ಮೈಸೂರು : ಶ್ರೀ ಗುರು ಕಲಾ ಶಾಲೆ ಅರ್ಪಿಸುವ ಎಚ್. ಎಸ್.ಕವಿತಾ ಧನಂಜಯ ಸಂಗೀತ ಮತ್ತು ನಿರ್ದೇಶನದ ‘ಮಥನ’ ನಾಟಕವು ದಿನಾಂಕ 29-06-2023 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ದಲ್ಲಿ ಪ್ರದರ್ಶನಗೊಳ್ಳಲಿದೆ.
ನಾಟಕದ ಬಗ್ಗೆ:
ಪ್ರಸ್ತುತ ನಾಟಕವು ಎರಡು ಪ್ರಮುಖ ಪಾತ್ರಗಳಾದ ಕುಂತಿ ಮತ್ತು ದ್ರೌಪದಿಯನ್ನು ಕೇಂದ್ರೀಕರಿಸಿ ರಚಿತವಾದ ನಾಟಕವಾಗಿದೆ. ಇಬ್ಬರ ಸಂಭಾಷಣೆಯಲ್ಲಿ ಮಹಾಭಾರತದ ಅನೇಕ ಸಂಗತಿಗಳು ಪ್ರಸ್ತಾಪವಾಗುತ್ತವೆ. ಇಬ್ಬರ ನಡುವಿನ ಮಾನಸಿಕ ಸಂಘರ್ಷವನ್ನು ನಾಟಕ ಸಶಕ್ತವಾಗಿ ತೆರೆದಿಡುತ್ತದೆ. ಕುಂತಿಗೆ ದ್ರೌಪದಿಯ ಮೇಲೆ ಬಹಳ ಪ್ರೀತಿ ಮತ್ತು ವಿಶ್ವಾಸ. ಐವರು ಪಾಂಡವರನ್ನು ಒಂದೇ ಸಮನಾಗಿ ಹಿಡಿದಿಟ್ಟಿದ್ದಾಳೆ ಪಾಂಚಾಲಿ ಎಂಬ ಹೆಮ್ಮೆ ಕುಂತಿಗೆ. ಕುರುಕ್ಷೇತ್ರ ಯುದ್ಧ ಆಗದಂತೆ ತಡೆಯುವ ದೊಡ್ಡ ಜವಾಬ್ದಾರಿ ದ್ರೌಪದಿಯ ಮೇಲಿದೆ. ಅವಳಿಂದ ಆರಂಭವಾದ ಯುದ್ಧದ ಕಾರ್ಮೋಡ ಅವಳಿಂದಲೇ ತಿಳಿಯಾಗಬೇಕು. ಅದಕ್ಕಾಗಿ ಅವಳು ಪಂಚ ಪಾಂಡವರ ಜೊತೆ ಆರನೆಯವನಾದ ಕರ್ಣನನ್ನೂ ಪತಿಯನ್ನಾಗಿ ಸ್ವೀಕರಿಸಬೇಕು ಎಂಬುದು ಕುಂತಿಯ ವಾದ. ಕೃಷ್ಣನಿಗೆ ಅಸಾಧ್ಯವಾದದ್ದು ಕೃಷ್ನೆಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಕುಂತಿಯದು. ಹೆಣ್ಣು ಎಲ್ಲರನ್ನೂ ಪೊರೆಯುವವಳು, ಕೊಲ್ಲುವ ಮನಸ್ಥಿತಿ ಅವಳದ್ದಲ್ಲ. ಭರತವರ್ಷದ ಭವಿಷ್ಯ ಪಾಂಚಾಲಿಯ ಕೈಯಲ್ಲಿದೆ ಎಂಬ ಕುಂತಿಯ ಮಾತು ಪರಿಣಾಮಕಾರಿ ಎನಿಸುತ್ತದೆ. ಹೀಗೆ ಯುದ್ಧವನ್ನು ನಿಲ್ಲಿಸುವ ಯೋಚನೆಯ ಹಿನ್ನೆಲೆಯಲ್ಲಿ ಅವರಿಬ್ಬರ ಬದುಕಿನ ಅನೇಕ ವಿಚಾರಗಳು ಇಬ್ಬರ ಮಧ್ಯೆ ಬಂದು ಹೋಗುತ್ತವೆ. ಇಬ್ಬರ ಸಮರ್ಥನೆಗಳು, ನಿರ್ಧಾರಗಳು ಮತ್ತು ಯೋಚನೆಗಳು ನಾಟಕದಲ್ಲಿ ಅತ್ಯಂತ ಸಮರ್ಥವಾಗಿ ಬಿಂಬಿತವಾಗಿವೆ.