ಸುಳ್ಯ : ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆಯು ಸರಕಾರಿ ಪದವಿಪೂರ್ವ ಕಾಲೇಜು ಮಡಿಕೇರಿ ಇಲ್ಲಿ ನಡೆಸಿದ ಮೈಸೂರು ವಿಭಾಗೀಯ ಮಟ್ಟದ, ರೋವರ್ ರೇಂಜರ್ಸ್ ವಿಭಾಗದ ಗೀತಗಾಯನ ಸಮೂಹ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜನ್ನು ಪ್ರತಿನಿಧಿಸಿದ ಸುಳ್ಯ ರಂಗಮನೆಯ ಮನುಜ ನೇಹಿಗನ ತಂಡವು ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಅದಕ್ಕೂ ಮೊದಲು ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು, ನಂತರ ಮಂಗಳೂರು ಪಿಲಿಕುಳದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. ದಿನಾಂಕ 13 ಜನವರಿ 2025ರಂದು ರಾಜ್ಯಮಟ್ಟದ ಸ್ಪರ್ಧೆಯು ಬಳ್ಳಾರಿಯಲ್ಲಿ ನಡೆಯಲಿದೆ.
ಇದಲ್ಲದೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕರ್ನಾಟಕ ಸರಕಾರ ಇವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಸಿದ ಮೈಸೂರು ವಿಭಾಗ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ಸ್ಪರ್ಧೆಯ ವೈಯ್ಯಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಅದಕ್ಕೂ ಮೊದಲು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಇದೀಗ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. ದಿನಾಂಕ 15 ಡಿಸೆಂಬರ್ 2025ರಂದು ರಾಜ್ಯಮಟ್ಟದ ಸ್ಪರ್ಧೆಯು ತುಮಕೂರಲ್ಲಿ ನಡೆಯಲಿದೆ. ನಾಟಕ, ಸಂಗೀತ, ಯಕ್ಷಗಾನ, ಜಾನಪದ, ಜಾದೂ ಇತ್ಯಾದಿ ಬಹುಮುಖ ಪ್ರತಿಭೆ ಹೊಂದಿದ ಮನುಜ ನೇಹಿಗ ರಂಗಮನೆಯ ರೂವಾರಿ, ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಹಾಗೂ ಡಾ. ಮೌಲ್ಯ ಇವರ ಪುತ್ರರಾಗಿದ್ದಾರೆ. ಇವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.
