ಜಿಲ್ಲೆಯ ಪ್ರತಿಭೆಗಳನ್ನು ಕಂಡು ಅಚ್ಚರಿ ಅನಿಸಿದೆ – ಸುಮತಿ ಕೃಷ್ಣನ್
ಮಂಗಳೂರು, ಫೆಬ್ರವರಿ 05: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಯು ಆಯೋಜಿಸಿದ 40ನೇ ಉದಯರಾಗ ಸಂಗೀತ ಕಛೇರಿ ಸಂದರ್ಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೆನ್ನೈನ ಮ್ಯೂಸಿಕ್ ಅಕಾಡೆಮಿ ಕಾರ್ಯದರ್ಶಿ ಸುಮತಿ ಕೃಷ್ಣನ್ ಅವರು ಅರ್ಚನಾ ಹಾಗೂ ಸಮನ್ವಿಯವರ ಸಂಗೀತ ಕಛೇರಿ ಆಲಿಸಿದ ಬಳಿಕ ಇಂತಹ ಪ್ರತಿಭೆಗಳು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಅರಳುತ್ತಿರುವುದನ್ನು ಕಂಡು ನನಗೆ ಅಚ್ಚರಿ ಅನಿಸಿದೆ ಎಂದು ಹೇಳಿ ಯುವ ಕಲಾವಿದರಿಗೆ ಶುಭ ಹಾರೈಸಿದರು. ಸಂಗೀತ ಕಛೇರಿಗೆ ಪೃಥ್ವಿ ಭಾಸ್ಕರ್ ವಯಲಿನ್ ನಲ್ಲಿ, ನಿಕ್ಷಿತ್ ಪುತ್ತೂರು ಮೃದಂಗದಲ್ಲಿ ಮತ್ತು ರಾಧಿಕಾ ಶಂಕರ್ ತಂಬೂರಿಯಲ್ಲಿ ಸಹಕರಿಸಿದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ ಕೆ ರಾಜ್ ಮೋಹನ್ ರಾವ್ 40 ಉದಯರಾಗಗಳನ್ನು ಐದು ವರ್ಷಗಳಲ್ಲಿ ಪೂರೈಸಿದ ಸಾಧನಾ ಪಥವನ್ನು ವಿವರಿಸಿದರು.
70ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಅಕಾಡೆಮಿಯ ಕಾರ್ಯದರ್ಶಿ, ಪಿ ನಿತ್ಯಾನಂದ ರಾವ್ ಕಳೆದ ಮೂರು ದಶಕಗಳಲ್ಲಿ ವಿಭಿನ್ನ ಅವಕಾಶಗಳನ್ನು ಸೃಷ್ಟಿಸಿ ಜಿಲ್ಲೆಯ ಯುವ ಸಂಗೀತ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಿದ ರೀತಿಯನ್ನು ಡಾ ವಿ ಅರವಿಂದ ಹೆಬ್ಬಾರ್ ಶ್ಲಾಘಿಸಿ ನಿತ್ಯಾನಂದ ರಾವ್ ಅವರನ್ನು ಗೌರವಿಸಿದರು.
ಯುವ ಕಲಾವಿದೆ ಶ್ರೇಯ ಕೊಳತ್ತಾಯ ಕಲಾವಿದರನ್ನು ಪರಿಚಯಿಸಿದರು. ಕ್ಯಾ. ಗಣೇಶ್ ಕಾರ್ಣಿಕ್ ವಂದಿಸಿದರು. ಹೆಸರಾಂತ ಕಲಾವಿದ ವಿಠಲ ರಾಮಮೂರ್ತಿ, ಸನಾತನ ನಾಟ್ಯಾಲಯದ ಚಂದ್ರಶೇಖರ ಕೆ ಶೆಟ್ಟಿ, ನಿವೃತ್ತ ಶಿಕ್ಷಕಿ ಲೀಲಾವತಿ ಎಸ್ ರಾವ್, ಭರತನಾಟ್ಯ ಕಲಾವಿದೆ ಗೀತಾ ಸರಳಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.