ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-92’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಮಕ್ಕಳಿಗೆ ಮುಖವಾಡ ತೊಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರಕಾರ ಹಾಗೂ ಅಧ್ಯಾಪಕ ಅಶೋಕ್ ತೆಕ್ಕಟ್ಟೆ ಮಾತನಾಡಿ “ರಂಗಭೂಮಿಯ ಸಂಗತಿಗಳು ಭಿನ್ನಭಿನ್ನವಾಗಿರುತ್ತವೆ. ಪ್ರತೀ ನಿರ್ದೇಶಕರ ಯೋಚನೆಗನುಸಾರವಾಗಿ ರಂಗ ತಂತ್ರಗಳು ವಿಭಿನ್ನವಾಗಿ ರಂಗದಲ್ಲಿ ಚಿತ್ರಿತಗೊಳ್ಳುತ್ತವೆ. ಅದರಲ್ಲಿಯೂ ಮಕ್ಕಳ ರಂಗಭೂಮಿ ಬಹು ಕ್ಲಿಷ್ಠಕರವಾಗಿರುತ್ತದೆ. ಮಕ್ಕಳನ್ನು ಒಟ್ಟುಗೂಡಿಸಿ ರಂಗತಂತ್ರದಲ್ಲಿ ಮಾರ್ಪಾಡುಗೊಳಿಸಿ, ಕಾರ್ಯರೂಪಕ್ಕೆ ತರುವ ಕಾರ್ಯ ಸುಲಭಸಾಧ್ಯವಲ್ಲ. ಇದು ಸಾಧಕ ಕ್ಷೇತ್ರ. ಈ ನಿಟ್ಟಿನಲ್ಲಿ ಮಕ್ಕಳ ರಂಗಭೂಮಿಗಾಗಿ ಕೆಲಸ ಮಾಡುತ್ತಿರುವ ಕಲಾಭಿ ಚಿಲ್ಡ್ರನ್ಸ್ ಥಿಯೇಟರ್‌ನ ಕೆಲಸವನ್ನು ಮೆಚ್ಚಲೇ ಬೇಕು.” ಎಂದರು.
ರಂಗ ನಿದೇರ್ಶಕ ರಂಜಿತ್ ಶೆಟ್ಟಿ ಕುಕ್ಕುಡೆ, ರೊ. ಶ್ರೀಧರ ಆಚಾರ್ ತೆಕ್ಕಟ್ಟೆ, ಉದ್ಯಮಿ ಗೋಪಾಲ್ ಪೂಜಾರಿ ಬಾಳೆಹಿತ್ಲು, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ ಮಂಗಳೂರು ಇವರ ‘ಮೊಗ್ಲಿ’ ನಾಟಕ ಪ್ರದರ್ಶನ ಕಂಡಿತು.