ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೆಯ ಸಾಲಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಗಾಗಿ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ದತ್ತಿ ದಾನಿಗಳ ಆಶಯದಂತೆ ಪ್ರತಿವರ್ಷ ಇಬ್ಬರು ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಒಬ್ಬರು ಕ್ರೈಸ್ತ ಕನ್ನಡ ಸಾಧಕರಿಗೆ ಮತ್ತು ಇನ್ನೊಬ್ಬರು ಕನ್ನಡ ಜನಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ತಲಾ ರೂ 10,000 (ಹತ್ತು ಸಾವಿರ)ರೂ.ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ಯನ್ನು ʻಸಂಚಲನ ಬಳಗ’ದವರು 2017ರಲ್ಲಿ ಸ್ಥಾಪಿಸಿದ್ದು ಇದುವರೆಗೆ 12 ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. “ತಮ್ಮ ನಿತ್ಯ ಬದುಕಿನಲ್ಲಿ ಕನ್ನಡ ನಾಡು- ನುಡಿಯ ಕುರಿತು ಅಪಾರ ಗೌರವ ಹೊಂದಿರುವ ಹಿರಿಯ ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಪ್ರಶಸ್ತಿ ಪುರಸ್ಕಾರ ಪಡೆದ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪುರಸ್ಕೃತರಿಂದ, ಕನ್ನಡ ನಾಡಿನ ನೆಲಮೂಲದ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವಲ್ಲಿ ನಿರಂತರ ಪ್ರಯತ್ನ ಮುಂದುವರಿಯಲಿದೆ” ಎಂದು ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ʻಸಂಚಲನ ಬಳಗ’ದವರ ಪರವಾಗಿ ಶ್ರೀಮತಿ ರೀಟಾ ರೀನಿ ಹಾಗೂ ಶ್ರೀ ರಫಾಯಲ್ ರಾಜ್ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.