ಬೆಳಗಾವಿ : ರಂಗಸಂಪದ ಬೆಳಗಾವಿ ಮತ್ತು ರಂಗಶಂಕರ ಬೆಂಗಳೂರಿನ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನವನ್ನು ದಿನಾಂಕ 02 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಧ್ಯಾ ಎಸ್. ಇವರು ರಚಿರುವ ಈ ನಾಟಕಕ್ಕೆ ಸವಿತಾ ಭೈರಪ್ಪ ನಿರ್ದೇಶನ ಮಾಡಿದ್ದು, ಶ್ರೀಪತಿ ಮಂಜನಬೈಲು ಸಂಗೀತ ನೀಡಿರುತ್ತಾರೆ. ವಿನಯ ಕುಲಕರ್ಣಿ, ನಿರ್ಮಲಾ ಬಟ್ಟಲ, ಉಜ್ವಲಾ ಪವಾರ, ಪ್ರಸಾದ ಕಾರಜೋಳ, ಆರೂಷ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿ. ವರದ ದೇಶಪಾಂಡೆ, ಮಂಜುನಾಥ ಕಲಾಲ, ಅರವಿಂದ ಪಾಟೀಲ, ಸ್ನೇಹಾ ಕುಲಕರ್ಣಿ, ಅರವಿಂದ ಕುಲಕರ್ಣಿ ಮುಂತಾದ ಕಲಾವಿದರು ನಟಿಸಿರುತ್ತಾರೆ.

ನಕ್ಷತ್ರ ಯಾತ್ರಿಕರು, ಒಂದು ವಿಭಿನ್ನ ನಾಟಕ. ಉತ್ತರ ಕರ್ನಾಟಕದ ಕುಟುಂಬವೊಂದು ಬದುಕಿನ ದಾರಿ ಹುಡುಕಿಕೊಂಡು ಪಟ್ಟಣ ಸೇರುವದು. ಈ ಬದುಕಿಗೆ ನೆಮ್ಮದಿ ಅನ್ನುವದು ಇಂದಿಲ್ಲ ನಾಳೆ ಸಿಕ್ಕೇತು ಆನ್ನುವ ಆಶಾ ಭಾವನೆಯಿಂದಲೇ ಬದುಕು ಸಾಗಿಸುವ ಈ ಕುಟುಂಬಕ್ಕೆ, ಕೊನೆಗೆ ಅವರು ಅರಸುತ್ತಾ ಹೋದ ನೆಮ್ಮದಿ ಸಿಕ್ಕಿತೇ ಅನ್ನುವ ಕುತೂಹಲವನ್ನ ನಾಟಕದ ಕೊನೆಯ ತನಕವೂ ಕಾಯ್ದುಕೊಂಡು ಹೋಗುವಲ್ಲಿ ನಾಟಕದ ಸಾರ್ಥಕತೆ ಇರುವದು.
ಈ ಪರಿಯ ದಾರುಣ ಬಡತನ ಮನುಷ್ಯನನ್ನ ಯಾಕೆ ಕಾಡಬೇಕು ಅನ್ನುವ ಚಿಂತನೆಯನ್ನ ನಿಮ್ಮ ಮನಸ್ಸಲ್ಲಿ ಮೂಡಿಸುವಲ್ಲಿ, ಒಂದು ಕ್ಷಣ ನೋಡುಗರನ್ನ ಚಿಂತನೆಗೆ ಒಳಪಡಿಸುವಲ್ಲಿ ನಾಟಕದ ಇಡೀ ತಂಡದ ಪರಿಶ್ರಮವಿದೆ. ಇಡೀ ತಂಡವೆಂದರೆ ಕೃತಿಕಾರ, ನಿರ್ದೇಶಕರು ಮತ್ತು ಕಲಾವಿದರಿಂದ ಒಳಗೊಂಡು ನಾಟಕದ ತಾಲೀಮಿನಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಪರಿಶ್ರಮವಿದೆ. ಅಂತಿಮವಾಗಿ ಸಾಹಿತ್ಯದ ಉದ್ದೇಶ ಕೂಡ ಅದೇ – ನಮ್ಮ ಮನಸ್ಸುಗಳನ್ನ ಒಂದು ಸಂಸ್ಕಾರಕ್ಕೆ ಒಳಪಡಿಸುವದು. ಕೆಲವು ಸಾಹಿತ್ಯ ಕೃತಿಯ ಸಾಲುಗಳು ಇನ್ನಿಲ್ಲದಂತೆ ನಮ್ಮನ್ನ ಕಾಡುತ್ತವೆ. ಅಂತಹ ಮಾತುಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. ಹಾಗೆ ಈ ನಾಟಕದ ಕೆಲವು ಸಾಲುಗಳು ಕೂಡ – “ಗಂಡಸ ಮಕ್ಕಳು ದುಡಿದು ರೊಕ್ಕಾ ತಂದ ಮ್ಯಾಲೆ ಪ್ಯಾಟಿವೋಳಗಿನ ದೊಡ್ಡ ಡಾಕ್ಟರಗೆ ತೋರಿಸೋಣ”. ಸಾಹಿತ್ಯ ಕೃತಿಯೊಂದರ ಪಾತ್ರಗಳ ಜೊತೆಗೆ ನಮ್ಮ ಬದುಕಿನ ವೈಯಕ್ತಿಕ ಅನುಭವಗಳು ಹೊಂದಾಣಿಕೆಯಾದಾಗ ಅಂತಹ ಸಾಹಿತ್ಯ ಜನ ಮಾನಸದಲ್ಲಿ ಬಹಳ ಕಾಲ ಉಳಿಯುತ್ತದೆ. ಅದಕ್ಕೆ ಈ ನಾಟಕ ಕೂಡ ಹೊರತಲ್ಲ. ಬದುಕು ಕೆಲವರನ್ನ ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳುತ್ತದೇಯೇ ಅಂತ ಒಮ್ಮೆ ಅನ್ನಿಸಿದರೂ, ವಿಜಯಪುರ ಮುಂತಾದ ಊರುಗಳಿಂದ ಗುಳೆ ಎದ್ದು ಬಂದು ಮಂಗಳೂರಿನಂತ ಶಹರಗಳಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಕೆಲಸಗಳಲ್ಲಿ ನಿರತರಾದವರ ಬದುಕನ್ನ ತೀರಾ ಹತ್ತಿರದಿಂದ ನೋಡಿದ ನನಗೆ ನಾಟಕ ತುಂಬಾ ಕನೆಕ್ಟ್ ಆಯಿತು. ಈ ಪರಿಸರದಲ್ಲಿ ಕೆಲಸ ಮಾಡುವಾಗ ಸಂಪರ್ಕಕ್ಕೆ ಬಂದ ತಾಯಿಯೊಬ್ಬಳು ಹೇಳಿದ ಮಾತುಗಳು ನೆನಪಿಗೆ ಬಂದವು –“ಈ ಕೂಸನ್ನ ಉಟ್ಟ ಸೀರೆನ ಹೋದಸಿಕೊಂಡು ಈ ಊರಿಗೆ ಬಂದ್ ಸಾಕಿನ್ರಿ ಸರ್” ವಾಸ್ತವಕ್ಕೆ ಹತ್ತಿರದ ನಾಟಕ ಅನಿಸಿತು. ಲಂಕೇಶ್ ಒಂದೆಡೆ ಹೇಳುತ್ತಾರೆ- “ಬಡತನವೆಂಬ ವಿಶ್ವವಿದ್ಯಾಲಯ ಯಾವ ಯೂನಿವರ್ಸಿಟಿ ಕೂಡ ಕಲಿಸದ ಪಾಠ ಕಲಿಸುತ್ತದೆ” ಅಂತ. ಎಷ್ಟು ಸತ್ಯ ಅಲ್ಲವೇ.
