ವಿದುಷಿ ರಂಜನಿ ಹೆಬ್ಬಾರ್ ಅವರನ್ನು ನೆನಪಿಸಿಕೊಳ್ಳುತ್ತಾ ಒಂದು ರಾಗವನ್ನು ಪಾರಂಪರಿಕ ಪದ್ಧತಿಯಂತೆ ಕ್ರಮಬದ್ಧವಾಗಿ ಬೆಳೆಸಿಕೊಂಡು ಹೋಗಬೇಕೆನ್ನುವ ಸಂಗೀತಜ್ಞರು ಒಂದೆಡೆ, ಅದೇ ರಾಗಸೌಧವನ್ನು ಪ್ರವೇಶಿಸಲು ಹತ್ತಾರು ಪಾರ್ಶ್ವಗಳಿಂದ, ಹೊಸ ಹೊಸ ಕಿಂಡಿಗಳು ತೆರೆದುಕೊಳ್ಳುತ್ತಿರುವುದನ್ನು ಗುರುತಿಸಿ ಸಂತೋಷಪಡುವ ಶ್ರೋತೃಗಳು ಇನ್ನೊಂದೆಡೆ. ಈ ಎರಡನೆಯ ವರ್ಗದ ರಸಿಕರನ್ನು ತಮ್ಮ ನಿರೂಪಣಾ ವೈಖರಿಯಿಂದ ಸೆರೆಹಿಡಿದ ಕಲಾವಿದರು ಮೈಸೂರಿನ ವಿದ್ವಾನ್ ಜಿ.ಕೆ. ಮನಮೋಹನ್ ಕೃಷ್ಣ. ಶ್ರೇಷ್ಠ ಗಾಯಕಿಯಾಗಿದ್ದ ರಂಜನಿ ಹೆಬ್ಬಾರ್ ಇವರ ಸ್ಮರಣಾರ್ಥ ದಿನಾಂಕ 28 ಸೆಪ್ಟೆಂಬರ್ 2025ರಂದು ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ‘ರಾಗರತ್ನಮಾಲಿಕೆ -41’ ಸರಣಿಯಲ್ಲಿ ಮನಮೋಹನ ಕೃಷ್ಣ ಇವರ ಕಚೇರಿಯು ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು.
ನಗುಮುಖದ, ಅಂತೆಯೇ ಮೃದುಶಾರಿರದ ಗಾಯಕರು; ಸಾಂಪ್ರದಾಯಿಕತೆಗಿಂತ ತುಸು ಭಿನ್ನವೆನಿಸುವ, ಪಾಂಡಿತ್ಯಪೂರ್ಣ ಹಾಗೂ ವಿನೂತನವಾದ ವಿಯ ಗಾಯನ ಶೈಲಿ ! ಸಂಪೂರ್ಣ ರಾಗವಿರಲಿ – ಅತ್ಯಂತ ತ್ವರಿತಗತಿಯ ‘ಅ’ ಕಾರಗಳು ಮತ್ತು ಅಲ್ಲಲ್ಲಿ ಗೃಹಬೇಧಗಳ ಸಂಹಿತ ಅನಾಯಾಸವಾಗಿ ಹಾಡಬಲ್ಲ -ಅದೇ ಸಮಯದಲ್ಲಿ ಶ್ರುತಿ ಹಾಗೂ ಸ್ವರಸ್ಥಾನಗಳ ನಿಖರತೆಯನ್ನು ಕಾಯ್ದುಕೊಳ್ಳಬಲ್ಲ ಅಪರೂಪದ ಗಾಯಕರು! ತುಸುವೇ ಲಘು ಸಂಗೀತದ ದಾಟಿಯಲ್ಲಿ ಹಿಂದೋಳ (ಸಾಮಗಾನ) ರಂಜನಿ (ಪ್ರಣಮಾಮ್ಯ ಚಾರು ಕೇಶಿ (ಕರುಣೈವರಮೋ) ರಚನೆಗಳನ್ನು ರಾಗ, ಸ್ವರಪ್ರಸ್ತಾರಗಳೊಂದಿಗೆ ಆಕರ್ಷಕವಾಗಿ ನಿರೂಪಿಸಿದ ಕಲಾವಿದರು ರಾಗಾಲಾಪನೆಯೊಂದಿಗೆ ಸಹನ (ಮಾನಮುಗ) ಮತ್ತು ಶಂಕರಾಭರಣ ದೇವೀ ಕೃತಿಗಳನ್ನು ಪ್ರಸ್ತುತಪಡಿಸಿದರು.
ರಾಗ ತಾನ ಪಲ್ಲವಿಗಾಗಿ ನಾಸಿಕಭೂಷಿಣಿಯನ್ನು ಎತ್ತಿಕೊಂಡ ಕಲಾವಿದರು ಖಂಡ ಜಾತಿತ್ರಿಪುಟ ತಾಳದಲ್ಲಿ ‘ಪರಮೇಶ್ವರಿ ಕೃಪಾಕರಿ ಶಂಕರಿ ಸದಾ ನಮಸ್ತೆ…. ಮಾಂ ಪಾಹಿ….’ ಎಂಬ ಪಲ್ಲವಿಯನ್ನು ಹಾಡಿದರು. ಇವರ ರಾಗ ವಿಸ್ತಾರ ಮತ್ತು ತಾನಂ ಅತ್ಯಂತ ಪ್ರಬುದ್ಧವಾಗಿದ್ದು ಇಲ್ಲಿಯ ಗುಣಗ್ರಾಹಿ ಶ್ರೋತೃಗಳ ಶ್ಲಾಘನೆಗೆ ಪಾತ್ರವಾಗಿದೆ. ಗಾಯಕರಿಗೆ ಸರಿಸಾಟಿಯಾಗಿ ಪಿಟೀಲು ನುಡಿಸಿ ‘ಸೈ’ ಎನಿಸಿಕೊಂಡ ಶ್ರೀ ಕೇಶವ ಮೋಹನ್ ಕುಮಾರ ಅಭಿನಂದನಾರ್ಹರು. ಶ್ರೀ ಸುನಾದಕೃಷ್ಣ ಅಮೈ ಇವರು ಮೃದಂಗದಲ್ಲಿ ಅತ್ಯುತ್ತಮವಾಗಿ ಸಹಕರಿಸಿದ್ದಾರೆ ಹಾಗೂ ತನಿ ಆವರ್ತನದಲ್ಲಿಯೂ ಮಿಂಚಿದ್ದಾರೆ. ಸುಶಾವ್ಯವಾಗಿದ್ದ ಅಭೇರಿ (ಮಧುರವು) ಬೆಹಾಗ್ ರಾಗದಲ್ಲಿ ಸಾರಮೈನ ಪ್ರಸ್ತುತಿಗಳೊಂದಿಗೆ ಸಮಾಪನಗೊಂಡಿತು.
-ಸರೋಜಾ ಆರ್. ಆಚಾರ್ಯ ಉಡುಪಿ