ಉಡುಪಿ : ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ, ಇಂದ್ರಾಳಿ ಕನ್ನಡ ವಿಭಾಗ ಎಂ.ಜಿ.ಎಂ. ಕಾಲೇಜು ಉಡುಪಿ, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಶಾರದಾ ಪ್ರತಿಷ್ಠಾನ (ರಿ.), ರಂಗ ಚಂದಿರ (ರಿ.) ಮತ್ತು ರಂಗ ಭೂಮಿ (ರಿ.) ಉಡುಪಿ ಸಹಕಾರದೊಂದಿಗೆ ಕಾಜಾಣ ಅರ್ಪಿಸುವ ಪದ್ಮಶ್ರೀ ಡಾ.ಮಂಜಮ್ಮ ಜೋಗತಿ ಜೀವನಾಧಾರಿತ ಏಕ ವ್ಯಕ್ತಿ ನಾಟಕ ‘ಮಾತಾ’ ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ.
ಅರುಣ್ ಕುಮಾರ್ ಅಭಿನಯಿಸುವ ಈ ನಾಟಕಕ್ಕೆ ರಂಗಪಠ್ಯ, ವಿನ್ಯಾಸ, ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ಈ ನಾಟಕಕ್ಕೆ ಸಂಗೀತ ಸಂಯೋಜನೆ ಮತ್ತು ಗಾಯನ ಮಾಡಿದ್ದು ಶ್ರೀಮತಿ ಸವಿತಕ್ಕ, ಬೆಳಕು ಮತ್ತು ಪ್ರಸಾಧನ ರವಿ ಶಂಕರ್ ನಿರ್ವಹಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯಲ್ಲಿ ಶ್ರೀನಿ ಸಂಪತ್ ಮತ್ತು ಲಕ್ಷ್ಮೀ ಸಹಕರಿಸಲಿರುವರು. ಸಹ ನಿರ್ವಹಣೆ ಸುಬ್ರಮಣಿ ಬಯ್ಯಣ್ಣ ಅವರದ್ದು, ರಂಗಸಜ್ಜಿಕೆಯಲ್ಲಿ ಸಿಹಿಮೊಗೆ ಪವನ್ ಹಾಗೂ ಭಾಸ್ಕರಪುಷ್ಪ ಪುನೀತ್ ಸಹಕರಿಸಲಿದ್ದಾರೆ, ತಮಟೆ ಹರ್ಷ, ರಮೇಶ್, ಕಲ್ಯಾಣ್ ಕುಮಾರ್, ಬಾಲಾಜಿ, ಜಾನು, ಮಾಧುರಿ ಹಬೀಬ್ ತಂಡದಲ್ಲಿದ್ದಾರೆ.
‘ಮಾತಾ’ ನಾಟಕದ ಬಗ್ಗೆ : ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತ ಮಹಿಳೆಯರ ಕುರಿತಾದ ನಾಟಕಗಳು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ, ಜೋಗತಿ ಸಂಪ್ರದಾಯ ಮತ್ತು ಜೋಗತಿ ಕಲೆಯನ್ನು ಕುರಿತಾದ ನಾಟಕದ ಹಿನ್ನೆಲೆಯಲ್ಲಿ ಹೇಳುವುದೇ ಆದರೆ ಕನ್ನಡದ ಮಟ್ಟಿಗೆ ‘ಮಾತಾ’ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿಯವರ ಜೀವನವನ್ನು ಆಧರಿಸಿದ ನಾಟಕವಾದರೂ ಗಂಡಿನ ಒಳಗಿರುವ ಹೆಣ್ತನ, ಜನಪದ ಕಲಾಸಕ್ತಿ, ರಂಗಭೂಮಿಯ ವಾತಾವರಣ, ಕೌಟುಂಬಿಕ ಸಾಮಾಜಿಕ ಹಿನ್ನಲೆ, ಸೃಜನಶೀಲತೆ ಮತ್ತು ಸಾಧನೆ ಹೀಗೆ ಮುಂತಾದ ನೆಲೆಗಳಲ್ಲಿ ಮಾತಾ ನಾಟಕ ಅನಾವರಣಗೊಳ್ಳುತ್ತದೆ. ಜೋಗತಿ ಹಾಗೂ ಎಲ್ಲವ್ವನ ಪರಂಪರೆ ನಾಟಕದ ಜೀವಾಳವಾಗಿದೆ. ಅಷ್ಟೆ ಅಲ್ಲದೇ ಮನುಷ್ಯನನ್ನು ಮನುಷ್ಯನೇ ಅತ್ಯಂತ ಹೀನವಾಗಿ ನೋಡುವ ಮನಸ್ಥಿತಿಯನ್ನು ಕನ್ನಡಿ ಹಿಡಿದಂತೆ ಮನುಷ್ಯನಿಗೇ ಅರ್ಥ ಮಾಡಿಸುತ್ತದೆ. ಅರುಣ್ ಜೋಳದ ಕೂಡ್ಲಿಗಿ ಅವರು ಮಂಜಮ್ಮ ಜೋಗತಿಯವರ ಆತ್ಮ ಕಥನ ‘ನಡುವೆ ಸುಳಿವ ಹೆಣ್ಣು’ ಹಾಗೂ ಡಾ. ಚಂದ್ರಪ್ಪ ಸೊಬಟಿಯವರು ‘ಜೋಗತಿ ಮಂಜಮ್ಮ’ ಎಂಬ ಅವರ ಕೃತಿಗಳನ್ನು ಆಧರಿಸಿ, ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಗಳನ್ನು ಒಳಗೊಂಡು, ಮಂಜಮ್ಮನವರೊಂದಿಗೆ ಚರ್ಚಿಸಿ, ರಂಗ ಪಠ್ಯಕ್ಕೆ ಬೇಕಾದ ಇನ್ನಿತರ ವಿಚಾರಗಳನ್ನು ಒಳಗೊಂಡು ಮಾತಾ ನಾಟಕವನ್ನು ಹಣೆಯಲಾಗಿದೆ.
ಮಂಜುನಾಥ್ ಶೆಟ್ಟಿ, ಮಂಜಮ್ಮ ಜೋಗತಿ ಆಗಿ ‘ಮಾತಾ’ ಆಗುವ ಜಾನಪದ ಕಲೆಗಾರ್ತಿಯ ಜೀವನವನ್ನು ಎಂಬತ್ತು ನಿಮಿಷಗಳಲ್ಲಿ ರಂಗದ ಮೇಲೆ ನಡೆಯುವ ನಾಟಕವಾಗಿ ರೂಪಾಂತರಿಸಲಾಗಿದೆ. ಇದು ಮಂಜಮ್ಮನವರ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಡುತ್ತದೆ. ಮಂಜಮ್ಮ ಜೋಗತಿ ಅವರ ಬದುಕಿನ ಅಧ್ಯಾಯಗಳನ್ನು ರಂಗರೂಪಕ್ಕೆ ಅಳವಡಿಸಿ, ಬೇಲೂರು ರಘುನಂದನ್ ಅವರು ನಿರ್ದೇಶಿಸಿದ್ದಾರೆ. ಬರೀ ಮನೋರಂಜನೆಯಾಗದ ಈ ರಂಗಪ್ರಯೋಗವು ಮನಃಪರಿವರ್ತನೆಗೆ ಪ್ರೇರಣೆಯೂ ಆಗುವುದು ಗಮನಾರ್ಹ. ತಲೆಮೇಲೆ ಹೊತ್ತ ದೇವಿ ಹೆಣ್ಣು. ‘ನಾನು ನಿಂತಿರೋದು ಭೂಮಿ ತಾಯಿಯ ಮೇಲೆ, ಆಕೆ ಕೂಡ ಹೆಣ್ಣು, ನಡುವೆ ಇರುವ ನಾನು ಯಾರು’ ಎಂದು ಪ್ರಶ್ನಿಸುವ ಈ ನಾಟಕ ಕನ್ನಡದಲ್ಲಿ ಬಹಳ ಹಿಂದೆಯೇ ಬರಬೇಕಿತ್ತು. ಮಂಜಮ್ಮನವರ ಮಾವ ಗಾಂಧಿ ಶೆಟ್ಟಿ ಅವರನ್ನು ರಂಗದ ಮೇಲೆ ಕರೆ ತಂದ ಪರಿ ಬೇಲೂರು ರಘುನಂದನ್ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಹಾಗೆ ಮಾಡುತ್ತದೆ. ‘ಗಾಂಧಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ. ನಮ್ಮಂತಹವರಿಗೆ ನಿಜವಾದ ಸ್ವಾತಂತ್ರ್ಯ ಯಾವಾಗ’ ಎನ್ನುವ ಪ್ರಶ್ನೆ ಪ್ರದರ್ಶನ ಮುಗಿದ ನಂತರವೂ ನಮ್ಮನ್ನು ಬಂಧನದಲ್ಲಿ ಇರುವಂತಹ ಭಾವಕ್ಕೆ ದೂಡುತ್ತದೆ.
ಓಣಿಯ ಗುಡಿಸಲಿನ ಮನೆಗೆ ಬೆಂಕಿ ಬಿದ್ದಾಗ, ತೊಟ್ಟಲು ತೂಗುತ್ತಿರುವ ಮಂಜಮ್ಮ ಅವರ ತಾಯಿ ಕೂಸನ್ನು ಅಲ್ಲಿಯೇ ಬಿಟ್ಟು ಮೊದಲು ಮಾತು ಬಾರದ ಬೆಕ್ಕಿನ ಮರಿಗಳನ್ನು ರಕ್ಷಿಸಿದ ಘಟನೆ- ತಾಯಿತನದ ಬಗ್ಗೆ ಅಷ್ಟೇ ಅಲ್ಲ ಜಾತಿ, ಲಿಂಗ, ಮೀರಿ ಶುದ್ಧ ಮನಸ್ಸಿನಿಂದ ಬಾಳುವ ಸಂದೇಶ ಸಾರುತ್ತದೆ. ಬೆಳಕು, ಸಂಗೀತದ ಮೂಲಕ ಇಡೀ ನಾಟಕದ ಕಟ್ಟೆ ಒಂದು ದೊಡ್ಡ ಕನ್ನಡಿಯಾಗುತ್ತದೆ. ಆ ತಾಯಿ ತನ್ನ ಗಂಡು ಮಗು ಹೆಣ್ಣಾದಾಗ ಏಕೆ ತಿರಸ್ಕರಿಸಿದ್ದಳು? ಒಪ್ಪಿಕೊಂಡು ಮನೆಯಲ್ಲೇ ಬೆಳೆಸಿದ್ದರೆ, ನಮ್ಮ ಮುಂದೆ ದೇಶ ಕಂಡ ಒಬ್ಬ ಶ್ರೇಷ್ಠ ಕಲಾವಿದೆಯ ಮರುಹುಟ್ಟಿಗೆ ಕಾರಣವೇ ಸಿಗುತ್ತಿರಲಿಲ್ಲವೇನೊ ಅನಿಸುತ್ತದೆ.
ಮಂಜಮ್ಮನವರ ಬಹಳಷ್ಟು ಭಾಷಣಗಳಲ್ಲಿ ಕೇಳಿ ತಿಳಿದುಕೊಂಡಿದ್ದು ಇಷ್ಟು: ಅವರು ‘ಕಲೆಯೇ ಬದುಕು’ ಎಂದು ನಂಬಿ ಬದುಕಿದ್ದಾರೆ. ಆದರೆ ಅವರು ಕಲೆಗಾರ್ತಿ ಆಗಿದ್ದು ಹೇಗೆ, ಯಾರು ಯಾರು ಅವರನ್ನು ಕಲೆ ಅನುಭವಿಸಲು ಅನುವು ಮಾಡಿಕೊಟ್ಟಿರಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ರಘುನಂದನ್ ಅದನ್ನು ಸಮರ್ಥವಾಗಿ ರಂಗದ ಮೇಲೆ ಸಾಧಿಸಿದ್ದಾರೆ. ಮಂಜಮ್ಮನವರ ತಾಯಿ ಬುರ್ಖಾ ಧರಿಸಿ ಯಾರಿಗೂ ತಿಳಿಯದ ಹಾಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಸಂದರ್ಭವಿದೆ. ಹೆಣ್ಣಿಗೆ ಸಮಾಜ ಹಾಕಿದ ನಿಬಂಧನೆಗಳನ್ನು ಎತ್ತಿ ತೋರಿಸುತ್ತಾ, ಬುರ್ಖಾದ ಒಳಗೆ ಇರುವ ಸೀರೆ, ಹೆಣ್ಣಿನ ಒಳಗಿರುವ ಆಸೆಯನ್ನು ರೂಪಕವಾಗಿ ತೋರುವ ಬಗೆ ಗಮನಾರ್ಹ.
ಕತ್ತಲೆಯಲ್ಲಿ ಮೈ ಮೇಲೆ ಎರಗುವ ಸೈಕಲ್‌ನ ಗಾಲಿ ಇಲ್ಲಿ ಕಾಲಚಕ್ರ, ಮುಟ್ಟಿನ ಬಟ್ಟೆ ಎಂಬುದು ಹೆಣ್ಣಿನ ಬದುಕಿನ ರೈಲನ್ನು ಗಕ್ಕನೆ ನಿಲ್ಲಿಸುವ ಅಂಕುಶ, ಜೋಗತಿ ಸಂಪ್ರದಾಯದ ಭಕ್ತಿ ಮತ್ತು ಹಿಜಡಾ ಸಂಪ್ರದಾಯದ ಲಿಂಗ ಪರಿವರ್ತನೆ ಇವೆಲ್ಲವುಗಳ ಬಗ್ಗೆ ನಾಟಕ ಹೇಳುತ್ತದೆ. ಹುಲಿಗೆಮ್ಮತಾಯಿಯಾಗಿದ್ದಾಗಲೇ ಚೆನ್ನಾಗಿದ್ದಳು, ದೇವಿಯಾದ ಕೂಡಲೇ ನಮ್ಮಿಂದ ದೂರಾದಳು. ಗುಡಿಯಾಗಿದ್ದಾಗ ನಾವು ಒಳಗಿದ್ದೆವು, ಅರ್ಚಕರೆಂದು ಬಂದು ದೇವಸ್ಥಾನವಾದ ಕೂಡಲೇ ನಾವು ಹೊರಗೆ ಬಂದೆವು ಎನ್ನುವುದು ಬದಲಾಗುತ್ತಿರುವ ಸಮಾಜ ಮತ್ತು ಭಕ್ತರಿಂದ ದೂರಾದ ದೇವರನ್ನು ತೋರಿಸುತ್ತವೆ. ದೇವರೆಂದರೆ ಭರವಸೆ. ಅದೇ ಇಲ್ಲದೇ ಬದುಕು ಇನ್ನಷ್ಟು ಕೇಡು ಕಾಣುತ್ತದೆ. ಈಗಿನ ಮಾತೆಯರ ಪಾಡು ಹೇಗಿದೆಯೋ ? ಅನಿಸುತ್ತದೆ.
ಬದುಕು ಏನೆಲ್ಲಾ ಕಾಟಗಳನ್ನು ಕೊಡುತ್ತಿದ್ದರೂ ಮಂಜಮ್ಮನವರನ್ನು ಉಳಿಸಿದ್ದು ಅವರ ಕಲೆ ಮತ್ತು ಕೆಲಸ. ಸಂಬಂಧಗಳಿಗೆ ಸೋಲು, ಗೆಲುವಿದೆ. ಆದರೆ ಕಲೆಗೆ ಮತ್ತು ಕೆಲಸಕ್ಕೆ ಯಾವಾಗಲೂ ಏರುಮುಖದ ಫಲ. ‘ಮಾತಾ ಮಂಜಮ್ಮ ಜೋಗತಿ ಎನ್ನುವ ಸಾಲಿನಲ್ಲಿ ‘ಮಾತಾ ಅಂದರೆ ನನ್ನನ್ನು ಸಾಕಿದ ತಾಯಿ ಹುಲಿಗೆಮ್ಮೆ, ಮಂಜಮ್ಮ ಎಂದರೆ ಮಾತ್ರ ನಾನು, ಜೋಗತಿ ಎನ್ನುವುದು ಮಂದಿ ಎಂದು ಎಲ್ಲರನ್ನೂ ಒಳಗೊಳ್ಳುವ ಭಾವ’. ಇದು ಬದುಕಿನ ಸಾಕ್ಷಾತ್ಕಾರದಂತೆ ಅನಿಸುತ್ತದೆ. ತಾಯಿಗೆ ಎಲ್ಲಾ ಮಕ್ಕಳು ಒಂದೇ, ಕಲೆಗೆ ಅರಿವಿಗೆ ಜಾತಿ ಭೇದವಿಲ್ಲ ಎನ್ನುವ ಸಾರ್ವಕಾಲಿಕ ಸತ್ಯಗಳು ಇಲ್ಲಿ ಮೇಲ್ಮಟ್ಟಕ್ಕೆ ಏರುತ್ತವೆ.
ಅರುಣ್ ಕುಮಾರ್ ಅವರು ಮಂಜಮ್ಮ ಜೋಗತಿಯವರ ಬದುಕಿನ ಎಲ್ಲವನ್ನೂ ಎಡಬಿಡದೇ ನಮ್ಮ ಕಣ್ಣ ಮುಂದೆ ಕಟ್ಟಿಕೊಡುವ ಬಗೆ ಚೆನ್ನಾಗಿದೆ. ನಟನೆಯ ಏರಿಳಿತ ಮತ್ತು ತಲೆಯ ಮೇಲೆ ಕೊಡವನ್ನು ಇಟ್ಟುಕೊಂಡು ಕುಣಿಯುವುದು ಪರಕಾಯ ಪ್ರವೇಶ. ಮಂಜಮ್ಮನವರ ಸಣ್ಣ ಸಣ್ಣ ಹಾವಭಾವಗಳನ್ನು ಅವರು ಚೆನ್ನಾಗಿ ಕಟ್ಟಿಕೊಟ್ಟರು. ಬಳ್ಳಾರಿ ಸೀಮೆಯ ಮಾತುಗಳನ್ನೂ ಅವರು ಸೊಗಸಾಗಿ ಹರಡಿದ್ದಾರೆ.
ದೇಶದಲ್ಲಿ ನಮಗೆ ಇರುವ ಬಹು ದೊಡ್ಡ ಧರ್ಮ ಗ್ರಂಥ ಎಂದರೆ ನಮ್ಮ ಸಂವಿಧಾನ. ಈ ನಾಟಕದಲ್ಲಿ ಒಬ್ಬ ಕಲೆಗಾರ್ತಿ ಸಂವಿಧಾನ ಎತ್ತಿ ಹಿಡಿಯುತ್ತಾಳೆ. ಮೇಲ್ಜಾತಿಯಲ್ಲಿ ಹುಟ್ಟಿದ ಗಂಡಿನ ದೇಹದ ಒಳಗೆ ಇರುವ ಹೆಣ್ಣನ್ನ, ಮನೆಯಿಂದ ಹೊರಹಾಕಿ ಅವರ ಕುಟುಂಬ ಮಡಿವಂತಿಕೆ ಮೆರೆದರೆ, ಮೇಲ್ಜಾತಿಯ ಜೋಗತಿ ಮಂಜಮ್ಮ ತನ್ನ ಗುರು ಮಟ್ಟಿಕಲ್ ಬಸಪ್ಪ ಊಟ ಮಾಡಲು ಜೊತೆಗೆ ಕೂರಿಸದೆ, ಹೋಟೆಲ್ ಹೊರಗೆ ಕೂರಿಸಿ ಊಟ ಮಾಡಿಸುವ ಮೂಲಕ ಅವರ ಕಡೆಯಿಂದ ಅಸ್ಪೃಶ್ಯತೆಯನ್ನು ಅನುಭವಿಸಿದ ಬದುಕನ್ನು ಮತ್ತು ಅನುಭವಿಸುತ್ತಾ ಮಾನವತಾವಾದವನ್ನು ತಮ್ಮೊಳಗೆ ಬೆಳೆಸಿಕೊಳ್ಳಲು ಪ್ರೇರಣೆ ಆಗಿದೆ ಎಂದು ನಾಟಕ ನಮಗೆ ಹೇಳಿ ಕೊಡುತ್ತದೆ. ಒಂದು ಸಿಲ್ವರ್ ಪ್ಲೇಟ್ ಮತ್ತು ಸಿಲ್ವರ್ ಗ್ಲಾಸ್ ಅನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಹೇಳುವ ಮಂಜಮ್ಮ ಜೋಗತಿ ಅವರ ಪಾತ್ರ ಮಾಡಿದ ಅರುಣ್ – ಇಂತಹ ಅದ್ಭುತ ನಟ ಎಂದು ಗೊತ್ತಾಗುತ್ತದೆ.
ಸಂಗೀತ ಸಂಯೋಜನೆಯನ್ನು ಸವಿತಕ್ಕ ಮಾಡಿದ್ದಾರೆ. ಅವರ ಗಟ್ಟಿ ದನಿ ನಾಟಕಕ್ಕೆ ಬೇಕಾದ ಶಕ್ತಿಯನ್ನು ಸಂಗೀತದ ಮೂಲಕ ಬೆರೆಸುತ್ತಾರೆ. ಹಿಂದೆ ಆಗಾಗ ಬರುವ ಚೌಡಿಕಿ ಪದಗಳು, ಹುಲಿಗೆಮ್ಮನ ಜಾತ್ರೆಯನ್ನು ಬರೀ ಒಬ್ಬ ನಟ ರಂಗದ ಮೇಲೆ ಯಶಸ್ವಿಯಾಗಿ ತೋರಿಸಲು ಸಾಧ್ಯವಾಗಲು ಸಂಗೀತ ಮುಖ್ಯ ಕಾರಣ ಆಗುತ್ತದೆ. ರೇಡಿಯೋ ಹಿಡಿದು ಮಂಜಮ್ಮನ ಪಾತ್ರ ಕುಣಿಯುವಾಗ, ಮಂಜಮ್ಮ ತಮ್ಮ ಪ್ರೇಮ ಪ್ರಣಯದ ನೆನಪುಗಳನ್ನು ಹಂಚು ಕೊಳ್ಳುವಾಗ, ಹಿನ್ನಲೆ ಸಂಗೀತ ನಮ್ಮನ್ನು ರಂಜಿಸುತ್ತದೆ. ಅರುಣ್ ಜೋಳದ ಕೂಡ್ಲಿಗಿ ಬರೆದಿರುವ ‘ನಡುವೆ ಸುಳಿವ ಹೆಣ್ಣು’, ಡಾ ಚಂದ್ರಪ್ಪ ಸೊಬಟಿ ಅವರು ಬರೆದಿರುವ ‘ಮಂಜಮ್ಮ ಜೋಗತಿ’ ನಾಟಕ ಮತ್ತು ಹಲವೆಡೆ ಮಂಜಮ್ಮನವರು ಆಡಿದ ಮಾತುಗಳು ಮತ್ತು ಕೊಟ್ಟ ಸಂದರ್ಶನಗಳನ್ನು ಮೂಲವಾಗಿ ಇಟ್ಟುಕೊಂಡು ನಾಟಕವನ್ನು ಕಟ್ಟಿದ್ದಾರೆ ನಿರ್ದೇಶಕರು.
ನವಿಲುಗರಿಯಿಂದ ಸಜ್ಜಾದ ಕೊಡ, ಮೇಲೆ ದೇವರ ಮುಖಗಳು, ಹಿಂದೆ ಮತ್ತಷ್ಟು ನವಿಲು ಗರಿ ಮತ್ತು ಕವಿಗಳ ಹಾರ…ಇವೆಲ್ಲವುಗಳೂ ಸೇರಿದಂತೆ ರಂಗದ ಮೇಲೆ ಮುಖ್ಯ ಸೆಟ್ ಹಾಕಲಾಗಿತ್ತು. ಆಡಂಬರ ಇಲ್ಲ-ಅಸಹಜತೆ ಇಲ್ಲ. ಸಾಧಾರಣ ಟ್ರಾನ್ಸ್ ಜೆಂಡರ್, ಒಬ್ಬ ಜಾನಪದ ಕಲೆಗಾರ್ತಿ ಹಳ್ಳಿಯಿಂದ ದೆಹಲಿಯವರೆಗೆ ಸಾಗಿಬಂದ ಬದುಕನ್ನು ನಾಟಕ ಸಮರ್ಥವಾಗಿ ಕಟ್ಟಿಕೊಟ್ಟಿದೆ.
ಮರಾಠಿಯಲ್ಲಿ ಮೊದಲ ಬಾರಿಗೆ ಮಂಜಮ್ಮ ಜೋಗತಿ ಅವರ ಜೀವನದ ಆಧಾರಿತ ನಾಟಕ ‘ಮಂಜಮ್ಮ ಪುರಾಣಂ’ ಅನ್ನು ಪ್ರಯೋಗಕ್ಕೆ ತರಲಾಗಿತ್ತು. ಆ ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದು, ಝೀ ಖಾಸಗಿ ವಾಹಿನಿಯಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಈಗ ನಿರ್ದೇಶಕ ಬೇಲೂರು ರಘುನಂದನ್ ಕನ್ನಡ ರಂಗಭೂಮಿಗೆ ಇಂತಹ ಅಪರೂಪದ ಪ್ರಯೋಗವನ್ನು ತಂದಿದ್ದಾರೆ.
‘ಮಾತಾ’ ನಾಟಕ ಬರೀ ಮನೋರಂಜನೆಗೆ ಅಲ್ಲ; ಮನಃಪರಿವರ್ತನೆಗೆ ಪ್ರೇರಣೆಯೂ ಹೌದು.
ರಂಗ ತಂಡ ‘ಕಾಜಾಣ’ವನ್ನು ಕುರಿತು: ಸಾಹಿತ್ಯ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕವಾಗಿ ತನ್ನಷ್ಟಕ್ಕೆ ತಾನು ಒಂದು ದಶಕಕ್ಕು ಹೆಚ್ಚು ಕಾಲದಿಂದ ದುಡಿಯುತ್ತಿರುವ ಬಳಗ ಕಾಜಾಣ, ಕಾವ್ಯ, ಕಮ್ಮಟ, ರಂಗಕಮ್ಮಟ, ಚಿಣ್ಣರ ಕಾಜಾಣ, ಸಸ್ಯ, ಕಾಜಾಣ, ಸಿನಿಕಾಜಾಣ ಹೀಗೆ ಹತ್ತು ಹಲವಾರು ಭಿನ್ನ ಭಿನ್ನ ಪ್ರಕಾರಗಳ ಕಾರ್ಯಕ್ರಮಗಳನ್ನು ಕಳೆದ 13 ವರ್ಷಗಳಿಂದ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟಣೆ ಕೂಡ ಕಾಜಾಣದ ಮುಖ್ಯ ಹಾದಿಗಳಲ್ಲಿ ಒಂದು. ಸೃಜನಶೀಲ ಅಭಿವ್ಯಕ್ತಿಗಳಿಗಿರುವ ಅಗಾಧ ಸಾಧ್ಯತೆಗಳನ್ನು ನೆಚ್ಚಿ ಅನೇಕ ಕನಸು ಮತ್ತು ಭರವಸೆಗಳೊಂದಿಗೆ ಕಾಜಾಣ ಅವಿರತವಾಗಿ ಕೆಲಸ ಮಾಡುತ್ತಲೇ ಇದೆ.
ಪ್ರತೀ ವರ್ಷ ಕುಪ್ಪಳಿಯಲ್ಲಿ ನೂರಾರು ಹೊಸ ಕವಿಗಳಿಗಾಗಿ ಕಾವ್ಯ ಕಮ್ಮಟ, ಭರವಸೆಯ ಯುವ ಸಾಹಿತಿಗಳಿಗೆ ‘ಕಾಜಾಣ ಕಾವ್ಯ ಪುರಸ್ಕಾರ’ ಹಾಗೂ ಯುವ ರಂಗಕರ್ಮಿಗಳಿಗೆ ‘ಕಾಜಾಣ ರಂಗಪುರಸ್ಕಾರ’ ನೀಡುತ್ತಾ ಬಂದಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಾವ್ಯ ಕಾಜಾಣ ಯಶಸ್ವೀ ಕಾರ್ಯಕ್ರಮಗಳನ್ನೂ ಮಾಡುತ್ತಾ ಬಂದಿದೆ.
‘ಮೋಹನ ತರಂಗಿಣಿ’, ‘ಸಾಲು ಮರಗಳ ತಾಯಿ ತಿಮ್ಮಕ್ಕ’, ‘ಚಿಟ್ಟೆ’, ‘ಮುದ್ದುಮಗಳೆ’, ‘ಅಕ್ಕಯ್’ ನಾಟಕಗಳನ್ನು ರಂಗಕ್ಕೆ ತಂದಿದೆ. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ನಾಟಕ ಕಲೆಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮಗಳನ್ನು ರೂಪಿಸಿದ್ದು ಮಾತ್ರವಲ್ಲದೆ ಬೇರೆ ಬೇರೆ ತಂಡಗಳ ರಂಗ ಪ್ರಯೋಗಗಳನ್ನು ಆಯೋಜಿಸಿದೆ. ಇದೀಗ ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಅವರ ಜೀವನಾಧಾರಿತ ‘ಮಾತಾ’ ಎಂಬ ಏಕವ್ಯಕ್ತಿ ರಂಗ ಪ್ರಯೋಗವನ್ನು ಸಹೃದಯ ಮನಸ್ಸುಗಳಿಗಾಗಿ ಹೊತ್ತು ತರುತ್ತಿದೆ.
ಡಾ. ಬೇಲೂರು ರಘುನಂದನ್ – ನಾಟಕಕಾರ ಮತ್ತು ನಿರ್ದೇಶಕ
ಸಾಹಿತ್ಯ ಕ್ಷೇತ್ರ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು ಇಪ್ಪತೈದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಭಿನ್ನ ವಸ್ತು, ನಿರೂಪಣೆ, ಕಥನತಂತ್ರ ಮತ್ತು ನಾಟಕೀಯ ಅಂಶಗಳ ಮೂಲಕ ಅತ್ಯಂತ ಸಮರ್ಥ ನಾಟಕಗಳನ್ನು ಇವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುತ್ತಿದ್ದಾರೆ. ಇವರು ರಚಿಸಿರುವ ಇನ್ನೂರೈವತ್ತಕ್ಕೂ ಹೆಚ್ಚು ರಂಗಗೀತೆಗಳು ಪ್ರೇಕ್ಷಕರ ಮನಮುಟ್ಟಿವೆ. ಇವರ ನಾಟಕಗಳು ಇಂಗ್ಲೀಷ್, ಹಿಂದಿ ಕೊಂಕಣಿ ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ, ಜೊತೆಗೆ ನಟನಾಗಿಯೂ ಯಶಸ್ವಿಯಾಗಿದ್ದಾರೆ.
ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಅಲ್ಲಿಯೇ ಪದವಿ ಶಿಕ್ಷಣ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ಚಿನ್ನದ ಪದಕ ಸೇರಿದಂತೆ ಮೂರು ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ಧಿ ನಾಟಕಗಳು : ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ ‘ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೇ ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರವಾದ ಒಲವಿರುವ ಇವರು ಕಾವ್ಯ ಕಟ್ಟುಪದ, ನಾಟಕ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಅಂಕಣಬರಹ, ಕಥೆ, ಸಂಪಾದನೆ, ಸಂಶೋಧನೆ ಮತ್ತು ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.
2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ನೇಮಕ ಮತ್ತು ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2019ನೇ ಸಾಲಿನ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕಗೊಂಡದ್ದು ಇವರ ಸಾಂಸ್ಕೃತಿಕ ಸಾಧನೆಗೆ ಬೇಲೂರಿನ ಜನತೆ ಇವರಿಗೆ ನೀಡಿದ ಗೌರವ.
ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಯುವ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಆರ್ಯಭಟ ಪುರಸ್ಕಾರ, ‘ಆಯಾಮ’ ನಾಟಕಕ್ಕೆ ಶಿವಮೊಗ್ಗದ ರಂಗ ಕಲಾವಿದರ ಒಕ್ಕೂಟದಿಂದ ಬಹುಮಾನ, ಬೆಂಗಳೂರು ಕಿರು ನಾಟಕೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಹಶ್ಮಿ ಥಿಯೇಟರ್ ನಡೆಸಿದ ಎನಾಕ್ಟ್ ರಂಗೋತ್ಸವದಲ್ಲಿ ಅತ್ಯುತ್ತಮ ನಾಟಕಕಾರ ಪ್ರಶಸ್ತಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಮಯೂರವರ್ಮ ಪ್ರಶಸ್ತಿಗಳು ಇವರ ಸಾಹಿತ್ಯ ಮತ್ತು ರಂಗ ಕೃಷಿಗೆ ಸಂದಿವೆ.
ಪದ್ಮಶ್ರೀ ಬಿ ಮಂಜಮ್ಮ ಜೋಗತಿ – ಜನಪದ ಕಲಾವಿದೆ
ಪದ್ಮಶ್ರೀ ಜೋಗತಿ ಮಂಜಮ್ಮನವರು ಜೋಗತಿ ನೃತ್ಯ, ಚೌಡಡ್ಕಿ, ಪದ, ಯಲ್ಲಮ್ಮ ತಾಯಿ ಕಥೆಗಳನ್ನು; ಊರು, ಜಾತ್ರೆ, ಸಂತೆ, ವೇದಿಕೆ ಹೀಗೆ ಹಲವಾರು ಕಡೆ ಸಾವಿರಾರು ಪ್ರದರ್ಶನಗಳನ್ನು ನೀಡುವ ಮೂಲಕ ಜನಪದ ಕಲಾವಿದೆಯಾಗಿ ಮನೆಮಾತಾಗಿದ್ದಾರೆ. ಕಲೆಯನ್ನು ದೇವರಂತೆ ಆರಾಧಿಸುವ ಇವರು ತಮ್ಮ ಜೀವನವನ್ನು ಕಲೆಗೆ ಮುಡಿಪಾಗಿಟ್ಟಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆ, ಕುರುಗೋಡು ತಾಲೂಕಿನ ಕಲ್ಕಂಬದವರಾದ ಇವರು ಓದಿದ್ದು ಹತ್ತನೇ ತರಗತಿ. ದೈಹಿಕ ಮತ್ತು ಆಂತರಿಕ ಸಂಘರ್ಷಕ್ಕೆ ಒಳಗಾದ ಇವರು ತಮ್ಮ ದೇಹ ಪ್ರಕೃತಿಯನ್ನು ಗೌರವಿಸಿ 1985ರಲ್ಲಿ ಜೋಗತಿ ದೀಕ್ಷೆ ಪಡೆದುಕೊಂಡರು. ಮಟ್ಟಿಕಲ್ಲು ಬಸಪ್ಪ ಎಂಬುವವರಿಂದ ಜೋಗತಿ ನೃತ್ಯ ಕಲಿತು 1986ರಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕಾಳವ್ವ ಜೋಗತಿಯವರ ತಂಡಕ್ಕೆ, ಸೇರಿ ಕಲೆಯ ಮೂಲಕ ಜೀವನ ಕಟ್ಟಿಕೊಳ್ಳುತ್ತ ಹಾಗೂ ತಮ್ಮ ಜೋಗತಿ ನೃತ್ಯವೆಂಬ ಜಾನಪದ ಕಲೆಯನ್ನು ಅನೇಕರಿಗೆ ಹೇಳಿಕೊಡುವ ಮೂಲಕ ಉಳಿಸಿ ಬೆಳಸುತ್ತಿದ್ದಾರೆ. ಜೊತೆಗೆ ತಮ್ಮದೇ ಒಂದು ಗಂಡು ಜೋಗತಿ ತಂಡವನ್ನು ಕಟ್ಟಿಕೊಂಡು ಹಲವು ಕಡ ಪ್ರದರ್ಶನಗಳನ್ನೂ ನೀಡಿದ್ದಾರೆ.
ಮೊದಲಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಇವರು ನಂತರ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಪ್ರದರ್ಶಕ ಕಲೆಗಳ ಉನ್ನತ ಸಂಸ್ಥೆಗೆ ಮುಖ್ಯಸ್ಥರಾದ ಮೊದಲ ಟ್ರಾನ್ಸ್ ಮಹಿಳೆ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಜೋಗತಿ ನೃತ್ಯ ಮಾಡುವುದರ ಜೊತೆಗೆ ನಾಟಕಗಳನ್ನು ಕಟ್ಟಿ ನಾಡಿನಾದ್ಯಂತ ಪ್ರದರ್ಶನಗಳನ್ನೂ ನೀಡಿದ್ದಾರೆ. ಕರ್ನಾಟಕ ರಾಜ್ಯವಲ್ಲದ ಬೇರೆ ರಾಜ್ಯಗಳಾದ ನಾಗಪುರ, ದೆಹಲಿ ಇತ್ಯಾದಿ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ರಂಗಭೂಮಿ ಪ್ರವೇಶ ಮಾಡಿದ ಮಂಜಮ್ಮ ನಾಟಕಗಳಲ್ಲಿ ಅಭಿನಯ ಮಾಡುವುದರ ಜೊತೆಗೆ ವಾದ್ಯ ಮತ್ತು ನೃತ್ಯಗಾರ್ತಿಯೂ ಆಗಿದ್ದಾರೆ. ಇವರು ಜೋಗತಿ ನೃತ್ಯವಲ್ಲದೆ, ಕಿರುಚಿತ್ರ ಹಾಗೂ ಚಲನಚಿತ್ರದಲ್ಲೂ ಸಹ ಅಭಿನಯಿಸಿದ್ದಾರೆ.
ಇವರ ಕಲಾಸೇವೆಗೆ 2006-07ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಮಂಗಳೂರು, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ರಂಗಯೋಗಿ ಪುಶಸ್ತಿ, ಪ್ರಪಂಚ ಆರ್ಯವೈಶ್ಯ ಮಹಾಸಭಾ ಬೆಂಗಳೂರು ಇವರು ‘ವಾವ್ ಅವಾರ್ಡ್’, 2020ರಲ್ಲಿ ‘ಕಲಾಶ್ರೀ’ ಪ್ರಶಸ್ತಿ, 2021ರಲ್ಲಿ ಪದ್ಮಶ್ರೀ ಹಾಗೂ ಮುಂತಾದ ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಇವರ ಜೀವನಾಧಾರಿತ ‘ಮಾತಾ’ ನಾಟಕವನ್ನು ಖ್ಯಾತ ನಾಟಕಕಾರರಾದ ಡಾ. ಬೇಲೂರು ರಘುನಂದನ್ ರವರು ರಂಗರೂಪ, ವಿನ್ಯಾಸ ಮಾಡಿ ನಿರ್ದೇಶಿಸುತ್ತಿದ್ದಾರೆ.
ನಟ – ಅರುಣ್ ಕುಮಾರ್ ಆರ್.
ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಥಿಯೇಟರ್ ಕ್ಲಬ್, ರಂಗಚಿರಂತನದ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿ, ರಂಗಭೂಮಿಯ ವಿವಿಧ ತಂಡಗಳ ನಾಟಕಗಳಲ್ಲಿ ಕೆಲಸ ಮಾಡಿ, ಕಿರುತೆರೆ ಹಾಗೂ ಹಿರಿತೆರೆಯ ಹಲವು ಪಾತ್ರಗಳಲ್ಲಿ ಅಭಿನಯಿಸಿರುವ ರಂಗ ವಿದ್ಯಾರ್ಥಿ.
ಮೂಲತಃ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ, ಬನ್ನಂಗಾಡಿ ಗ್ರಾಮದವರಾದ ಇವರು ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲಿ, ಬಿ.ಕಾಂ. ವ್ಯಾಸಾಂಗ ಮಾಡಿ ನಟನೆ ಕಡೆಗೆ ಮುಖ ಮಾಡಿದ್ದಾರೆ ಹಾಗೂ ಯೋಗ ವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನು ಮಾಡಿದ್ದಾರೆ.
ಕಾಕನಕೋಟೆ ನಾಟಕದ ಮೋನ ಮೊದಲು ಅಭಿನಯಿಸಿದ ಪಾತ್ರ, ನಂತರ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ‘ಗೀತಾ’ ಸೇರಿದಂತೆ ಜೈ ಹನುಮಾನ್, ಗಟ್ಟಿಮೇಳ, ಅಗ್ನಿ ಸಾಕ್ಷಿ ಎಂಬ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ‘ಕಥಾಲೇಖನ’ ಎಂಬ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲೂ ಹೆಜ್ಜೆ ಇರಿಸಿದ್ದಾರೆ. ನೆರೆ ಭಾಷೆಯ ಸಿನಿಮಾ, ಧಾರಾವಾಹಿಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು, ಕಂಠದಾನ ಕಲಾವಿದ ಹಾಗೂ ನಿರೂಪಕರಾಗಿಯೂ ಕೆಲಸ ಮಾಡಿರುವ ಇವರು ಧಾರಾವಾಹಿಗಳಲ್ಲಿ ಮತ್ತು ಇನ್ನೂ ಹೆಚ್ಚಿನ ಸಿನಿಮಾಗಳಿಗೆ ಕಂಠದಾನ ಕಲಾವಿದರಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮರವರ ಜೀವನಾಧಾರಿತ ‘ಮಾತಾ’ ಎಂಬ ಏಕವ್ಯಕ್ತಿ ರಂಗ ಪ್ರಯೋಗದಲ್ಲಿ ಮಂಜಮ್ಮನವರ ಪಾತ್ರವನ್ನು ನಿರ್ವಹಿಸಲಿದ್ದಾರೆ.