ಮಂಗಳೂರು : ಪುರಭವನದಲ್ಲಿ ಕುಂದೇಶ್ವರ ಪ್ರತಿಷ್ಠಾನದ ವತಿಯಿಂದ ‘ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ’ ತಂಡವು ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಮೊದಲ ಪ್ರದರ್ಶನವು ಅಕ್ಷರಶಃ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ಕಲಾವಿದರ ಕಲಾ ಕೌಶಲಕ್ಕೆ ಕರತಾಡನಗಳ ಸದ್ದು ನಾಟಕ ಪ್ರದರ್ಶನಕ್ಕೆ ಮೆರುಗು ಕಟ್ಟಿಕೊಟ್ಟಿತು.
ಈ ಸಂದರ್ಭದಲ್ಲಿ ಚತುರ್ಭಾಷಾ ಕಲಾವಿದ, ರಂಗಭೂಮಿ ನಟ ಶ್ರೀ ಗೋಪಿನಾಥ್ ಭಟ್ ಅವರಿಗೆ ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು ಮತ್ತು ಹಿರಿಯ ದೈವಾರಾಧಕರಾದ ಸೀನ ಶೆಡ್ಯ ಅವರನ್ನು ಸನ್ಮಾನಿಸಲಾಯಿತು.
ನಾಟಕಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು ಚಾಲನೆ ನೀಡಿ ಮಾತನಾಡಿ, “ಕುಂದೇಶ್ವರ ಪ್ರತಿಷ್ಠಾನವು ಹಲವು ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಟಕ, ಯಕ್ಷಗಾನಗಳ ಪ್ರದರ್ಶನ ನೀಡುವ ಜತೆಗೆ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ” ಎಂದು ಸ್ಮರಿಸಿದರು.
ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, “ಜನಪದ, ಪೌರಾಣಿಕ ನಾಟಕ ಪ್ರದರ್ಶನ ಸುಲಭ ಸಾಧ್ಯದ ಮಾತಲ್ಲ. ದೈವಭಕ್ತಿ ಪೂರಿತ ನಾಟಕಗಳು ಅತುತ್ತಮ ಪ್ರದರ್ಶನ ಕಾಣುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಭಾನ್ವಿತ ಪ್ರಶಾಂತ್ ಸಿ.ಕೆ. ವಿರಚಿತ ಪಾಡ್ದನ ಆಧಾರಿತ ಮಂತ್ರಮೂರ್ತಿ ನಾಟಕ ಜನರ ಅಪಾರ ಮೆಚ್ಚುಗೆ ಗಳಿಸಲಿದೆ” ಎಂದರು. ಶ್ರೀ ವಿಜಯಕುಮಾರ್ ಕೊಡಿಯಾಲಬೈಲ್ ಮತ್ತು ಕಲಾವಿದ ವಾಲ್ಟರ್ ನಂದಳಿಕೆ ಮಾತನಾಡಿದರು.
ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಿರ್ಮಾಪಕ ಶ್ರೀ ಪ್ರಕಾಶ್ ಪಾಂಡೇಶ್ವರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್, ನಿರ್ಮಾಪಕ ಶ್ರೀ ಮಾಧವ ನಾಯ್ಕ್ ಅಡ್ಯಾರ್, ಉದ್ಯಮಿ ಕುಂಜತ್ತೋಡಿ ಶ್ರೀ ವಾಸುದೇವ ಭಟ್, ವೈಭವ್ ಮೆಡಿಕಲ್ಸ್ ಮಾಲೀಕ ಶ್ರೀ ಸಚ್ಚಿದಾನಂದ ಎಡಮಲೆ, ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರಿ ದೇವಸ್ಥಾನದ ಮೊಕ್ತೇಸರ ಶ್ರೀ ವಿವೇಕಾನಂದ ಸನಿಲ್, ಸಂಚಾಲಕ ಮುಖೇಶ್ ಶೆಟ್ಟಿ ಆಕಾಶ ಭವನ, ಸಹ ಸಂಚಾಲಕ ಜೆ.ಕೆ. ರೈ, ಜಗದೀಶ್ ಅಡ್ಯಾರ್, ಶ್ರೀಕಾಂತ್ ಮಾಡೂರು, ವಿಜೇಶ್ ದೇವಾಡಿಗ ಮಂಗಳಾದೇವಿ, ಸುಹಾನ್ ಕುಳಾಯಿ ಉಪಸ್ಥಿತರಿದ್ದರು.
ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾ ಅಧ್ಯಕ್ಷರಾದ ಶ್ರೀ ಜಿತೇಂದ್ರ ಕುಂದೇಶ್ವರ ಅವರು ಸ್ವಾಗತಿಸಿ, ಶ್ರೀಪ್ರಾಪ್ತಿ ಕಲಾವಿದೆರ್ ತಂಡದ ಸ್ಥಾಪಕ ಶ್ರೀ ಪ್ರಶಾಂತ್ ಸಿ.ಕೆ. ವಂದಿಸಿ, ರಿಷಿಕಾ ಕುಂದೇಶ್ವರ ಪ್ರಾರ್ಥಿಸಿ, ವಿ.ಜೆ. ಮಧುರಾಜ್ ನಿರೂಪಿಸಿದರು.