ಧಾರವಾಡ : ಪಂ. ನಾರಾಯಣರಾವ ಮುಜುಂದಾರ ಸ್ಮೃತಿ ಸಂಗೀತ ಸಭಾ ಧಾರವಾಡ ಸಂಸ್ಥೆಯು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಇವರ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಪಂ. ನಾರಾಯಣರಾವ ಮುಜುಂದಾರ ಅವರ 25ನೆಯ ಮತ್ತು ಅವರ ಮಗ ಪಂ. ಸುಧೀಂದ್ರ ಮುಜುಂದಾರ ಅವರ 18ನೆಯ ಪುಣ್ಯಸ್ಮರಣೆಯೊಂದಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು 17 ನವೆಂಬರ್ 2024ರಂದು ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಸಭಾ ಭವನದಲ್ಲಿ ನಡೆಯಲಿದೆ.
ಪಂ. ನಾರಾಯಣ ರಾವ ಮುಜುಂದಾರ ಪಂ.ಗುರುರಾವ ದೇಶಪಾಂಡೆ ಯವರ ಶಿಷ್ಯ. ಶುದ್ಧ ಶಾಸ್ತ್ರೀಯ ಸಂಗೀತವನ್ನು ಕಲಿತು, ಅದನ್ನೇ ತಮ್ಮ ಶಿಷ್ಯಂದಿರಿಗೆ ಹೇಳಿಕೊಟ್ಟ ಧೀಮಂತ. ಅವರ ಮಗ ಪಂ. ಸುಧೀಂದ್ರ ಮುಜುಂದಾರ ಇವರು ಒಬ್ಬ ಅತ್ಯುತ್ತಮ ತಬಲಾಪಟು ಆಗಿದ್ದು, ಪಂ.ಗಿರೀಶ ಆವಟೆ ಮತ್ತು ಪಂ.ಬಸವರಾಜ ಬೆಂಡಿಗೇರಿ ಅವರಲ್ಲಿ ತಬಲಾ ಕಲಿತು ಅನೇಕ ಕಲಾವಿದರಿಗೆ ಸಾಥ್ ಸಂಗತ್ ಮಾಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ತಬಲಾ ಕಲಾವಿದರಾಗಿದ್ದ ಇವರು ಅನೇಕ ಭಕ್ತಿ, ಭಾವ ಗೀತೆಗಳಿಗೆ ಸ್ವರ ಸಂಯೋಜನೆಯನ್ನು ಮಾಡಿದ್ದರು. ಅವರ ಶ್ರಮ ಫಲ ಕೊಡುವ ಮೊದಲೇ ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿದರು.
ಅವರ ಸ್ಮರಣಾರ್ಥ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಕೃಷ್ಣ ಕಟ್ಟಿ ಅವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಯವರು ವಹಿಸಲಿದ್ದಾರೆ. ಡಾ.ಮುಕ್ತಾ ಮುಜುಂದಾರ, ಶ್ರೀಮತಿ. ರಾಧಿಕಾ ಕಾಖಂಡಿಕಿ, ಶ್ರೀಮತಿ ರಶ್ಮಿ ಕಾಖಂಡಿಕಿ, ಶ್ರೀಮತಿ ಉಷಾ ಕುಲಕರ್ಣಿ, ಶ್ರೀ ವಿನಯ ಮುಜುಂದಾರ ಅವರು ಗಾಯನವನ್ನು ಪ್ರಸ್ತುತ ಪಡಿಸಿದರೆ, ಶ್ರೀಮತಿ ಶ್ರುತಿ ಅರ್ಚಕ ಮತ್ತು ಶ್ರೀಮತಿ ನೂರಜಹಾನ ನದಾಫ ಅವರಿಂದ ಸಿತಾರ್ ಜುಗಲಬಂದಿ ನಡೆಯಲಿದೆ. ಸಹ ಕಲಾವಿದರಾಗಿ ತಬಲಾದಲ್ಲಿ ಶ್ರೀ ಶಾಂತಲಿಂಗ ಹೂಗಾರ, ಶ್ರೀ ನಿಸಾರ್ ಅಹಮದ್, ಶ್ರೀ. ಜಯತೀರ್ಥ ಪಂಚಮುಖಿ ಮತ್ತು ಶ್ರೀ ಸುರೇಶ ನಿಡಗುಂದಿ ಅವರು ಸಾಥ್ ನೀಡಿದರೆ, ಸಂವಾದಿನಿಯಲ್ಲಿ ಶ್ರೀ. ಪರುಶರಾಮ ಕಟ್ಟಿ ಸಂಗಾವಿ ಮತ್ತು ಶ್ರೀ ಕಿರಣ ಅಯಾಚಿತ ಅವರು ಸಾಥ್ ನೀಡಲಿದ್ದಾರೆ . ಶ್ರೀ ರವಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.