ಮೈಸೂರು : ಪರಿವರ್ತನ ರಂಗ ಸಮಾಜ ಪ್ರಸ್ತುತ ಪಡಿಸುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತ ಪ್ರೀತಂ ಅವರ ಜೀವನ, ಪ್ರೀತಿ, ಕಾವ್ಯದ ಬಗ್ಗೆ ರಂಗ ಪ್ರಸ್ತುತಿ ‘ನನ್ನ ಪ್ರೀತಿಯ ಅಮೃತ’ ಮೇ 28ನೇ ಭಾನುವಾರ ಸಂಜೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರೊ. ಎಸ್.ಆರ್.ರಮೇಶ್ ರವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ನಾಟಕದಲ್ಲಿ ಸಾಹಿರ್ ನ ಪಾತ್ರದಲ್ಲಿ ಎಂ.ದ್ವಾರಕಾನಾಥ್, ಇಮ್ರೋಜ್ಹನಾಗಿ ಸತೀಷ್.ಬಿ.ಎಸ್. ಹಾಗೂ ಅಮೃತಾ ಪಾತ್ರವನ್ನು ತೇಜಸ್ವಿಜಿ ಜೊಯಿಸ್ ನಿರ್ವಹಿಸಲಿದ್ದಾರೆ.
ನಾಟಕದ ಬಗ್ಗೆ :
ಸಾಹಿರ್ ಮತ್ತು ಅಮೃತಾ ಪ್ರೀತಮ್ ಅವರ ಪ್ರೀತಿ ಭಾರತದ ಪ್ರೇಮ ಕಾವ್ಯದ ಅಪೂರ್ವವಾದ ಅಘಟಿತ ಘಟನೆಯಾಗಿದೆ. ಆತ 24ರ ವಯಸ್ಸಿನಲ್ಲಿ ತನ್ನ ಮೊದಲ ಕವನ ಸಂಕಲನದಿಂದ ಆಧುನಿಕ ಉರ್ದು ಕಾವ್ಯವನ್ನು ಗುಡಿಸಲು ಗಲ್ಲಿಗಳಿಗೆ ಕರೆದೊಯ್ದು, ತಾಜ್ ಮಹಲ್ ಕಟ್ಟಿ ಬಾದಷಹನೊಬ್ಬನು ತಮ್ಮ ಪ್ರೀತಿಗಳ ಗೋರಿಗಳ ಮೇಲೆ ಅಮೃತಶಿಲೆಯ ನೆನಪಿನ ಸೌಧಗಳನ್ನು ಕಟ್ಟಲಾಗದ ನಮ್ಮೆಲ್ಲರನ್ನು ಮೂದಲಿಸಿದ ಎಂದು ಹೇಳಿದ ಕ್ರಾಂತಿಕಾರಿ ಕವಿ. ಮುಂದೆ ಮುಂಬಾಯಿಗೆ ಬಂದು ಹಿಂದಿ ಚಲನಚಿತ್ರಗಳ ಹಾಡುಗಳಿಗೆ ಜೀವಸ್ಪರ್ಷವನ್ನು ನೀಡಿ, ಹಲವು ತಲೆಮಾರುಗಳು ತಮ್ಮ ಸ್ವಂತದ ಪ್ರೀತಿಗೆ, ವಿರಹಕ್ಕೆ, ದುಃಖಕ್ಕೆ, ದೈನಂದಿನ ಬದುಕಿನ ಸೌಂದರ್ಯಕ್ಕೆ, ಹೆಣ್ಣಿನ ಚೆಲುವಿಗೆ ಹೀಗೆ ಯಾವ ಭಾವಕ್ಕೆ ಮಿಡಿದಾಗಲೂ ಅದಕ್ಕೆ ನುಡಿಯಾದದ್ದು ಸಾಹಿರ್ ಬರೆದ ಸಾಲುಗಳು ಎನ್ನುವಂತಾಯಿತು. ಅಮೃತಾ ಜಗದೈಕ ಸುಂದರಿ, ಪಂಜಾಬಿನ ಆತ್ಮಕ್ಕೆ ಕಾವ್ಯದ ದನಿ ಕೊಟ್ಟವಳು.
ಸ್ತ್ರಿಯರ ಹತ್ತು ಮುಖಗಳನ್ನು ಕತೆಯಾಗಿಸಿದವಳು. ಅಪ್ರತಿಮ ಧೈರ್ಯಗಾರ್ತಿ. ಸಮಾಜದ ಹುಸಿಕಟ್ಟಳೆಗಳನ್ನು ಮೀರಿ ನಿಂತವಳು.
ಪರಿವರ್ತನ ರಂಗ ಸಮಾಜ ಬಗ್ಗೆ
ಪರಿವರ್ತನ, ಎರಡು ಸಾವಿರದ ಫೆಬ್ರವರಿಯಲ್ಲಿ ಪ್ರಾರಂಭಗೊಂಡ ಈ ಸಾಂಸ್ಕೃತಿಕ ಸಂಘಟನೆ. ಪ್ರಾರಂಭದಲ್ಲಿ ರಂಗ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರವನ್ನು ಆಯೋಜಿಸುವುದು, ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆಯನ್ನು ಏರ್ಪಡಿಸುವುದು, ರಂಗಸಾಧಕರಿಗೆ ಸನ್ಮಾನ ನೀಡುವುದು, ರಂಗಪ್ರಯೋಗಗಳನ್ನು ಮೈಸೂರು ಹಾಗೂ ಇನ್ನಿತರ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶಿಸುವುದು ನಮ್ಮ ಮುಖ್ಯ ಚಟುವಟಿಕೆಯಾಗಿತ್ತು.
ಕಳೆದ ಎರಡು ದಶಕಗಳಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ರಂಗ ಪ್ರಯೋಗಗಳನ್ನು ನಾಡಿನಾದ್ಯಂತ ಪ್ರದರ್ಶಿಸಿದ್ದೇವೆ. ಬ್ರೆಕ್ಟ್ ನ ಕಕೆಶಿಯನ್ ಚಾಕ್ ಸರ್ಕಲ್, ತಾಯಿ, ಶೇಕ್ಸ್ ಪಿಯರ್ ನ ಕಿಂಗ್ ಲಿಯರ್, ಮಿಡ್ ಸಮರ್ ನೈಟ್ಸ್ ಡ್ರೀಮ್ಸ್, ಮ್ಯಾಕ್ಬೆಥ್, ಡಾ. ಯು.ಆರ್.ಅನಂತಮೂರ್ತಿಯವರ ಕಥೆ, ಕಾವ್ಯ, ವಿಮರ್ಶಾತ್ಮಕ ಲೇಖನಗಳನ್ನು ಆಧರಿಸಿದ ಎಂದೆಂದೂ ಮುಗಿಯದ ಕಥೆ, ಸಾದತ್ ಹಸನ್ ಮಂಟೂ ಅವರ ಕಥೆಗಳನ್ನು ಆಧರಿಸಿದ ಕಪ್ಪು ನಕ್ಷತ್ರ, ಪಿ. ಲಂಕೇಶ್ ಅವರ ನನ್ನ ತಂಗಿಗೊಂದು ಗಂಡು ಕೊಡಿ, ಟಿ. ಪ್ರಸನ್ನನ ಗೃಹಸ್ತಾಶ್ರಮ, ಅಸ್ಘರ್ ವಜಾಹತ್ ಅವರ ರಾವಿನದಿ ದಂಡೆಯಲ್ಲಿ, ಡಾ. ಕೆ.ಶಿವರಾಮ ಕಾರಂತರ ಬೆಟ್ಟದ ಜೀವ, ಪರಿವರ್ತನ ತಂಡದ ಪ್ರಮುಖ ರಂಗ ಪ್ರಯೋಗಗಳು.
ನಂತರದ ದಿನಗಳಲ್ಲಿ ಪರಿವರ್ತನ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮುಖ್ಯವಾಗಿ ಸಾವಯವ ಕೃಷಿ, ಜಲಸಂಸ್ಕೃತಿ, ಕೋಮು ಸೌಹಾರ್ದತೆ ಈ ವಿಷಯಗಳನ್ನು ಕುರಿತಂತೆ ನಾಟಕ, ವಿಚಾರ ಸಂಕಿರಣಗಳನ್ನು ಆಯೋಜಿಸಿದೆ. ಸ್ವತಃ ಕೃಷಿಕರಾಗಿ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು, ಯಶಸ್ವೀ ರೈತಗಾಥೆಗಳನ್ನು ಕೃಷಿ ಕಥಾನಕಗಳ ಮೂಲಕ ಸಮುದಾಯಕ್ಕೆ ಪರಿಚಯಿಸಿದ ಶ್ರೀಯುತ ಚಿನ್ನಸ್ವಾಮಿ ವಡ್ದಗೆರೆಯವರು ರಚಿಸಿದ ಕೃಷಿಯಲ್ಲಿ ಖುಶಿಯಲಿ ರೈತ ಸಮುದಾಯದ ಬಗ್ಗೆ ಪ್ರದರ್ಶಿತಗೊಂಡ ವಿಶಿಷ್ಟ ನಾಟಕ.
ಕಳೆದ ನಾಲ್ಕು ವರ್ಷಗಳಿಂದ ಪರಿವರ್ತನ, ನಾಟಕಗಳ ಮೂಲಕ ವಿಜ್ಞಾನದ ಇತಿಹಾಸ, ವೈಜ್ಞಾನಿಕ ಸಂಶೋಧನೆ, ವಿಜ್ಞಾನಿಗಳ ಪರಿಚಯ ಈ ವಿಷಯಗಳನ್ನು ಕುರಿತಂತೆ ಕೆಲವು ರಂಗ ಪ್ರಯೋಗಗಳನ್ನು ನೀಡಿದೆ. ಶೈಕ್ಷಣಿಕ ಕಲಿಕೆಗೆ ಪೂರಕವಾಗುವಂತೆ ಈ ರಂಗ ಪ್ರಯೋಗಗಳನ್ನು ಕಾಲೇಜು, ವಿಶ್ವವಿದ್ಯಾನಿಲಯದ ವಿಭಾಗಗಳಲ್ಲಿ ನೀಡಿದೆ. ನಮ್ಮ ಈ ವಿಜ್ಞಾನ ನಾಟಕಗಳಿಗೆ ಉತ್ತಮ ಸ್ಪಂದನೆ ದೊರೆಕಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ವಿಜ್ಞಾನ ನಾಟಕೋತ್ಸವ ಹಾಗೂ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಚಾರ ಸಂಕಿರಣಗಳನ್ನು ಕಳೆದ ಐದು ವರ್ಷಗಳಿಂದ ಮೈಸೂರು ನಗರದಲ್ಲಿ ಆಯೋಜಿಸುತ್ತಿದ್ದೇವೆ. ಕನ್ನಡದಲ್ಲಿ ವಿಜ್ಞಾನ ನಾಟಕಗಳ ಕೊರತೆಯನ್ನು ಅರಿತುಕೊಂಡು, 2019ರಲ್ಲಿ ವಿಜ್ಞಾನ ನಾಟಕ ರಚನಾ ಶಿಬಿರವನ್ನು, ಗಂಗೂಬಾಯಿ ಹಾನಗಲ್ ಸಂಗೀತ ನಾಟಕ ಮತ್ತು ನೃತ್ಯ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಏರ್ಪಡಿಸಿದ್ದೆವು. ಸುಮಾರು ಮೂವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ನಾಟಕಕಾರರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ನಾಡಿನ ಪ್ರಮುಖ ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು ಈ ಶಿಬಿರದಲ್ಲಿ ಭಾಗಿಯಾಗಿದ್ದರು.