ಮಹಾಬಲ ಲಲಿತಕಲಾ ಸಭಾ (ರಿ.) ಪುತ್ತೂರಿನ ಜೈನ ಭವನದಲ್ಲಿ ದಿನಾಂಕ 26 ಫೆಬ್ರವರಿ 2025ರಂದು ಆಯೋಜಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಶೋತೃಗಳನ್ನು ಸಂಗೀತ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು. ಹಾಡುಗಾರಿಕೆಯಲ್ಲಿ ತರುಣ ವಿದ್ವಾನ್ ಸಾಕೇತರಾಮನ್, ವಯಲಿನ್ ತರುಣ ವಿದ್ವಾಂಸ ಡಾ. ನಿಶಾಂತಚಂದ್ರನ್, ಮೃದಂಗದಲ್ಲಿ ಹಿರಿಯ ವಿದ್ವಾಂಸ ಮನ್ನಾರ್‌ಕೋಯಿಲ್ ಬಾಲಾಜಿ, ಖಂಜೀರದಲ್ಲಿ ಮತ್ತೋರ್ವ ತರುಣ ಕಲಾವಿದ ಉಡುಪಿ ಶ್ರೀಕಾಂತ್ ಈ ಸಂಗೀತ ಕಛೇರಿಯನ್ನು ಅತ್ಯಂತ ರಸವತ್ತಾಗಿ ನಡೆಸಿಕೊಟ್ಟರು.
ಅಪರೂಪ ರಾಗ ನಳಿನಕಾಂತಿ ಕಿರು ಆಲಾಪನೆಯೊಂದಿಗೆ ‘ನೀವೇ ಗತಿಯನಿ’ ಎಂಬ ವರ್ಣ ಚರಣ ‘ಮಾರ ಕೋಟಿ ಸುಂದರಾ’ ಬಹಳ ಸುಂದರವಾದ ಚಿಟ್ಟೆಸ್ಟರಗಳಲ್ಲದೆ ಮನೋಧರ್ಮ ಸ್ವರಗಳೊಂದಿಗೆ ಕಛೇರಿಯ ಪ್ರಾರಂಭ. ಪುರಂದರ ದಾಸರ ‘ಜಯ ಜಾನಕೀಕಾಂತ’ ನಾಟ ರಾಗದಲ್ಲಿ ಷಟ್ ಸ್ಮೃತಿ ದೈವತ ಪ್ರಯೋಗದೊಂದಿಗೆ ‘ದಶರಥಾತ್ಮಜ’ ಎಂಬಲ್ಲಿ ಸ್ವರಪ್ರಸ್ತಾರಗಳಲ್ಲಿ ಪ್ರತೀ ಆವರ್ತನಕ್ಕೂ ತ್ಯಾಗರಾಜರ ಪಂಚರತ್ನ ಕೀರ್ತನೆ ‘ಜಗದಾನಂದಕಾರಕ’ದಲ್ಲಿಯ ಚರಣಗಳ ಸ್ವರಗಳನ್ನು ಅಳವಡಿಸಿ ತಮ್ಮದೇ ಸ್ವರಗಳ ಮುಕ್ತಾಯ ಸೇರಿಸಿ ಹಾಡಿದುದು ರಸಿಕರ ಮನ ಮುಟ್ಟಿತು. ಅದಕ್ಕೆ ತಕ್ಕಂತೆ ಆಸ್ವಾದಿಸಲು ಅರಿತ ರಸಿಕರು ಇದ್ದರು. ‘ಹಂಸಾನಂದಿ’ ರಾಗಾ ಲಾಪನೆಯೊಂದಿಗೆ ಚೆಂಬೈಯವರಿಗೆ ಪ್ರಿಯವಾದ ‘ಪಾವನಗುರು ಪವನಪುರಾಧೀಶ’ ಕೀರ್ತನೆ, ಸ್ವರಶತ ಶುಭಕಾರಂ ಎಂಬಲ್ಲಿ ನೆರವಲ್, ಆ ಮೇಲೆ ಪಾವನ ಗುರುವಿಗೆ ಕಲ್ಪನಾ ಸ್ವರಗಳು.
‘ಸಾಮ ರಾಗದ ಆಲಾಪನೆಯನ್ನು ಪ್ರಾರಂಭಿಸಿದಾಗ ಶಾಂತ ವಾತಾವರಣ ಉಂಟಾಯಿತು. ‘ಅನ್ನಪೂರ್ಣೆ ವಿಶಾಲಾಕ್ಷಿ’ ಕೀರ್ತನೆಯು ಸೊಗಸಾಗಿ ಸಾಗಿತು. ‘ಉನ್ನತ ಗರ್ತ’ ಎಂಬಲ್ಲಿ ವಿವಿಧ ಹಾಡುಗಾರರ ಸಂಗತಿಗಳನ್ನು ಅನುಸರಿಸುವಲ್ಲಿ ಮೃದಂಗವಾದನವೂ ಉತ್ಸಾಹದಿಂದ ಆರ್ಭಟಿಸಿತು. ಪುರಂದರ ದಾಸರ ‘ಯಾರೇ ರಂಗನ’ (ಹಿಂದೋಳ) ದೇಶಾದಿ ತಾಳದಲ್ಲಿ ಹಾಡಿದಾಗ ಮೃದಂಗವು ಪುನಃ ಆರ್ಭಟಿಸಲು ಅನುವಾಯಿತು. ಕಛೇರಿಯ ಮುಖ್ಯ ರಾಗ ಮೋಹನವನ್ನು ವಿಸ್ತರಿಸುವಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರ ‘ಗಿರಿಧರ ಗೋಪಾಲ ನೆನಪಿಗೆ ಬರುವಂತೆ ಆಲಾಪಿಸಿದರು. ‘ಮೋಹನ ರಾಮ’ ಕೀರ್ತನೆಯು ಕ್ಲಿಷ್ಟಸಂಗತಿಗಳೊಂದಿಗೆ ಹೊಂದಾಣಿಕೆ ಮಾಡುವಲ್ಲಿ ಮೃದಂಗದ ಮೃದುತ್ವ ಮೀರಿ ಹೋಯಿತೆಂದನಿಸಿತು. ವಯಲಿನ್‌ನಲ್ಲಿ ಈ ರಾಗವು ಮೋಹಕವಾಗಿತ್ತು. ಮುಂದೆ ಸುದೀರ್ಘ ದನಿಯಲ್ಲಿ ಕೆಲವು ಅವರ್ತಗಳು ಸಮಗ್ರಹದಲ್ಲೂ ಕೊನೆಗೆ ‘ಅನಾಗತ ಎಡುಪ್ಪಿನಲ್ಲೂ ರಂಜಿಸಿದುವು.
ಕಛೇರಿಯ ವಿಶೇಷತೆ – ದೇಶ್ ರಾಗದ ರಾಗಂ ತಾನಂ ಪಲ್ಲವಿ ‘ದೇಶ ಸೇವ್ಯೆ ಸೈಯ್ಯಾ ವಾರಡೀ ಉಲಗಿಲ್’. ಕಲಾವಿದರು ಪಲ್ಲವಿಯನ್ನು ತಮಿಳು, ತೆಲುಗು, ಕನ್ನಡ, ಮಲಯಾಳ ಭಾಷೆಗಳಲ್ಲಿ ಹಾಡಿ ಮಣಿಪ್ರವಾಳ ರೂಪಕೊಟ್ಟದ್ದಲ್ಲದೆ, ಸಾವೇರಿ, ಖಮಾಚ್, ರೇವತಿ ರಾಗಗಳಲ್ಲಿ ಹಾಡಿ ರಾಗಮಾಲಿಕೆ ಸ್ವರೂಪವನ್ನೂ ಕೊಟ್ಟರು. ‘ಇನ್ನು ದಯಬಾರದೆ’ (ಕಲ್ಯಾಣ ವಸಂತ) ಎಂಬ ದಾಸರ ಪದ ಮತ್ತು ಬೇಹಾಗ್ ರಾಗದ ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಲಾಯಿತು.
ವಿದ್ವಾನ್ ಹರಿಹರ ಬಾಯಾಡಿ