ಮಂಗಳೂರು : ಎಲ್ಲೂರು ಶ್ರೀನಿವಾಸ್ ರಾವ್ ಸಂಗೀತ ನಿರ್ದೇಶನದ ಥಂಡರ್ ಕಿಡ್ಸ್ ತಂಡದ ಮಕ್ಕಳು ಹಾಡಿದ ಹಾಡುಗಳ ಬಿಡುಗಡೆ ಸಮಾರಂಭವು ಕೆನರಾ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 20-08-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕರಾವಳಿ ಲೇಖಕಿಯರ ವಾಚಿಕಿಯರ ಸಂಘದ ಅಧ್ಯಕ್ಷೆಯಾದ ಡಾ.ಜ್ಯೋತಿ ಚೇಳ್ಯಾರು ಮಾತನಾಡುತ್ತಾ “ಮಕ್ಕಳನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಕಟ್ಟುವ ಕೆಲಸ ಇಂದು ಅಗತ್ಯವಾಗಿ ಆಗಬೇಕಾಗಿದೆ. ನಮ್ಮ ಮಣ್ಣಿನ, ನಮ್ಮ ನೆಲದ ಗುಣಗಳನ್ನು ಮಕ್ಕಳು ಆವಾಹಿಸಿಕೊಂಡಾಗಲೇ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಉಂಟಾಗಿ ಬದುಕನ್ನು ಪ್ರೀತಿಸುವ ಕಲೆ ಸಿದ್ಧಿಸುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕುಶಾಲಾಕ್ಷಿ ವಿ.ಕುಲಾಲ್, ಕಣ್ವತೀರ್ಥ ಅವರ ‘ತಗೊರಿ ಮಿತ್ತ್ ದ ಮಣ್ಣ್’ ತುಳು ಅನುವಾದಿತ ಕವನಗಳ ಸಂಕಲನವನ್ನು ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಥಂಡರ್ ಕಿಡ್ಸ್ ನ ಮಕ್ಕಳನ್ನು ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ.ಕೃಷ್ಣಮೂರ್ತಿಯವರು ಮಕ್ಕಳ ಪ್ರತಿಭೆಗೆ ವೇದಿಕೆಯಾಗಲಿರುವ ‘ಸುರವಂದಿತ’ ಯೂಟ್ಯೂಬ್ ಚಾನಲ್ ಬಿಡುಗಡೆಗೊಳಿಸಿ “ಬರಹಗಾರರು, ಸಂಗೀತಗಾರರು ಒಟ್ಟಾದರೆ ಜನಮನಕ್ಕೆ ಹಿತವಾಗುವ ಸಾಹಿತ್ಯವನ್ನು ತಲುಪಿಸಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಎಲ್ಲೂರು ಶ್ರೀನಿವಾಸರಾಯರು ಬಹಳ ನಿಷ್ಠೆಯಿಂದ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳ ವಾದ್ಯಗೋಷ್ಠಿಯು ನೆರವೇರಿತು. ಮಕ್ಕಳಾದ ಕು. ಆದ್ಯ ತಬಲದಲ್ಲಿ, ಸ್ವಸ್ತಿಕ್, ಅಕ್ಷಜ್, ವಿನಮ್ರ ಇಡ್ಕಿದು ಕೀಬೋರ್ಡಿನಲ್ಲಿ, ಸಚಿನ್ ಕೊಳಲು, ಐಶ್ವರ್ಯ ವೀಣೆ, ಶಾಹಿಲ್ ರಿದಂ ಪ್ಯಾಡ್, ಅರ್ಮನ್ ಸ್ಯಾಕ್ಟೋಫೋನಿನಲ್ಲಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್, ತಂಡದ ಕಾರ್ಯದರ್ಶಿ ರಘು ಇಡ್ಕಿದು, ತಂಡದ ಸಂಪರ್ಕಾಧಿಕಾರಿ ಶ್ರೀಮತಿ ಕವಿತಾ, ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಜಯಶ್ರೀ ಭಟ್ ಮತ್ತು ಮಕ್ಕಳ ವಿಭಾಗದ ಮಾಸ್ಟರ್ ಸ್ವಸ್ತಿಕ್ ಭಟ್ ಉಪಸ್ಥಿತರಿದ್ದರು. ಎಲ್ಲೂರು ಶ್ರೀನಿವಾಸರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಸಂಚಲಿ ಪ್ರಾರ್ಥಿಸಿ, ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಕವಿತಾ ಧನ್ಯವಾದ ಅರ್ಪಿಸಿದರು.
‘ಥಂಡರ್ ಕಿಡ್ಸ್’ ಮಕ್ಕಳಿಂದ ವಾದ್ಯಗೋಷ್ಠಿ ಮತ್ತು ಗಾಯನ ಕಾರ್ಯಕ್ರಮ
ಶ್ರೀ ಕ್ಷೇತ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ‘ಥಂಡರ್ ಕಿಡ್ಸ್’ ತಂಡದ ಮಕ್ಕಳು ವಾದ್ಯಗೋಷ್ಠಿ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 14-05-2023ರಂದು ನಡೆಸಿಕೊಟ್ಟರು. ಮಕ್ಕಳ ಬೆರಳುಗಳಿಂದ ಮೂಡಿದ ಸಂಗೀತದ ಸ್ವರಗಳು ಮತ್ತು ಕಂಠದಿಂದ ಮೂಡಿದ ಸ್ವರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತಾಸಕ್ತ ಮಕ್ಕಳ ಬಾಲ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರೆತುದು ಮಕ್ಕಳ ಆಸಕ್ತಿಗೆ ಪೂರಕವಾಗಿತ್ತು.
ತಬಲ : ಕು. ಆದ್ಯ ಮತ್ತು ಮಾ. ವಿನ್ಯಾಸ್, ಕೀಬೋರ್ಡ್: ಸ್ವಸ್ತಿಕ್ ಮತ್ತು ಅಕ್ಷಜ್, ಗಿಟಾರ್: ಮನ್ವಿತ್, ಕೊಳಲು : ಸಚಿನ್, ರಿದಂ ಪ್ಯಾಡ್ : ಶಾಹಿಲ್, ವೀಣೆ: ಐಶ್ವರ್ಯ, ಗಾಯನದಲ್ಲಿ: ವಿನಮ್ರ ಇಡಿದು, ಅರ್ಮನ್, ನಿನಾದ, ಪ್ರಾರ್ಥನಾ ಭಟ್, ವಸುಧ ಮಲ್ಯ, ಸುಜ್ಞಾನ ಆಚಾರ್ಯ ಪಾಲ್ಗೊಂಡಿದ್ದರು. ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್ ಅವರು ತರಬೇತಿಯನ್ನು ನೀಡಿದ್ದರು. ಕಾರ್ಯಕ್ರಮವನ್ನು ನಿಹಾರಿಕ ನಿರೂಪಿಸಿದರು. ಸುಧಾಕರರಾವ್ ಪೇಜಾವರ ಅವರು ಉಪಸ್ಥಿತರಿದ್ದು ಸಹಕರಿಸಿದರು.