ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ‘ದಿ ಮಲ್ಯ ರೆಸಿಡೆನ್ಸ್’ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ದಿನಾಂಕ 21 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉದ್ಘಾಟಿಸಿತು.
ಸ್ವಾತಂತ್ರ್ಯೃ ಹೋರಾಟಗಾರ ಮತ್ತು ದಕ್ಷಿಣ ಕನ್ನಡದ ಮೊದಲ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯ ಅವರ 122ನೇ ಜನ್ಮದಿನದಂದು ಪ್ರಸ್ತುತಪಡಿಸಲಾದ ಈ ಪ್ರದರ್ಶನವು ಇಂಟಾಕ್‌ನ ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಭಾಗವಾಗಿದೆ. ಪ್ರದರ್ಶನವು ಅಪರೂಪದ ಛಾಯಾಚಿತ್ರಗಳು ಮತ್ತು ವಾಸ್ತುಶಿಲ್ಪದ ರೇಖಾಚಿತ್ರಗಳೊಂದಿಗೆ ಮಲ್ಯ ಅವರು ತಮ್ಮ ಬಾಲ್ಯವನ್ನು ಕಳೆದ ನಗರದ ರಥಬೀದಿಯಲ್ಲಿರುವ ಪೂರ್ವಜರ ಮನೆಯ ವಿವರವಾದ ದಾಖಲಾತಿಯನ್ನು ನೀಡುತ್ತದೆ. ಇಂಟಾಕ್‌ನ ಮಂಗಳೂರು ವಿಭಾಗದಿಂದ ಸಂಕಲಿಸಲಾದ ಪ್ರದರ್ಶನವು ಮಲ್ಯ ಅವರ ಜೀವನದ ವಿಶೇಷ ಒಳನೋಟಗಳನ್ನು ಒದಗಿಸುತ್ತದೆ.
ಇಂಟಾಕ್ ಮಂಗಳೂರು ಸಂಚಾಲಕ ಸುಭಾಸ್ ಚಂದ್ರ ಬಸು ಅವರ ಸ್ವಾಗತ ಭಾಷಣದ ನಂತರ ತಂಡದ ಸದಸ್ಯೆ ಶರ್ವಾಣಿ ಭಟ್ ಇವರು ನಿಖರವಾದ ದಾಖಲಾತಿ ಪ್ರಕ್ರಿಯೆಯನ್ನು ವಿವರಿಸಿದರು. ಗೋವಿಂದ ದಾಸ ಕಾಲೇಜಿನ ಪ್ರೊ. ಪಿ. ಕೃಷ್ಣಮೂರ್ತಿಯವರು ವಿಮಾನ ನಿಲ್ದಾಣ, ನವಮಂಗಳೂರು ಬಂದರು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಂತಹ ಮಹತ್ವದ ಯೋಜನೆಗಳ ಮೂಲಕ ಆಧುನಿಕ ಮಂಗಳೂರನ್ನು ರೂಪಿಸುವಲ್ಲಿ ಮಲ್ಯ ಅವರ ಪ್ರಮುಖ ಪಾತ್ರವನ್ನು ನೆನಪಿಸಿಕೊಂಡರು. “ಮಲ್ಯ ಅವರ ಪರಂಪರೆಯನ್ನು ನಗರದಾದ್ಯಂತ ಕನಿಷ್ಠ ನಾಲ್ಕು ಪ್ರತಿಮೆಗಳೊಂದಿಗೆ ಗೌರವಿಸಲಾಗಿದೆ. ಇದು ಅವರ ನಿರಂತರ ಪ್ರಭಾವವನ್ನು ಸೂಚಿಸುತ್ತದೆ” ಎಂದು ಹೇಳಿದರು.
ಕಸ್ತೂರಿ ಬಾಲಕೃಷ್ಣ ಪೈ ಇವರು ಮಲ್ಯ ಅವರ ಅಂತ್ಯಕ್ರಿಯೆಯ ವೇಳೆ ತಾವು ಸ್ವತಃ ಪ್ರಾರ್ಥಿವ ಶರೀರ ಹೊತ್ತುಕೊಂಡ ವೈಯಕ್ತಿಕ ನೆನಪನ್ನು ಹಂಚಿಕೊಂಡರು. ಮಲ್ಯ ಅವರೊಂದಿಗಿನ ಸಂವಾದಗಳನ್ನು ಮತ್ತು ಮಲ್ಯರ ಅಕಾಲಿಕ ಮರಣದ ನಂತರ ನಗರದ ಮೇಲೆ ಮೂಡಿದ ನಷ್ಟದ ಆಳವಾದ ಭಾವನೆಯನ್ನು ನೆನಪಿಸಿಕೊಂಡರು. ಅದೇ ರೀತಿ ಚಲನಚಿತ್ರ ನಿರ್ಮಾಪಕ ಮತ್ತು ಸಂಗೀತಗಾರ ಮಧುಸೂಧನ್ ಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ, ಮಲ್ಯರು ತಮ್ಮ ಕಾರಿನಲ್ಲಿ ಹೋಗುವುದನ್ನು ಆಗಾಗ್ಗೆ ನೋಡುತ್ತಿದ್ದರು ಮತ್ತು ಮಲ್ಯರ ದೂರದೃಷ್ಟಿ ಮತ್ತು ಸಮರ್ಪಣೆಗಾಗಿ ಅವರ ತಂದೆಯ ಮೆಚ್ಚುಗೆಯನ್ನು ಹಂಚಿಕೊಂಡರು. ಪಾರಂಪರಿಕ ತಾಣವನ್ನು ದಾಖಲಿಸುವ “ಶ್ರೀನಿವಾಸ್ ಮಲ್ಲ್ಯಾಸ್ ರೆಸಿಡೆನ್ಸ್” ಎಂಬ ಪುಸ್ತಕವನ್ನು ಮಲ್ಯ ಅವರ ಮೊಮ್ಮಗ ನರಹರಿ ಮಲ್ಯ (ಮನೆಯ ಈಗಿನ ನಿವಾಸಿ) ಮತ್ತು ಪ್ರೊ. ಕೃಷ್ಣಮೂರ್ತಿ ಜಂಟಿಯಾಗಿ ಅನಾವರಣಗೊಳಿಸಿದರು. ನರಹರಿ ಮಲ್ಯರು ತಮ್ಮ ಪೂರ್ವಜರ ಪರಂಪರೆಯನ್ನು ಉಳಿಸಿದ್ದಕ್ಕಾಗಿ ಇಂಟಾಕ್ ಗೆ ತಮ್ಮ ಕುಟುಂಬದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮ ಮುಕ್ತಾಯಗೊಳಿಸುತ್ತಾ ಸುಭಾಸ್ ಚಂದ್ರ ಬಸು ಅವರು, “ಮನೆಯು ಅದರ ನಿವಾಸಿಗಳ ಗುಣಗಳನ್ನು ರೂಪಿಸುತ್ತದೆ ಎಂದು ಸಾಮಾನ್ಯವಾದ ನಂಬಿಕೆ. ಆದರೆ ಮಲ್ಯರು ಎಂದಿಗೂ ಮನೆಗೆ ಅಂಟಿಕೊಂಡಿರಲಿಲ್ಲ. ಅವರ ನಿಜವಾದ ಬಾಂಧವ್ಯವು ಅವರು ತುಂಬಾ ನಿಷ್ಠೆಯಿಂದ ಸೇವೆ ಸಲ್ಲಿಸಿದ ಸಮುದಾಯದೊಂದಿಗೆ ಇತ್ತು ಮತ್ತು ಅವರು ಮನೆಯ ಎಲ್ಲಾ ಸೌಕರ್ಯಗಳನ್ನು ತಿರಸ್ಕರಿಸಿದ್ದರು” ಎಂದರು. ಈ ಪ್ರದರ್ಶನವು ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಕೊಡುಗೆಗಳನ್ನು ಸ್ಮರಿಸುವ ಮತ್ತು ಅವರ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಹೃತ್ಪೂರ್ವಕ ಗೌರವವಾಗಿದೆ.