ಬೆಂಗಳೂರು : ಕರ್ಣಾನಂದ ಮಧುರಗಾನಕ್ಕೆ ಭಾಷೆ -ಎಲ್ಲೆಗಳ ಹಂಗಿಲ್ಲ. ಸುಸ್ವರ ಗಾನಾಮೃತ ಪ್ರತಿ ಹೃದಯಗಳ ತಂತಿ ಮೀಟಿ ರಸಾಸ್ವಾದನೆಗೆ ಅನುವು ಮಾಡಿಕೊಡುತ್ತದೆ, ಮಧುರಾನುಭೂತಿಯನ್ನು ಉಂಟು ಮಾಡುತ್ತದೆ. ಸಂಗೀತ ಎಂದೂ ನವನವೋನ್ಮೇಷಶಾಲಿನಿಯಾದ್ದರಿಂದ ಕಲ್ಲನ್ನೂ ಕರಗಿಸಿಬಿಡುವ ಅಗಾಧ ಶಕ್ತಿಯನ್ನು ಹೊಂದಿರುವುದರಿಂದ ಸಂಗೀತಕ್ಕೆ ಸೋಲದ ಮನಸ್ಸಿಲ್ಲ. ಇಂಥ ನಿತ್ಯ ನೂತನ ಉಲ್ಲಾಸಿತ ಸಂಗೀತ ಕಾರ್ಯಕ್ರಮವೊಂದು ಈ ಉದ್ಯಾನ ನಗರಿಯ ಕಲಾರಸಿಕರ ಮನತಣಿಸಲು ಬಹು ಅಚ್ಚುಕಟ್ಟಾಗಿ ರೂಪುಗೊಂಡಿದೆ.
ದಿನಾಂಕ 25-01-2024ರ ಗುರುವಾರದಂದು ಸಂಜೆ ಘಂಟೆ 6.00ರಿಂದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ‘ಅಶ್ವಗಾನ’ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯುವ ಗಾಯಕರಾದ ಭಾರ್ಗವ್ ಹೆಚ್.ಸಿ. ಮತ್ತು ಮೋಹಿತ್ ಪಿ. ಹಾಗೂ ಇನಿದನಿಯ ಸಾಕ್ಷಿ ಜಗದೀಶಳ ರೋಮಾಂಚಕ ನಾದಲೀಲೆಯ ‘ಆರಂಭ’ ಸಂಗೀತ ಕಾರ್ಯಕ್ರಮ ಅನಾವರಣಗೊಳ್ಳಲಿದೆ.
ಯುವಕದ್ವಯರಾದ ಭಾರ್ಗವ್ ಹೆಚ್.ಸಿ. ಮತ್ತು ಮೋಹಿತ್ ಪಿ. ಹಾಗೂ ತರುಣಿ ಸಾಕ್ಷಿ ಈ ಮೂವರೂ ಪ್ರತಿಭಾನ್ವಿತ ಗಾಯಕರು. ಇನಿದನಿಯ ನಿನಾದವನ್ನು ಹೊರಹೊಮ್ಮಿಸುವ ತಾಜಾ ಪ್ರತಿಭೆ ಕು. ಸಾಕ್ಷೀ ಜಗದೀಶ್, ಗೀತೆಯ ಅಂತರಾಳದ ಭಾವವನ್ನು ಆವಿರ್ಭವಿಸಿಕೊಂಡು ತನ್ಮಯತೆಯಿಂದ ಅಷ್ಟೇ ಭಾವಪೂರ್ಣವಾಗಿ ಹಾಡುವ ಗಾನಕೋಗಿಲೆ ಎಂದರೆ ಅತಿಶಯೋಕ್ತಿಯಲ್ಲ. ದೈವದತ್ತ ಮಧುರ ಕಂಠ, ರಕ್ತಗತವಾಗಿ ಬಳುವಳಿ ಪಡೆದ ಸಂಗೀತಜ್ಞಾನ, ಪರಿಶ್ರಮದಿಂದ ಅರ್ಜಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅರಿವು-ವಿದ್ಯೆ ಅವಳ ಸಂಸ್ಕಾರದ ಪುಣ್ಯವೂ ಹೌದು. ಸಂಗೀತ- ನೃತ್ಯ ಮತ್ತು ರಂಗಭೂಮಿಯ ಸಾಂಸ್ಕೃತಿಕ ಹಿನ್ನಲೆಯುಳ್ಳ ಕುಟುಂಬದಿಂದ ಒಡಮೂಡಿರುವ ಯುವಪ್ರತಿಭೆ ಸಾಕ್ಷೀ ಜಗದೀಶ್ ಜನಿಸಿದಂದಿನಿಂದ ಅವಳ ಕಿವಿಯ ಮೇಲೆ ಬಿದ್ದ ನಾದತರಂಗಗಳೇ ಅವಳ ವ್ಯಕ್ತಿತ್ವವನ್ನು ರೂಪಿಸಿದೆ ಎನ್ನಬಹುದು. ವಿಶ್ವಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಡಾ. ಪುಸ್ತಕಂ ರಮಾ ಇವಳ ಅಜ್ಜಿ ಹಾಗೂ ಸಂಗೀತ ಕಲಿಕೆಗೆ ಮಾರ್ಗದರ್ಶಕ ಗುರು. ಪುಟ್ಟಬಾಲಕಿ ಸಾಕ್ಷಿ ಬಾಲ್ಯದ ತನ್ನ ಐದರ ಎಳವೆಯಿಂದಲೇ ಸಂಗೀತಕ್ಕೆ ಒಲಿದವಳು.
ರಕ್ತಗತವಾಗಿ ದತ್ತವಾದ ಸಿರಿಕಂಠ, ಅಭ್ಯಾಸದಿಂದ ಹದಗೊಂಡು, ಶಾಸ್ತ್ರೀಯ ಸಂಗೀತಾಭ್ಯಾಸದೊಡನೆ, ಕಳೆದೆರಡು ವರ್ಷಗಳಿಂದ ಅನುಪಮ ಗಾಯಕಿ ಸುಪ್ರಿಯಾ ರಘುನಂದನ್ ಅವರಲ್ಲಿ ಭಾವಗೀತೆಗಳನ್ನು ಕಲಿಯುತ್ತಿದ್ದಾಳೆ. ಜೊತೆಗೆ ನಾಟ್ಯಗುರು ವೀಣಾ ಮೂರ್ತಿ ವಿಜಯ್ ಅವರಲ್ಲಿ 5 ವರ್ಷಗಳಿಂದ ನಾಟ್ಯಾಭ್ಯಾಸ ಮಾಡುತ್ತಾ, ಮನೋಜ್ಞ್ಯ ಬಾಲರಾಜು ಅವರಲ್ಲಿ ಸಮಕಾಲೀನ ನೃತ್ಯದಲ್ಲೂ ತರಬೇತಿಗೊಳ್ಳುತ್ತಿರುವ ಬಹುಮುಖ ಪ್ರತಿಭೆ ಇವಳ ವೈಶಿಷ್ಟ್ಯ. ಇದರೊಡನೆ ಇವಳು, ಹಿಪ್-ಹಾಪ್ ಪಾಶ್ಚಾತ್ಯ ನೃತ್ಯಶೈಲಿಯಲ್ಲೂ ಪರಿಣಿತಳು. ಸಕಲ ಕಲಾವಲ್ಲಭೆಯಾದ ಇವಳು, ಚಿಕ್ಕಂದಿನಿಂದ ಎಲ್ಲಾ ಕಲಾಚಟುವಟಿಕೆಗಳಲ್ಲಿ ಸಕ್ರಿಯಳು. ಶಾಲಾ-ಕಾಲೇಜುಗಳಲ್ಲಿನ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿರುವ ಸಾಕ್ಷಿ, ರಾಷ್ಟ್ರೀಯ ಸಂಗೀತ- ನೃತ್ಯೋತ್ಸವಗಳಲ್ಲಿ ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಇವಳದು. ಅಭಿನಯವನ್ನೂ ರೂಢಿಸಿಕೊಂಡಿರುವ ಇವಳು, ಖ್ಯಾತ ನಿರ್ದೇಶಕ ನಾಗಾಭರಣ ಅವರ ನಿರ್ದೇಶನದ ‘ಬೆಂಗಳೂರು ನಾಗರತ್ನಮ್ಮ’ ನಾಟಕದಲ್ಲಿ ಸೂತ್ರಧಾರರಲ್ಲಿ ಒಬ್ಬಳಾಗಿ ಮುಖ್ಯಪಾತ್ರ ವಹಿಸಿದ ಹೆಮ್ಮೆ-ತೃಪ್ತಿ ಇವಳಿಗಿದೆ.
ಇದೀಗ ಸಾಧನೆಯ ಪಥದಲ್ಲಿ ಕ್ರಮಿಸುತ್ತಿರುವ ಈ ಯುವಗಾಯಕಿ, ತನ್ನ ಸಂಗೀತ ಪಯಣದ ಶುಭಾರಂಭದ ಸಂತಸ-ಸಂಭ್ರಮದಲ್ಲಿದ್ದಾಳೆ. ಸಾಕ್ಷಿಯ ತಾಯಿಯಾದ ಪ್ರಸಿದ್ಧ ಕಿರುತೆರೆ ನಟಿ ಶ್ರೀಮತಿ ಪದ್ಮಿನಿ ನರಸಿಂಹನ್ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ‘ಆರಂಭ’ ಅನ್ವರ್ಥಕ ಶೀರ್ಷಿಕೆಯ ಕಾರ್ಯಕ್ರಮದಲ್ಲಿ, ಅದಮ್ಯ ಉತ್ಸಾಹದ ಸಂಗೀತ ಯುವಕಲಾವಿದರಾದ ಭಾರ್ಗವ್ ಹೆಚ್.ಸಿ., ಮೋಹಿತ್ ಪಿ. ಹಾಗೂ ಸಾಕ್ಷಿ ತಮ್ಮ ಕಲಾವಂತಿಕೆಯನ್ನು ಸಾಕ್ಷಾತ್ಕಾರಗೊಳಿಸಲಿದ್ದಾರೆ.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.