12ನೇ ಶತಮಾನದಲ್ಲಿ ಅಸ್ಪೃಶ್ಯತೆ, ಮೂಡನಂಬಿಕೆ, ಅನಕ್ಷರತೆ ಮತ್ತು ಸಾಮಾಜಿಕ ಅಸಮಾನತೆಗೆ ಸಮಾಜ ಒಳಗಾಗಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಶರಣರು ಕ್ರಾಂತಿಯನ್ನೇ ಕೈಗೊಂಡರು. ಅಂಥಹ ಶರಣರಲ್ಲಿ ಶರಣ ಶ್ರೇಷ್ಠರಾದ ಮಡಿವಾಳ ಮಾಚಿದೇವ ಒಬ್ಬರು. ಇವರು ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದಲ್ಲಿ ಹುಟ್ಟಿ ನಂತರ ಬಸವಣ್ಣನವರ ಸಮುದಾಯಕ್ಕೆ ಸೇರುವುದಕ್ಕಾಗಿ ಕಲ್ಯಾಣದಲ್ಲಿ ನೆಲೆಸಿದವರು.
ದಕ್ಷನನ್ನು ಸಂಹರಿಸಿದ ವೀರಭದ್ರ ಶಿವನನ್ನು ಕಾಣುವ ಉತ್ಸಾಹದಿಂದ ಸಭೆಯೊಳಗೆ ನಡೆದು ಬರುವಾಗ ಉತ್ತರೀಯದ ಸೆರಗು ಸಭೆಯಲ್ಲಿದ್ದ ಶಿವಭಕ್ತನಿಗೆ ತಗಲುತ್ತದೆ. ವಿಜಯೋತ್ಸಾಹದಿಂದ ಮೈಮರೆತು ಆದ ಈ ತಪ್ಪಿಗೆ ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ, ಶಿವಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷ ಮುಕ್ತನಾಗುವಂತೆ ವೀರಭದ್ರನಿಗೆ ಶಿವನ ಆದೇಶವಾಗುತ್ತದೆ. ಆದ್ದರಿಂದ ಮಾಚಿದೇವನನ್ನು ವೀರಭದ್ರನ ಅವತಾರ ಪುರುಷ ಎಂದು ಹೇಳಲಾಗುತ್ತದೆ. ಮಾಚಿದೇವ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣರ ವಸ್ತ್ರ ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಮಡಿ ಮಾಡಿದ ಬಟ್ಟೆಯನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವ ಕಾರ್ಯದಲ್ಲಿ ನಿರತರಾದ ಮಾಚಿದೇವರು ವೀರಗಂಟೆ ಬಾರಿಸುತ್ತಾ ಮುಂದೆ ಸಾಗುವಾಗ ಭಕ್ತರಲ್ಲದವರು ತಮ್ಮನ್ನು ಸ್ಪರ್ಶಿಸಬಾರದು ನಿಯಮವನ್ನು ತಮಗೆ ತಾವೇ ಹಾಕಿಕೊಂಡಿದ್ದರು.
‘ಕಲಿದೇವರದೇವ’ ಎಂಬ ಅಂಕಿತನಾಮದಲ್ಲಿ ಒಟ್ಟು 339 ವಚನಗಳನ್ನು ಮಾಚಿದೇವರು ರಚನೆ ಮಾಡಿದ್ದರು. ತಮ್ಮ ವಚನಗಳಲ್ಲಿ ಜೀವನ ಧರ್ಮ, ಭಕ್ತಿ, ಶ್ರಮ ಮತ್ತು ಸಮಾನತೆಯ ತತ್ವಗಳನ್ನು ಬಹಿರಂಗವಾಗಿ ಇವರು ವ್ಯಕ್ತಪಡಿಸಿದ್ದಾರೆ. ಅವರ ವಚನಗಳು ಬಾಹ್ಯ ಪೂಜೆ ಅಥವಾ ಸಾಂಪ್ರದಾಯಿಕ ಆಚರಣೆಗಳಿಗಿಂತ ಹೆಚ್ಚಾಗಿ ಆತ್ಮ ಪರಿಶೀಲನೆ, ಜ್ಞಾನ ಮತ್ತು ನೈತಿಕತೆಯ ಮೇಲೆ ಕೇಂದ್ರೀಕೃತವಾಗಿವೆ. ಇವರ ತತ್ವಗಳು ಅನನ್ಯವಾಗಿವೆ. ಭಕ್ತಿ ಎಂಬುದು ಕೇವಲ ಪೂಜೆ ಅಲ್ಲ, ಮನಸಿನ ಶುದ್ಧತೆ ಮುಖ್ಯ ಎಂದು ಆಂತರಿಕ ಶುದ್ಧತೆಯನ್ನು ಪ್ರಚುರಪಡಿಸಿದರು. ಶಿಷ್ಯನು ಗುರು ಮಾರ್ಗವನ್ನು ಅನುಸರಿಸಿ ಲಿಂಗ ಭಕ್ತಿಯನ್ನು ಅರಿಯಬೇಕು. ಜಾತಿ, ವರ್ಗ, ಲಿಂಗ, ಭೇದವಿಲ್ಲದೆ ಸಾಮಾಜಿಕ ಸಮಾನತೆಯಿಂದ ಎಲ್ಲರೂ ಶರಣರಾಗಬಹುದು. ಪ್ರಾಮಾಣಿಕ ದುಡಿಮೆ, ಶ್ರಮ ಮತ್ತು ನೈತಿಕ ಜೀವನವೇ ನಿಜವಾದ ಭಕ್ತಿಯ ಮೂಲ. ಪಾಪ, ಅಹಂಕಾರ ಮತ್ತು ದುರ್ಬುದ್ಧಿ ತ್ಯಜಿಸಿ ದೇವರ ಮೇಲಿನ ಶ್ರದ್ದೆ ಮತ್ತು ಪ್ರೀತಿಯ ಮೂಲಕ ಮಾತ್ರ ಮೋಕ್ಷ ಪಡೆಯಲು ಸಾಧ್ಯ ಎಂಬ ತತ್ವವನ್ನು ಮಾತಿನಲ್ಲಿ ಹೇಳಿ ಜೀವನದಲ್ಲಿಯೂ ಅಳವಡಿಸಿಕೊಂಡವರು ಮಾಚಿದೇವರು.
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರು ಕಲ್ಯಾಣದಿಂದ ಉಳವಿಗೆ ಪ್ರಯಾಣಿಸುವುದು ಅನಿವಾರ್ಯವಾದಾಗ ವಚನಗಳ ತಾಳೆಗರಿಗಳನ್ನು ರಕ್ಷಿಸಲು ಬಿಜ್ಜಳನ ಸೈನ್ಯದೊಂದಿಗೆ ವೀರಾವೇಷದಿಂದ ಹೋರಾಡಿದರೆಂಬುದು ಇವರ ಶೌರ್ಯಕ್ಕೆ ಸಾಕ್ಷಿಯಾಗಿದೆ. ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಹುಲ್ಲು ಕೊಯ್ಯುವಾಗ ತಾನು ಧರಿಸಿದ ಲಿಂಗ ಜಾರಿ ಕೆರೆಯೊಳಗೆ ಬೀಳುತ್ತದೆ. ಬಿದ್ದ ಲಿಂಗ ಮತ್ತೆ ಬೇಡ, ಭಾವಲಿಂಗ ಒಂದನ್ನು ಪೂಜಿಸಿದರೆ ಸಾಕು ಎಂದು ಯೋಚಿಸಿ ಮನೆಗೆ ಹಿಂದಿರುಗುತ್ತಿರುವ ನುಲಿಯ ಚಂದಯ್ಯನಿಗೆ ‘ಸವಿಬೇಕು ಹಣ್ಣು ಬೇಡವೆನ್ನುವುದು ಸರಿಯಲ್ಲ. ಲಿಂಗ ಪೂಜೆ ಬಿಡಬಾರದು’ ಎಂದು ಹೇಳಿ ಚಂದಯ್ಯನಿಗೆ ತಪ್ಪಿನ ಅರಿವನ್ನು ಮಾಡಿಸುತ್ತಾರೆ.
ನೇರ ನಡೆ-ನುಡಿಯ ಮಾಚಯ್ಯ ಸಂದರ್ಭ ಬಂದಾಗ ದೇವರನ್ನು ಪ್ರಶ್ನೆಸಲು ಹಿಂಜರಿಯುತ್ತಿರಲಿಲ್ಲ. ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಎಂದೆಂದಿಗೂ ಭಕ್ತಿಯ ಕುರುಹುಗಳು ಎಂಬುದನ್ನು ಅರ್ಥ ಮಾಡಿಸಿ, ಅಹಂಕಾರಿಗಳಲ್ಲಿ ಅಹಂಕಾರ ನಿರ್ಮೂಲನೆ ಮಾಡಿದರು. ಅವರ ವಿಚಾರಶೀಲತೆ, ಭಕ್ತಿ, ಜ್ಞಾನ, ಅನುಭವ, ಪರಸ್ಪರ ಗೌರವ, ವ್ಯಕ್ತಿ ಗೌರವ, ಸಮಾನತೆ ಮುಂತಾದ ತತ್ವಗಳಿಗೆ ವಚನಗಳು ಮಹತ್ತರ ಗೌರವ ನೀಡಿವೆ. ‘ಅಗಸ ಮುನಿಯುವುದು ಮಲಿನಕ್ಕೆ ಹೊರತು ವಸ್ತ್ರಕ್ಕಲ್ಲ, ಶರಣ ಮುನಿಯುವುದು ಅವಗುಣಕ್ಕೆ ಹೊರತು ಶಿವ ಭಕ್ತಗಲ್ಲ, ನಾನೆಂಬ ಅಹಂಕಾರವನ್ನು ಮರೆತುಬಿಡಿ, ಆಗ ಪುಟವಿಟ್ಟ ಚಿನ್ನದಂತೆ ನಿಮ್ಮ ಭಕ್ತಿ ಇನ್ನಷ್ಟು ಪ್ರಖರವಾಗುತ್ತದೆ.’ ಇವು ಮಡಿವಾಳ ಮಾಚಿದೇವನ ತತ್ವಗಳು.
ಸತ್ಯ, ಸದಾಚಾರ, ಭಕ್ತಿಯನರಿಯದೆ, ಬರಿದೆ ಭಕ್ತರೆಂಬುದ ನೋಡ, ಮತ್ತೆ ಮರಳಿ ಮನೆದೈವ ಕುಲದೈವಕೆರಗುತ್ತ ಭಕ್ತರೆಂದು ನುಡಿದರೆ ನರಕದಲ್ಲಿ ಮೆಟ್ಟುವೆನೆಂದ ಕಲಿದೇವಯ್ಯ. ‘ಭಕ್ತಿ ಕೇವಲ ಬಾಹ್ಯ ಪೂಜೆಯಲ್ಲ ಮನಸ್ಸಿನ ಶುದ್ಧತೆ ಮುಖ್ಯ’ ಎಂದು ಆಂತರಿಕ ಶುದ್ಧತೆಯನ್ನು ಮೆರೆದವರು ಮಾಚಿದೇವರು. ಶಿಷ್ಯನು ಗುರು ಮಾರ್ಗವನ್ನು ಅನುಸರಿಸಿ ಲಿಂಗ ಭಕ್ತಿಯನ್ನು ಅರಿಯಬೇಕು ಎಂಬ ಸತ್ಯವನ್ನು ಲೋಕಕ್ಕೆ ಸಾರಿದವರು. ಅಂದಿನ ಸಾಮಾಜಿಕ ಅಸಮಾನತೆಯನ್ನು ಕಂಡು ‘ಜಾತಿ, ವರ್ಗ, ಲಿಂಗ, ಬೇಧವಿಲ್ಲದೆ ಸಾಮಾಜಿಕ ಸಮಾನತೆಗೆ ಎಲ್ಲರೂ ಶರಣಾಗಬಹುದು’ ಎಂಬ ಮಾತನ್ನು ಹೇಳಿದ್ದರು. ಆದರೆ ಅದು ಇಂದಿಗೂ ಪ್ರಸ್ತುತವಾಗಿದೆ. ‘ಪಾಪ, ಅಹಂಕಾರ, ದುರ್ಬುದ್ಧಿ ತ್ಯಜಿಸಿ ದೇವರ ಮೇಲಿನ ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯ ಮೂಲಕ ಮೋಕ್ಷ ಪಡೆಯಲು ಸಾಧ್ಯ’ ಎಂಬುದು ಅವರ ವಚನದಲ್ಲಿ ಕಂಡುಬರುವ ಶ್ರೇಷ್ಠ ವಿಚಾರಗಳು.

ಡಾ. ಪಾಲಾಕ್ಷಪ್ಪ ಕೆ.
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಸಿವಿಲ್ ಇಂಜಿನಿಯರಿಂಗ್ ವಿಭಾಗ,
ಪಿ.ಎ. ಇಂಜಿನಿಯರಿಂಗ್ ಕಾಲೇಜ್, ಮಂಗಳೂರು.
