ಮನೋಹರ್, ಶ್ರೀ ಗುರುಕಿರಣ್, ಶ್ರೀ ಮಣಿಕಾಂತ್ ಕದ್ರಿ ಇವರ ಜೊತೆ ಆರ್ಕೆಷ್ಟ್ರದಲ್ಲಿ ಕೆಲಸ ಮಾಡಿದ್ದು, ಆ ಪ್ರೀತಿ ಮತ್ತು ಅಭಿಮಾನದ ಮೇಲೆ ಈ ಮೂರು ಮಂದಿ ಖ್ಯಾತ ಸಂಗೀತ ನಿರ್ದೇಶಕರುಗಳು ತಮ್ಮ ಕೆಲಸದ ಅತೀವ ಒತ್ತಡದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮೆಚ್ಚುವಂತ ವಿಚಾರ.
ಕಾರ್ಯಕ್ರಮದಲ್ಲಿ ಶ್ರೀ ಜಗದೀಶ್ ಶಿವಪುರ ಅವರು ಗಾಯನ ಪ್ರಸ್ತುತಪಡಿಸಿದರು ಮತ್ತು ಶ್ರೀಮತಿ ದೀಪಿಕಾ ದಿವಾಕರ ಆಚಾರ್ಯ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಭ್ರಾಮರಿ ಕ್ರಿಯೇಷನ್ಸ್ ನ ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ಶ್ರೀ ರವೀಂದ್ರ ಭಟ್ಟ ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ಟಾಪ್ ಸ್ಟಾರ್ ರೇಣುಕುಮಾರ್ ಉಪಸ್ಥಿತರಿದ್ದರು.
ಶ್ರೀ ಜಗದೀಶ್ ಶಿವಪುರ ಇವರು ಸ್ವಾಗತಿಸಿ ಪ್ರಸ್ತಾವನೆಗೈದರೆ, ಉಪನ್ಯಾಸಕಿ ಶ್ರೀಮತಿ ಮಾಧುರಿ ಶ್ರೀರಾಮ್ ನಿರೂಪಿಸಿ ವಂದಿಸಿದರು.