18 ಏಪ್ರಿಲ್ 2023, ಬೆಂಗಳೂರು: ತೊ.ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ನಡೆದ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಉಳ್ಳಾಲ ಗ್ರಾಮದ ನಯನ ರಂಗಮಂದಿರದಲ್ಲಿ ದಿನಾಂಕ 15.04.2023ರಂದು ನಡೆಯಿತು. ಹಿರಿಯ ರಂಗಕರ್ಮಿ, ಬೆಳಕು ತಜ್ಞ ಹಾಗೂ ರಂಗಸಂಘಟಕ ಶ್ರೀ ಚಂದ್ರಕುಮಾರ್ ಸಿಂಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.
ಶ್ರೀ ಪಂಡಿತಾರಾಧ್ಯ ಸ್ವಾಮಿಗಳು, ಸಾಣೇಹಳ್ಳಿ ಅವರ ಸಾನಿಧ್ಯ ಮತ್ತು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೊ.ನಂಜುಂಡಸ್ವಾಮಿ ಅವರ ಶ್ರೀಮತಿಯವರಾದ ಶ್ರೀಮತಿ ಬಿ. ಜಯಮ್ಮ ಅವರಿಗೆ ರಂಗ ಗೌರವವನ್ನು ನೀಡಿ ಅಭಿನಂದಿಸಲಾಯಿತು.
ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಾಗದ ಡಾ.ಸಿ ಎನ್ ಮಂಜುನಾಥ್ ಅವರು ಕಳುಹಿಸಿದ್ದ ತೊ.ನಂಜುಂಡಸ್ವಾಮಿ ಅವರ ಕುರಿತಾದ ಸಂದೇಶವನ್ನು ಸಭೆಯಲ್ಲಿ ಓದಲಾಯಿತು.
ಡಾ. ಜಿ.ಟಿ. ಸುಭಾಶ್, ಶಶಿಧರ ಅಡಪ, ಶ್ರೀನಿವಾಸ್ ಜಿ. ಕಪ್ಪಣ್ಣ ಅವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತೊ.ನಂಜುಂಡಸ್ವಾಮಿ ಅವರ ಸಂಘಟನೆಯ ಕಾರ್ಯಗಳನ್ನು, ರಂಗಭೂಮಿಗೆ ಅವರು ಮಾಡಿದ ವೈದ್ಯಕೀಯ ಸೇವೆಗಳನ್ನು ನೆನಪಿಸಿದರು.
ರಂಗಚಂದಿರ ಚಂದ್ರು ಅವರು ಸ್ವಾಗತ ಕೋರಿದರು. ಗುಂಡಣ್ಣ ಚಿಕ್ಕಮಗಳೂರು ಅವರು ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತುಗಳನ್ನು ಆಡಿದರು. ಶಶಿಧರ ಕುಮಾರ್ ಜೆ.ಸಿ., ಪ್ರವೀಣ್‌ಕುಮಾರ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನರೇಂದ್ರ ಬಾಬು ಅವರು ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಚಂದವಾಗಿ ನೆರವೇರಿಸಿದರು.
ಸಂತಸದ ಸಂಗತಿ ಎಂದರೆ, ಎಪ್ಪತ್ತರ ದಶಕದ ಅನೇಕ ಹಿರಿಯ ರಂಗ ಸಂಘಟಕರುಗಳು, ನಿರ್ದೇಶಕರುಗಳು ಸಭೆಯಲ್ಲಿ ಇದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಂದ್ರಕುಮಾರ್ ಸಿಂಗ್ ಅವರಿಗೆ ಉತ್ಸಾಹ, ಗೌರವಗಳನ್ನು ನೀಡಿದ್ದು ಖುಷಿಯ ಸಂಗತಿಯಾಗಿತ್ತು.
ರಾಜಗುರು, ನಯನ ಸೂಡಾ, ಡಾ.ಲಕ್ಷ್ಮೀನಾರಾಯಣ್ ಮತ್ತು ಅರುಣಾ ಅವರ ರಂಗಗೀತೆಗಳು ಮತ್ತು ಜಾನಪದ ಹಾಡುಗಳ ಕಾರ್ಯಕ್ರಮ ಅಭಿನಂದನಾ ಕಾರ್ಯಕ್ರಮದ ಮೊದಲಿಗೆ ನಡೆಯಿತು. ಅಭಿನಂದನಾ ಕಾರ್ಯಕ್ರಮದ ನಂತರದಲ್ಲಿ ರಂಗಪಯಣ -ಸಾತ್ವಿಕ ರಂಗತಂಡದವರು ಪ್ರಸ್ತುತ ಪಡಿಸಿದ ತೊ.ನಂಜುಂಡಸ್ವಾಮಿ ಅವರ ನಾಟಕ, ನಯನ ಸೂಡಾ ನಿರ್ದೇಶನದ ‘ಮಾದಾರ ಚೆನ್ನಯ್ಯ’ ನಾಟಕ ಪ್ರಯೋಗವಾಯಿತು.
ಗುಂಡಣ್ಣ ಚಿಕ್ಕಮಗಳೂರು