ಬೆಂಗಳೂರು : ಕಳೆದ 46 ವರ್ಷಗಳಿಂದ ಕನ್ನಡ ನಾಟಕರಂಗದಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ‘ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡವು ದಿನಾಂಕ 02-09-2023 ಶನಿವಾರದಂದು ಸಂಜೆ 7.30 ಗಂಟೆಗೆ ಹನುಮಂತ ನಗರದ ಕೆ.ಹೆಚ್.ಕಲಾಸೌಧದಲ್ಲಿ ಹಿರಿಯ ನಾಟಕಕಾರ ಶ್ರೀ ಎಸ್.ವಿ. ಕೃಷ್ಣ ಶರ್ಮ ವಿರಚಿತ ‘ಮುಖವಾಡ’ ಒಂದು ನಿಗೂಢ ಕಥನ ನಾಟಕದ ಪ್ರದರ್ಶನವನ್ನು ನೀಡುತ್ತಿದೆ. ನಿರ್ದೇಶನ ಪ್ರದೀಪ್ ಅಂಚೆ ಹಾಗೂ ನಿರ್ವಹಣೆ ವೈ.ಕೆ.ಸಂಧ್ಯಾ ಶರ್ಮ.
ಅಭಿನಯಿಸುವ ಕಲಾವಿದರು- ಪೂಜಾ ರಾವ್, ರಾಘವೇಂದ್ರ ನಾಯಕ್, ಶ್ರೀಕಾಂತ್ ಶ್ರೌತಿ, ಸುನಿಲ್ ನಾಗರಾಜ ರಾವ್ ಮತ್ತು ವಿಜಯ ಕಶ್ಯಪ್. ಬೆಳಕು- ಮಹದೇವಸ್ವಾಮಿ, ರಂಗಸಜ್ಜಿಕೆ- ವಿಶ್ವನಾಥ ಮಂಡಿ. ಹಿನ್ನಲೆ ಸಂಗೀತ ನಿರ್ವಹಣೆ-ನರೇಂದ್ರ ಕಶ್ಯಪ್
ಮುಖವಾಡ ನಾಟಕದ ಸಾರಾಂಶ
ಮನದಾಳದಲ್ಲೆಲ್ಲೋ ಹುದುಗಿರುವ ಮಾನವನ ಕ್ರೌರ್ಯ, ಸಜ್ಜನಿಕೆಯ ಮುಖವಾಡವನ್ನು ಕಳಚಿ, ಒಮ್ಮೆಲೆ ಅವನ ನೈಜ ಸ್ವಭಾವವನ್ನು ಅನಾವರಣಗೊಳಿಸುವ ಕಥೆಯೇ ‘ಮುಖವಾಡ’ ನಾಟಕದ ವಸ್ತು. ಬರಹಗಾರನೊಬ್ಬನ ಬರವಣಿಗೆಗೂ, ಅವನ ಚಿಂತನೆಗಳಿಗೂ, ಸ್ವಭಾವಗಳಿಗೂ ಇರುವ ಅಂತರ, ಸಮನ್ವಯವಿಲ್ಲದ ಅವನ ನೈಜ ನಡವಳಿಕೆಗಳನ್ನು ಎತ್ತಿ ತೋರಿಸುವ ನಾಟಕವಾಗಿ ‘ಮುಖವಾಡ’ ಮೂಡಿಬಂದಿದೆ. ಆದರೆ ಆತನ ಸಂಚುಗಳನ್ನು ಮೀರಿ ಪ್ರತಿಸಂಚೊಂದು ಸಹಜವಾಗಿ ಘಟಿಸುವುದನ್ನು ಅವನೆಂದೂ ತಿಳಿಯಲಾರ ಎಂಬ ಸತ್ಯವನ್ನು ತಿಳಿಸುವ ಸನ್ನಿವೇಶವನ್ನು ಈ ನಾಟಕದಲ್ಲಿ ಬಳಸಲಾಗಿದೆ.
ಮನುಷ್ಯನ ತನ್ನ ಅಂತರಂಗದಲ್ಲಿ ಹುದುಗಿರುವ ಆಸೆ-ಅಭೀಷ್ಟೆಗಳ ಈಡೇರಿಕೆಗಾಗಿ, ಯಾವ ಹಂತಕ್ಕೂ ಹೋಗಬಲ್ಲ, ಯಾವ ಹೇಯ ಕೃತ್ಯ-ಕ್ರೌರ್ಯಕ್ಕೂ ಹಿಂಜರಿಯಲಾರ. ಈ ಅಂಶವನ್ನು, ಬರಹಗಾರನೊಬ್ಬನ ಜೀವನದ ಕಥೆಯ ಸನ್ನಿವೇಶಗಳಲ್ಲಿ ಅನ್ವೇಷಿಸಲಾಗಿದೆ. ಲೇಖಕನೊಬ್ಬನ ಬರಹಕ್ಕೂ, ಆತನ ನಿಜ ಸ್ವಭಾವಕ್ಕೂ ಇರುವ ಅಂತರದ ವಿಡಂಬನಾತ್ಮಕ ಸತ್ಯಕ್ಕೆ ಕನ್ನಡಿ ಹಿಡಿಯುವ ‘ಮುಖವಾಡ’ ನಾಟಕ ಕೌತುಕತೆಯೊಂದಿಗೆ ಸ್ವಾರಸ್ಯವನ್ನು ಕಾಯ್ದಿಟ್ಟುಕೊಂಡಿದೆ.
ರಚನೆ: ಶ್ರೀ ಎಸ್.ವಿ. ಕೃಷ್ಣ ಶರ್ಮ
ನಿರ್ದೇಶನ: ಪ್ರದೀಪ್ ಅಂಚೆ
ನಿರ್ವಹಣೆ: ವೈ.ಕೆ.ಸಂಧ್ಯಾ ಶರ್ಮ