23 ಮಾರ್ಚ್ 2023, ಮಂಜೇಶ್ವರ: ಎಂ. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈ ಮತ್ತು ತಾಯಿ ದೇವಕಿಯಮ್ಮ ಅವರ ಸುಪುತ್ರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ 23, 1882ರಂದು ಜನಿಸಿದರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಪದವಿ ಪೂರ್ವ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ.ಎನ್.ಕಾಮತ್ ಒಬ್ಬರಾದರೆ, ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ ಕವಿಶಿಷ್ಯ ನಾಮಾಂಕಿತರಾದ ಪಂಜೆ ಮಂಗೇಶರಾಯರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದರು. ಅವರ ವ್ಯಾಸಂಗ ಅರ್ಧಕ್ಕೆ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಹಿರಿಯರಿಂದ ಬಂದ ಆಸ್ತಿಯನ್ನು ನೋಡಿಕೊಂಡು ಮಂಜೇಶ್ವರದಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರ ಗೋವಿಂದ ಪೈ ಎಂದೇ ಕರೆಯುವುದು ರೂಢಿಯಾಯಿತು.
ಕಾಲೇಜಿನಲ್ಲಿದ್ದಾಗ ಲ್ಯಾಟಿನ್, ಫ್ರೆಂಚ್, ಸಂಸ್ಕೃತ, ಪಾಳಿ, ಬಂಗಾಲಿ, ಭಾಷೆಗಳನ್ನು ಅಭ್ಯಾಸ ಮಾಡಿದ್ದರು. ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳ ಮತ್ತು ತಮಿಳು ಹತ್ತಿರದ ಪರಿಸರದ ಭಾಷೆಗಳು, ಮರಾಠಿ, ಗುಜರಾತಿ, ಜರ್ಮನ್, ಗ್ರೀಕ್ ಮೊದಲಾದವುಗಳು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡು ಬಹು ಭಾಷಾ ಪ್ರವೀಣರಾಗಿದ್ದರು. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿಲಿಟ್ ಪದವಿ ನೀಡಲು ಮುಂದಾಗಿತ್ತು ಅದನ್ನು ಪೈಗಳು ನಿರಾಕರಿಸಿದರು.
ಗೋವಿಂದ ಪೈಗಳು ‘ಗಿಳಿವಿಂಡು’, ‘ನಂದಾದೀಪ’ ಇವರ ಕಾವ್ಯ ಸಂಕಲನಗಳನ್ನು, ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎರಡು ಖಂಡಕಾವ್ಯಗಳು, ‘ಹೆಬ್ಬೆರೆಳು’ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕ, ‘ಚಿತ್ರಭಾನು’ ಗದ್ಯನಾಟಕ, ‘ತಾಯಿ‘, ‘ಕಾಯಾಯ್ ಕೊಮಾಜಿ’ ಎಂಬ ಸಾಮಾಜಿಕ ನಾಟಕಗಳು, ಜಪಾನಿನ “ನೋ” ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಕನ್ನಡದ ಮೊರೆ’ ಪ್ರಬಂಧ ಸಂಕಲನ, ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’ ಲೇಖಕನ ರೂಪದಲ್ಲಿದೆ. ಪ್ರಬಂಧರೂಪದಲ್ಲಿ ಅವರ ‘ಆತ್ಮಕಥನ’ ಇವು ಅವರ ಕೃತಿಗಳಲ್ಲಿ ಕೆಲವು.
ಅವರು ಬಾಲ್ಯದಿಂದಲೇ ಕವಿ. ಇನ್ನೂ ಎಂಟನೆಯ ತರಗತಿಯಲ್ಲಿರುವಾಗಲೇ ಬರೆದ ಮೂರು ಕವನಗಳು ಬಹುಮಾನ ಗಳಿಸಿದ್ದವು ಮತ್ತು “ಸುವಾಸಿನಿ” ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಕಾವ್ಯ, ನಾಟಕ, ಅನುವಾದ ಮತ್ತು ವಿಮರ್ಶೆಗಳ ಕ್ಷೇತ್ರದಲ್ಲಿ ಚೆನ್ನಾಗಿ ಕೃಷಿ ಮಾಡಿದ್ದರು. ಅನುಕೂಲೆಯಾದ ಮಡದಿ ನೆಮ್ಮದಿಯ ಸಂಸಾರ ಮತ್ತು ನಿರಂತರ ಆದಾಯದಿಂದ ನೆಮ್ಮದಿಯಲ್ಲಿರುವ ಸಮಯದಲ್ಲಿ ಬಹಳಷ್ಟು ಕೃತಿಗಳು ಹೊರ ಬಂದವು. ಇವರ ಸಾಂಸಾರಿಕ ಜೀವನದಲ್ಲಿ ಸುಖದ ಅವಧಿ ಬಹು ಕಡಿಮೆ. ಹುಟ್ಟಿದ ಒಂದು ಹೆಣ್ಣು ಮಗು ಬೇಗನೆ ತೀರಿ ಹೋಯಿತು. 1927ರಲ್ಲಿ ಇವರ ಹೆಂಡತಿ ಕೃಷ್ಣಾಬಾಯಿ ಮರಣ ಹೊಂದಿದರು. ಆಗ ಪೈಯವರಿಗೆ 44 ವಯಸ್ಸು. ಅವರು ಮರು ಮದುವೆಯಾಗಲಿಲ್ಲ. ಇದು ಜೀವನದಲ್ಲಿ ಹೊಸ ತಿರುವು ಪಡೆಯಿತು. ತಮಗಾದ ಅನಾನುಕೂಲವನ್ನು ಅವರು ತಮ್ಮ ಸಾಹಿತ್ಯ ಸೇವೆಗೆ ಧನಾತ್ಮಕವಾಗಿ ತಗೆದುಕೊಂಡರು. ಅವರ ಬಹುತೇಕ ಸಂಶೋಧನಾ ಕೃತಿಗಳು ಈ ಅವಧಿಯಲ್ಲಿಯೇ ಹೊರ ಬಂದವು.
ಅವರ ಮಾತೃಭಾಷೆ ಕೊಂಕಣಿಯಾದರೂ ಅವರ ಕೈಂಕರ್ಯವೆಲ್ಲ ಕನ್ನಡಕ್ಕೆ ಮೀಸಲಾಗಿತ್ತು. ನುಡಿಯ ಮೇಲಿನ ಅವರ ಅಭಿಮಾನವನ್ನು ಇಲ್ಲಿ ಕಾಣಬಹುದು. “ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ…. ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ” ಪಂಜೆ ಮಂಗೇಶರಾಯರು ಹೇಳಿದ ಈ ಮಾತುಗಳು ಮನಸ್ಸಿಗೆ ತಟ್ಟುತ್ತವೆ.
ಸಂಶೋಧನೆಯು ಅವರ ಪ್ರಧಾನ ಸಾಹಿತ್ಯ ಕೃಷಿಯಾಯಿತು. ಬಹುಭಾಷಾ ಪಾಂಡಿತ್ಯ ಮತ್ತು ಸಾಹಿತ್ಯದ ಅಧ್ಯಯನವು ಅವರ ಜ್ಞಾನದ ಆಳ ಅಗಲಗಳನ್ನು ಹೆಚ್ಚಿಸಿದವು. ಅವರು ಹಚ್ಚಿದ ಜ್ಞಾನ ದೀವಿಗೆಯು ಸದಾ ಬೆಳಕು ಬೀರುವಂತೆ ಗೋವಿಂದ ಪೈ ಪ್ರತಿಷ್ಠಾನ ಈಗಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸತ್ಯದ ಎಳೆ ಹಿಡಿದು ಎಷ್ಟೇ ವಾದ ಮಾಡಿದರೂ, ತಮ್ಮ ನಿರ್ಧಾರ ಸರಿ ಅಲ್ಲ ಎಂದು ಮನವರಿಕೆಯಾದಾಗ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣ ಗೋವಿಂದ ಪೈಯವರದಾಗಿತ್ತು.
ಕ್ರೈಸ್ತ ಪಂಚಾಂಗವನ್ನು ಅನುಕರಿಸಿ ಶಾಸನಗಳ ಕಾಲ ನಿರ್ಣಯ ಮಾಡಲು ನಿರಾಕರಿಸಿದ ಪೈಯವರು, ಅದರ ಬದಲಾಗಿ ಭಾರತೀಯ ಪಂಚಾಂಗಗಳ ಆಧಾರದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅದೇ ವಿಧಾನದಿಂದ ಗೌತಮ ಬುದ್ದ, ಮಹಾವೀರ, ಬ್ರಹ್ಮ, ಶಿವ, ಕುಮಾರವ್ಯಾಸ ಮೊದಲಾದವರ ಕಾಲನಿರ್ಣಯ ಮಾಡಿದರು. ಅವರು ಸಂಶೋಧನೆಗೆ ಆರಿಸಿದ ವಿಷಯಗಳು ಅನೇಕ. ಧರ್ಮಗಳು, ದೇವಾಲಯಗಳು, ರಾಜವಂಶಗಳು, ಶಾಸನಗಳು ಪುರಾತನ ಕವಿಗಳು ಹೀಗೆ ಎಲ್ಲದರಲ್ಲೂ ಅವರ ಸಂಶೋಧನಾತ್ಮಕ ಕೊಡುಗೆ ಇದೆ. ಸಾಹಿತ್ಯ ಸಂಶೋಧನೆಯ ಜೊತೆ ಜೊತೆಗೆ ಹೊಸ ಪದಗಳ ಸೃಷ್ಠಿಗೂ ಅವರು ಪ್ರಾಮುಖ್ಯತೆ ಕೊಟ್ಟಿದ್ದರು. ಭಾಷೆ ಬೆಳೆಯಬೇಕಾದರೆ ಶಬ್ದಸಂಗ್ರಹವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನುವುದು ಅವರ ಅಚಲ ನಂಬಿಕೆಯಾಗಿತ್ತು. ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ಅವರ ಸಂಶೋಧನೆಯ ಅಗಾಧತೆಯನ್ನು ಕಾಣಬಹುದಾಗಿದೆ.
ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಆರಂಭಗೊಂಡು, ಕನ್ನಡನಾಡಿನ ಸುತ್ತಲೂ ಹಬ್ಬಿ, ಕಡೆಗೆ ಭಾರತಾಂಬೆಯ ಪಾದಕ್ಕೆ ಸಮರ್ಪಣೆಯಾಗಿದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲ ಸಾಲುಗಳು. “ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ಸದಾ ಕನ್ನಡಿಗರಿಗೆ ಕರ್ಣಾನಂದ ನೀಡುತ್ತಿದೆ. “ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ಭಕ್ತಿಯಿಂದ ನಮಿಸುತ್ತಾ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತಾ ಭಾವವನ್ನು ವ್ಯಕ್ತಪಡಿಸುತ್ತಾರೆ. ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಗಿಳಿವಿಂಡು ಮಂಜೇಶ್ವರ, ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೇಶ್ವರ ಇವು ಅವರ ಹೆಸರನ್ನು ಶಾಶ್ವತಗೊಳಿಸಲು ಕಾರ್ಯ ನಿರ್ವಹಿಸುತ್ತಿವೆ.
ಗಿಳಿವಿಂಡು, ನಂದಾದೀಪ, ಹೃದಯ ರಂಗ, ವಿಟಂಕ, ಇಂಗಡಲು ಇವು ಆಯ್ದ ಕವನಗಳು. ಖಂಡಕಾವ್ಯಗಳು – ಗೊಲ್ಗೊಥಾ ಮತ್ತು ವೈಶಾಖಿ, ನಾಟಕಗಳು – ಹೆಬ್ಬೆರಳು, ಚಿತ್ರಭಾನು, ತಾಯಿ, ಜಪಾನಿನ ‘ನೋ’ ನಾಟಕಗಳು, ಕುಮಸಾಕಾ, ಕಾಯೊಮ್ ಕೋಮಾಚಿ, ಸೊತೋಬಾ ಕೊಮಾಚಿ, ಹಾಗೊರೋವೊ, ತ್ಸುನೆಮಾಸ, ಸೊಮಾಗೆಮಂಜಿ, ಚೊರಿಯೊ, ಶೋಜೊ. ಪ್ರಬಂಧ ಸಂಕಲನ – ಕನ್ನಡದ ಮೊರೆ, ಗದ್ಯಾನುವಾದ – ಶ್ರೀಕೃಷ್ಣಚರಿತ್ರ (ಬಂಗಾಳಿಯ ನವೀನಚಂದ್ರ ಸೇನರ ಕೃತಿ) ಇತರೆ ಕೃತಿಗಳು -ಮೂರು ಉಪನ್ಯಾಸಗಳು, ಗೋವಿಂದ ಪೈ ಅವರ ಕೆಲವು ಪತ್ರಗಳು, ಗೀತಾಂಜಲಿ, ಗೌರವ ಪುರಸ್ಕಾರ, 1949ರಲ್ಲಿ ಮದರಾಸು ಸರಕಾರವು ಗೋವಿಂದ ಪೈಗಳಿಗೆ ರಾಷ್ಟ್ರಕವಿ ಸನ್ಮಾನ ನೀಡಿ ಗೌರವಿಸಿತು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- 1950ರಲ್ಲಿ ಮುಂಬಯಿಯಲ್ಲಿ ಜರುಗಿದ 34ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.
ಕನ್ನಡ ಸಾಹಿತ್ಯದೊಂದಿಗೆ ಇತರ ಭಾಷಾ ಕಂಪನ್ನು ಎಲ್ಲೆಡೆಗೆ ಹರಡಿ, ಜ್ಞಾನ ಬೆಳಗುವ ಸಾಹಿತ್ಯ ಸಂಪತ್ತನ್ನು ಸಾರಸ್ವತ ಲೋಕಕ್ಕೆ ನೀಡಿದ ಅಪ್ರತಿಮ ದೇಶ ಭಕ್ತ 1963 ಸೆಪ್ಟೆಂಬರ್ 6ರಂದು ಇಹಕ್ಕೆ ವಿದಾಯ ಹೇಳಿದರು.
- ಶ್ರೀಮತಿ ಲಕ್ಷ್ಮಿ ವಿ. ಭಟ್
ಕವಿ ಮತ್ತು ಸಾಹಿತಿ