ಬೇಲೂರಿನ ನಾಟ್ಯ ಶಿಲ್ಪದ ರೂವಾರಿಯಾದ ಜಕ್ಕಣಾಚಾರಿಯಷ್ಟೇ ಅವಕ್ಕೆ ರಾಜಪೋಷಣೆ ಒದಗಿಸುವುದರೊಂದಿಗೆ ಸ್ವತಃ ರೂಪದರ್ಶಿಯೂ ಆಗಿದ್ದ ರಾಣಿ ಶಾಂತಲೆಯೂ ಜನಪದದಲ್ಲಿ ಸುಖ್ಯಾತಳು. ಈಕೆ ಹೊಯ್ಸಳೇಶ್ವರ ವಿಷ್ಣುವರ್ಧನನ ಪಟ್ಟಮಹಿಷಿ. ಇವಳ ಕುರಿತು ಹಲವು ಸಾಹಿತ್ಯ ಕಥನಗಳೂ (ಕೆವಿ ಅಯ್ಯರ್, ಸಿ. ಕೆ. ನಾಗರಾಜರಾವ್, ಮನ ಮೂರ್ತಿ…), ನಾಟಕ, ಸಿನಿಮಾಗಳೂ ಬಂದಿವೆ. ನಾನು ತಿಳಿದಂತೆ, ಅಲ್ಲೆಲ್ಲ ಶಾಂತಲೆಯ ಜೀವನ ಮತ್ತು ಸಾಧನೆಗಳಿಗೆ ಅನಿವಾರ್ಯವಾಗಿ ಸಾಹಿತ್ಯದ ಹೊರೆಯನ್ನು ಸಂಘರ್ಷದ ಬಿಸಿಯನ್ನು ತುಸು ಹೆಚ್ಚೇ ಸೇರಿಸಿದ್ದಾರೆ. ಆದರೆ ಆಕೆಯ ಪ್ರಧಾನ ಶಕ್ತಿಯಾದ ನೃತ್ಯ ಮೆರೆಯುವುದರೊಡನೆ, ಸಂವಹನಶೀಲತೆ ಕುಗ್ಗದಂತೆ ನಾಟಕೀಯತೆಯನ್ನು ಬೆಸೆದು ಮೂಡಿದ ಏಕವ್ಯಕ್ತಿ ಪ್ರಯೋಗ – ‘ಹೆಜ್ಜೆಗೊಲಿದ ಬೆಳಕು’.
ಅರೆಹೊಳೆ-ಕಲಾಭೀ ಪಂಚ ದಿನ ನಾಟಕೋತ್ಸವದ ಕೊನೆಯ ದಿನಕ್ಕಿದನ್ನು (೩೧-೩-೨೫), ವಿದುಷಿ ಸಂಸ್ಕೃತಿ ಪ್ರಭಾಕರ್ ಕೇಂದ್ರವಾಗಿರುವ ಉಡುಪಿಯ ಪ್ರಜ್ಞಾನಂ ಟ್ರಸ್ಟ್ ಪ್ರಸ್ತುತಪಡಿಸಿತು. ಸುಧಾ ಆಡುಕಳ ರಂಗ ಪಠ್ಯವನ್ನೂ ಗಣೇಶ್ ರಾವ್ ಎಲ್ಲೂರು ರಂಗ ವಿನ್ಯಾಸ, ಸಂಗೀತ ಮತ್ತು ಬೆಳಕಿನೊಡನೆ ನಿರ್ದೇಶನವನ್ನೂ ಸಮರ್ಥವಾಗಿ ನಡ್ಡೆಸಿದ್ದಕ್ಕೆ ‘ಹೆಜ್ಜೆಗೊಲಿದ ಬೆಳಕು’, ನಮ್ಮೆಲ್ಲರ ಮನದುಂಬಿ ಹರಿಯಿತು. ಪ್ರಸ್ತುತಿಯ ಉದ್ದಕ್ಕೆ “ನಾ ಶಾಂತಲಾ…” ಎಂದು ಬಹು ಭಾವಗಳಲ್ಲಿ ಅನುರಣಿಸಿದ ಪಲ್ಲವಿ, ನಾಟಕ ಮುಗಿದ ಮೇಲೂ ನಮ್ಮಲ್ಲಿ ಅನುರಣಿಸುತ್ತಲೇ ಉಳಿಯಿತು.
ಶಾಂತಲೆಗೆ ಬಾಲ್ಯಕಾಲ ಸಖಿಯಾಗಿ ಒದಗಿದವಳು – ಅನಾಥೆ ಲಕ್ಷ್ಮೀ. ಅಜ್ಜಿ, ಶಾಂತಲೆಗೆ ತನ್ನ ಗೆಜ್ಜೆಯನ್ನೂ (ಮಗಳು ಮುಂದುವರಿಸದ) ನೃತ್ಯ ಪರಂಪರೆಯನ್ನೂ ವಹಿಸಿಕೊಡುವ ಕಾಲಕ್ಕೆ, ಶಾಂತಲೆಯ ಔದಾರ್ಯದಲ್ಲಿ ಲಕ್ಷ್ಮೀಯೂ ಪಾಲುದಾರಳೇ ಆಗುತ್ತಾಳೆ. ಜೀವನಾಸಕ್ತಿಗಳ ಅನ್ಯ ಸೆಳೆತದಲ್ಲಿ ಶಾಂತಲೆ ಪರಿವ್ರಾಜಕನಾದ ಜಕ್ಕಣಾಚಾರಿಯ ಅಪ್ರತಿಮ ಶಿಲ್ಪ ಕಲೆಗೊಲಿದರೆ, ಮಹಿಳೆಗೆ ಅಪೂರ್ವ ಎನ್ನುವಂತೆ, ಯುದ್ಧ ಕೌಶಲವನ್ನು ತನ್ನದಾಗಿಸಿಕೊಳ್ಳುತ್ತಾಳೆ. ಅದೊಂದು ದಿನ, ದೇವ ಮಂದಿರದಲ್ಲಿ ಇವರೀರ್ವರ ಪ್ರಥಮ ಸೇವಾ ನರ್ತನಕ್ಕಾಗುವಾಗ ಸಹಜವಾಗಿ ಶಾಂತಲೆಯ ಶಿವೆಗೆ ಲಕ್ಷ್ಮಿಯ ರುದ್ರ ಅನ್ಯೋನ್ಯವಾಗುತ್ತದೆ. ಆದರೆ ಪರಿಣಾಮ ಯಾರೂ ಊಹಿಸಿರದಂತೆ ಪರಿಣಯದಲ್ಲಿ ಕೊನೆಗೊಂಡದ್ದೊಂದು ಆಶ್ಚರ್ಯ. ನಾಟ್ಯ ಪ್ರಸ್ತುತಿಗೆ ಅಜ್ಞಾತವೇಷದಲ್ಲಿ ಪ್ರೇಕ್ಷಕನಾಗಿ ಬಂದ ಹೊಯ್ಸಳೇಶ್ವರ ವಿಷ್ಣುವರ್ಧನ ಇಬ್ಬರನ್ನೂ ತನ್ನ ಜೀವನಸಂಗಾತಿಗಳಾಗಿ ಪರಿಗ್ರಹಿಸುತ್ತಾನೆ. ಪರೋಕ್ಷವಾಗಿ ನಾಟ್ಯರಾಣಿಯ ಕಲಾಪ್ರೇಮಕ್ಕೆ ಪಟ್ಟಮಹಿಷಿತನದ ಕಡಿವಾಣವೇ ಬೀಳುತ್ತದೆ.
ಕಲಾ ಹಪಹಪಿ ಮತ್ತು ರಾಜ್ಯಕಾರಣಗಳ ಸಮತೋಲನದಲ್ಲಿ ಶಾಂತಲೆ, ಬೇಲೂರಿನ ಚೆನ್ನಕೇಶವನ ದೇವಳ ನಿರ್ಮಾಣದಲ್ಲಿ ಕಲಾಮಂದಿರವನ್ನೇ ನಿಲ್ಲಿಸುತ್ತಾಳೆ. ಆದರೆ ಸಾಮಾನ್ಯ ಲೋಕ ನಿರೀಕ್ಷೆಯಂತೆ, ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ಪ್ರದಾನಿಸುವಲ್ಲಿ ಶಾಂತಲೆ ಅಸಹಾಯಕಳಾಗುತ್ತಾಳೆ. ಪಟ್ಟಮಹಿಷಿತನದ ಪದವಿಗಾದ ಸೋಲನ್ನು ಲೋಕಕ್ಕುಣಿಸಲು ಬಯಸದೆ, ನಾಟ್ಯಕ್ಕೊಲಿದ ಹೆಜ್ಜೆ ಅನಂತ ಬೆಳಕಿನಲ್ಲಿ ಒಂದಾಗಿ ಹೋಗುತ್ತದೆ. ಚೆನ್ನಕೇಶವನ ದೇವಳದಲ್ಲಿ ಅಜರಾಮರಗೊಂಡ ಶಾಂತಲೆಯ ಹೆಜ್ಜೆಗಳು, ಮುಂದುವರಿಕೆಯಲ್ಲಿ ಸಖಿ ಲಕ್ಷ್ಮಿಯನ್ನು ಪಟ್ಟಮಹಿಷಿತನಕ್ಕೇರಿಸಿ, ರಾಜ್ಯಕಾರಣಕ್ಕೂ ಬೆಳಕಿನ ಹಾದಿ ತೋರಿಸುತ್ತದೆ.
ನನಗೆ ಏಕವ್ಯಕ್ತಿ ಪ್ರಯೋಗಗಳ ಕುರಿತು ಒಗ್ಗದಿಕೆ ಜಾಸ್ತಿ. ನಾನು ಯಾವುದೇ ಶಾಸ್ತ್ರೀಯ ಕಲೆಗಳ ಔಪಚಾರಿಕ ಜ್ಞಾನ ಇರುವವನೂ ಅಲ್ಲ. ನನ್ನದೇನಿದ್ದರೂ ಅಬೋಧ ರಸಿಕತೆ. ಆದರೂ ಸಂಸ್ಕೃತಿ ಪ್ರಭಾಕರ್ ಒಪ್ಪಿಸಿದ ಶಾಂತಲೆಯ ಏಕವ್ಯಕ್ತಿ ನಾಟಕ ಬಹುಪ್ರಿಯವಾಯ್ತು. ಆತ್ಮಕಥನ, ಅಜ್ಜಿಯೊಡನೆ ಸಂವಾದ, ಗೆಳತಿಯೊಡನೆ ಜ್ಞಾನಗ್ರಹಣ, ಶಾಂತಲೆ ಶಿಲ್ಪವಿದ್ಯೆಗೊಲಿದ ಪರಿ, ಲಕ್ಷ್ಮಿಯ ಯುದ್ಧಕಲಾ ಪರಿಣತಿ, ಸಾಮಾನ್ಯರ ಕಲಾಪಕ್ಕೆ ರಾಜ ಪ್ರವೇಶ, ಅಂತಃಪುರದಲ್ಲಿ ತೆರೆದ ಮನ, ಪುತ್ರೋತ್ಸವ, ವಿರಹ, ರಾಜಕಾರಣದ ಸಂದಿಗ್ಧ, ಪರಿಹರಿಸುವಲ್ಲಿನ ದಿವ್ಯತ್ವಗಳೆಲ್ಲ ನನ್ನ ಮನಃಪಟಲದಲ್ಲಿ ಅಚ್ಚೊತ್ತಿದಂತೆ ಮೂಡಿಸಿದ ಸಂಸ್ಕೃತಿ ಪ್ರಭಾಕರ್ ಮತ್ತು ಅವರ ತಂಡಕ್ಕೆ ಅನಂತ ವಂದನೆಗಳು.
ಜಿ. ಎನ್. ಅಶೋಕವರ್ಧನ
ವಿಮರ್ಶಕರು, ಮಂಗಳೂರು