ಮಂಗಳೂರು : ಸ್ವಸ್ತಿಕ ನ್ಯಾಶನಲ್ ಸ್ಕೂಲ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್‌ಟೌನ್ ಸಹಯೋಗದಲ್ಲಿ ದಿನಾಂಕ : 13-07-2023, ಗುರುವಾರ ಕೊಡಿಯಾಲಬೈಲಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ-7ರಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಮಾತಾ ಬಿ. ಮಂಜಮ್ಮ ಜೋಗತಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಲಿಂಗತ್ವ ಅಲ್ಪಸಂಖ್ಯಾತರು ಜನರ ಅನುನುಕಂಪದ ಬದಲಾಗಿ, ಸಮಾಜದಲ್ಲಿ ಎಲ್ಲರೊಡನೆ ಒಂದಾಗಿ ಬಾಳುವ ನಿಟ್ಟಿನಲ್ಲಿ ಏನಾದರೊಂದು ಉದ್ಯೋಗವನ್ನು ನಿರೀಕ್ಷಿಸುತ್ತಾರೆ. ಸರ್ಕಾರವೇ ಉದ್ಯೋಗ ಕೊಡಬೇಕು ಎಂದೇನಿಲ್ಲ. ಈ ಭಾಗದಲ್ಲಿ ಸಾಕಷ್ಟು ಉದ್ದಿಮೆಗಳು ಸಂಘ ಸಂಸ್ಥೆಗಳು ಇದ್ದು, ಉದ್ಯೋಗಾವಕಾಶಕ್ಕೆ ಕೊರತೆ ಇಲ್ಲ. ಆ ನಿಟ್ಟಿನಲ್ಲಿ ಒಳ್ಳೆಯ ಮನಸ್ಸುಗಳು ಹೆಚ್ಚಾಗಲಿ. ಹೆಣ್ಣಿನ ಮನಸ್ಸು, ಗಂಡಿನ ದೇಹ ಹೊಂದಿರುವ ನಾವು ಹೆಣ್ಮಕ್ಕಳಿಗಿಂತಲೂ ದುಪ್ಪಟ್ಟು ಕೆಲಸ ಮಾಡಬಲ್ಲೆವು. ನಮ್ಮಲ್ಲಿರುವ ಸಾಕಷ್ಟು ಮಂದಿ ವಿದ್ಯಾವಂತರು, ಅವಿದ್ಯಾವಂತರ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಬಹುದು. ಯಾವುದೇ ಕೆಲಸವಾದರೂ ಸರಿ ಅದರಲ್ಲಿ ಶ್ರದ್ಧೆಯನ್ನಿಟ್ಟು ಭಕ್ತಿಯಿಂದ ಮಾಡುವ ಮನಸ್ಸು ನಮ್ಮಲ್ಲಿದೆ. ಕಾಲೇಜು ಮೆಟ್ಟಿಲು ಹತ್ತಿದವಳು ನಾನಲ್ಲ. ಎಸ್‌ಎಸ್‌ಎಲ್‌ಸಿ ಮಾಡಿದ್ದರೂ, ವಿಜ್ಞಾನ ಮತ್ತು ಗಣಿತದಲ್ಲಿ ಫೇಲ್ ಆಗಿದ್ದೇನೆ. ಆದರೆ ಯಾವುದನ್ನೂ ದೌರ್ಬಲ್ಯ ಅಂದುಕೊಳ್ಳದೆ ಮುಂದುವರಿದ ಕಾರಣ, ಇಂದು ನೂರಾರು ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವ ಅವಕಾಶ ಸಿಕ್ಕಿದೆ. ರಾಜ್ಯದ 15 ವಿ.ವಿ.ಗಳು ನನ್ನ ಜೀವನದ ಕುರಿತು ಪಠ್ಯವನ್ನು ಅಳವಡಿಸಿಕೊಂಡಿವೆ. ಯಾರೂ ಯಾರನ್ನೂ ಗುರುತಿಸುವುದಿಲ್ಲ. ನಾವು ಮಾಡುವ ಕೆಲಸಗಳ ಮೂಲಕ ಇತರರು ನಮ್ಮನ್ನು ಗುರುತಿಸುವಂತೆ ಮಾಡಬೇಕು” ಎಂದು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಮಾತನಾಡಿ, “ಮಾನಸಿಕ ಆರೋಗ್ಯದ ಬಗ್ಗೆ ಬಹುತೇಕ ಜನರು ನಿರ್ಲಕ್ಷ್ಯ ವಹಿಸುತ್ತಾರೆ. ರೋಗವನ್ನು ಒಪ್ಪಿಕೊಳ್ಳಲೂ ಕೆಲವರು ಸಿದ್ಧರಿರುವುದಿಲ್ಲ. ಇಂದಿನ ಆಧುನಿಕ ಬದುಕು ಕೂಡಾ ಮಾನಸಿಕ ಅನಾರೋಗ್ಯಕ್ಕೆ ಕಾರಣ. ತಾಂತ್ರಿಕತೆಯ ದಾಸರಾಗುವ ಬದಲು ಸಮಾಜಿಕವಾಗಿ ಬದುಕುವುದರಿಂದ ಉತ್ತಮ ಮಾನಸಿಕ ಆರೋಗ್ಯ ಪಡೆಯಬಹುದು” ಎಂದರು.
ಸಾಮಾಜಿಕ ಕಾರ್ಯಕರ್ತ ಕದ್ರಿ ದಿವಾಕರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಲಿಂಗತ್ವ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುವ ಕೆಲಸ ಅವರ ಮನೆಯಿಂದ ಹೆತ್ತವರು, ಒಡ ಹುಟ್ಟಿದವರಿಂದಲೇ ಆರಂಭವಾಗಬೇಕು. ಆಗ ಸಮಾಜವೂ ಅವರನ್ನು ಗೌರವಿಸುತ್ತದೆ” ಎಂದರು.
ಪದ್ಮಶ್ರೀ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಅವರ ಜೀವನ ಕತೆ ಆಧರಿಸಿದ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ಡಾ. ಬೇಲೂರು ರಘುನಂದನ್ ಅವರ ನಿರ್ದೇಶನದಲ್ಲಿ ಅರುಣ್ ಕುಮಾರ್ ನಾಟಕ ಪ್ರದರ್ಶಿಸಿದರು. ಈ ಬಳಿಕ ತೃತೀಯ ಲಿಂಗಿ ಸಮುದಾಯದ ಬಗ್ಗೆ ಸಂವಾದ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಮಂಗಳೂರು ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಹಾಗೂ ರೋಟರಿ ಮಂಗಳೂರು ಡೌನ್‌ಟೌನ್ ಕಾರ್ಯದರ್ಶಿ ಉಮೇಶ್ ಗಟ್ಟಿ, ಸಿಎಚ್‌ಎಸ್‌ಎ ಅಧ್ಯಕ್ಷ ವಾಸುದೇವ ಕಾಮತ್, ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸಂಜನಾ ಚಲವಾದಿ, ಡಾ. ರಾಹುಲ್ ರಾವ್ ಉಪಸ್ಥಿತರಿದ್ದರು. ಸ್ವಸ್ತಿಕ ನ್ಯಾಶನಲ್ ಸ್ಕೂಲ್‌ನ ಪ್ರಾಂಶುಪಾಲೆ ಡಾ. ಮಾಲಿನಿ ಎನ್. ಹೆಬ್ಬಾರ್ ಸ್ವಾಗತಿಸಿ, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಡಾ. ಟಿ.ಕೆ. ಶ್ವೇತಾ ಪ್ರಸ್ತಾವಿಕವಾಗಿ ಮಾತುಗಳನ್ನಾಡಿದರು. ಖಜಾಂಚಿ ಶೃತಿ ವಂದಿಸಿದರು.