ಮಂಗಳೂರು : ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ (ರಿ.) ದಿನಾಂಕ 23-04-2023 ಭಾನುವಾರ ಸಂಜೆ ಉರ್ವಾಸ್ಟೋರಿನ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀ ಷ| ಬ್ರ|| ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ‘ಬಸವೇಶ್ವರ ಜಯಂತಿ’ ಆಚರಿಸಲಾಯಿತು.
ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಕೆ.ಎಸ್. ಜಯಪ್ಪ ಇವರ ಅಧ್ಯಕ್ಷತೆಯಲ್ಲಿ ಸಮಾಜ ಸೇವಕರಾದ ಶ್ರೀ ಸುನಿಲ್ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಸವೇಶ್ವರ ಜಯಂತಿ ಈ ಕಾಲದಲ್ಲಿ ಏಕೆ ಅಚರಿಸಬೇಕು ಎಂಬುದನ್ನು ತಿಳಿಸಿ ಹೇಳಿದರು.
ಕವಯತ್ರಿ ಹಾಗೂ ಲೇಖಕರಾದ ಶ್ರೀಮತಿ ಅರುಣಾ ನಾಗರಾಜ್ ಇವರು ‘ವಚನ ಸಾಹಿತ್ಯ ಹಾಗೂ ಬಸವಣ್ಣನವರು ಮಾಡಿದ ಕ್ರಾಂತಿ’ ಎಂಬ ವಿಷಯದಲ್ಲಿ ತಮ್ಮ ಸರಳ ಹಾಗೂ ಅರ್ಥವತ್ತಾದ ಉಪನ್ಯಾಸ ನೀಡಿದರು.
ಇದೇ ವೇದಿಕೆಯಲ್ಲಿ 2022ನೇ ಇಸವಿಯಲ್ಲಿ ಉತ್ತಮ ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಕೆ. ಗೌರಿ, ಕುಮಾರಿ ಮಹಾಲಕ್ಷ್ಮೀ ಭಾವಿ ಹಾಗೂ ಮಾಸ್ಟರ್ ಮನ್ವಿತ್ ಎಚ್. ಎಲ್. ಇವರನ್ನು ಗೌರವಿಸಲಾಯಿತು.
ರೈಲ್ವೇ ಹಳಿಯ ಮೇಲೆ ಅಡ್ಡಲಾಗಿ ಮರ ಬಿದ್ದುದನ್ನು ಕಂಡು ವೇಗವಾಗಿ ಬರುತ್ತಿರುವ ರೈಲಿಗೆ ಕೆಂಪು ಬಟ್ಟೆಯನ್ನು ತೋರಿಸಿ ಆಗುವ ಅಪಘಾತವನ್ನು ಆ ಕ್ಷಣಕ್ಕೆ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿ ಮಾನವೀಯತೆಯನ್ನು ಮೆರೆದ ಶ್ರೀಮತಿ ಚಂದ್ರಾವತಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ಶ್ರೀ ಜಗಜ್ಯೋತಿ ಬಸವಣ್ಣನವರ ಕಥಾ ಕೀರ್ತನೆ ನಡೆಯಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿವೇಕ ಶೆಟ್ಟರು ಈ ನವೀನ ಸಭಾಂಗಣದಲ್ಲಿ ನಡೆದ ಚೊಚ್ಚಲ ಕಾರ್ಯಕ್ರಮದ ಸಂತೋಷವನ್ನು ವ್ಯಕ್ತ ಪಡಿಸುತ್ತಾ ದೇಣಿಗೆ ನೀಡಿದ ದಾನಿಗಳನ್ನು ಸ್ಮರಿಸಿದರು.
ಶ್ರೀ ಬಸವರಾಜ್, ಶ್ರೀ ಚನ್ನಯ್ಯ ಸ್ವಾಮಿ, ಡಾಕ್ಟರ್ ಮಲ್ಲಿಕಾರ್ಜುನ್, ಡಾಕ್ಟರ್ ಉದಯ್ ಕುಮಾರ್ ಎರಗಟ್ಟಿ, ಶ್ರೀ ರಾಜೇಂದ್ರಪ್ಪ, ಶ್ರೀ ಎಚ್. ಗುರುಮೂರ್ತಿ, ಶ್ರೀ ಪ್ರದೀಪ್ ಜಿ.ಬಿ., ಶ್ರೀ ವೀರಣ್ಣ, ಡಾಕ್ಟರ್ ಮಹೇಶ್ವರಪ್ಪ, ಶ್ರೀಮತಿ ನಿರ್ಮಲ ಚಂದ್ರಶೇಖರ್, ಶ್ರೀಮತಿ ಸುಷ್ಮಾ ಉಪಸ್ಥಿತರಿದ್ದರು. ಶ್ರೀ ಚನ್ನಬಸಪ್ಪ ರೊಟ್ಟಿ ಸ್ವಾಗತಿಸಿ, ಶ್ರೀ ರುದ್ರೇಶ್ ವಂದಿಸಿ, ಶ್ರೀಮತಿ ರಾಜೇಶ್ವರಿ ಮಹೇಶ್ ನಿರೂಪಿಸಿದರು.