ಉಡುಪಿ : ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು(ರಿ.) ಉಡುಪಿ ಇವರು ನೆಹರು ಜಯಂತಿ ಪ್ರಯುಕ್ತ ಆಯೋಜಿಸಿದ ‘ಮಕ್ಕಳ ನಾಟಕ ಹಬ್ಬ’ ಉದ್ಘಾಟನಾ ಸಮಾರಂಭವು ದಿನಾಂಕ 19-11-2023 ರಂದು ಉಡುಪಿಯ ಎಂ. ಜಿ. ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಹಾಗೂ ಚಿಂತಕ ಡಾ. ಉದಯಕುಮಾರ ಇರ್ವತ್ತೂರು “ಆಧುನಿಕ ಭಾರತವನ್ನು ದೊಡ್ಡ ಕನಸಿನಿಂದ ಕಟ್ಟಿದವರು ನೆಹರು. ಅವರ ಆರ್ಥಿಕನೀತಿ ಹಾಗೂ ವಿದೇಶಿನೀತಿ ಭಾರತವನ್ನು ಬಲಿಷ್ಠಗೊಳಿಸಿದೆ. ಹುಟ್ಟಾ ಶ್ರೀಮಂತಿಕೆ ಇದ್ದರೂ ಪ್ರಜಾಪ್ರಭುತ್ವವಾದಿ ಮತ್ತು ಸಮಾಜವಾದಿ ನಿಲುವನ್ನು ಜೀವಂತ ಇಟ್ಟುಕೊಂಡವರು ನೆಹರು. ಅವರು ಜೈಲಿನಿಂದ ಮಗಳು ಇಂದಿರಾಗೆ ಬರೆದ ಪತ್ರಗಳೇ ಅವರ ವ್ಯಕ್ತಿತ್ವದ ಬಹುಮುಖಿ ಆಯಾಮಗಳನ್ನು ತೆರೆದಿಡುತ್ತದೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಸಂಸ್ಥೆಯ ಜೊತೆ ಕಾರ್ಯದರ್ಶಿ ಜಿ. ಪಿ ಪ್ರಭಾಕರ ತುಮರಿ ನಿರೂಪಿಸಿ, ಕಾರ್ಯದರ್ಶಿ ಸುಬ್ರಮಣ್ಯ ಜೋಶಿ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಕಾರಂತಜ್ಜನಿಗೊಂದು ಪತ್ರ, ( ನಿ : ಐಕೆ ಬೊಳುವಾರು ) ಕಟಪಾಡಿ ಎಸ್.ವಿ.ಎಸ್ ಪದವಿಪೂರ್ವ ಕಾಲೇಜು ವಿದ್ಯಾಥಿಗಳಿಂದ ಜ್ಞಾನ ವಿಜ್ಞಾನ ಜಿಂದಾಬಾದ್, ( ನಿ: ಸಂತೋಷ್ ನಾಯಕ ಪಟ್ಲ )ಕಿನ್ನರ ಮೇಳ ತುಮರಿ ಕಲಾವಿದರಿಂದ ಆನ್ಯಾಳ ಡೈರಿ ( ನಿ: ಸಾಲಿಯಾನ್ ಉಮೇಶ್ ನಾರಾಯಣ್ ) ಮೂರು ಮಕ್ಕಳ ನಾಟಕಗಳು ಪ್ರದರ್ಶನಗೊಂಡವು.