ಬೆಂಗಳೂರು : ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ನರಿಗಳಿಗೇಕೆ ಕೋಡಿಲ್ಲ ?’ ಎಂಬ ಮಕ್ಕಳ ನಾಟಕವು ದಿನಾಂಕ 07-01-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಧ್ಯಾಹ್ನ ಗಂಟೆ 3.30ಕ್ಕೆ ಹಾಗೂ ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.
ಐವತ್ತು ಅರವತ್ತು ವರುಷಗಳ ಹಿಂದೆ ಮಕ್ಕಳ ಪುಸ್ತಕ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಕುವೆಂಪು ಅವರು ರಚಿಸಿರುವ ಕಥೆ ನರಿಗಳೀಗೇಕೆ ಕೋಡಿಲ್ಲ ? ಎಲ್ಲಾ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟು ಲಾಲಿಸುವ, ಸಮತೋಲನದಿಂದ ಕಾಪಾಡುವ, ತನ್ನೊಳಗೆ ಕಾರುಣ್ಯ, ಕಾಠಿಣ್ಯ ಎರಡೂ ಇವೆ ಎಂಬುದನ್ನು ಮನದಟ್ಟು ಮಾಡುವ, ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯ ಎಂದು ಪಿಸುಮಾತಿನಲ್ಲಿ ಹೇಳುವ ಕತೆ ಇದು. ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾದ ಬಗ್ಗೆಯೂ ಮಾತನಾಡುವ, ನಿಸರ್ಗದ ತೊಟ್ಟಿಲಲ್ಲಿ ಕ್ರೌರ್ಯ ಇರಬಹುದು. ಆದರೆ ಕುತಂತ್ರಕ್ಕೆ, ಅಹಂಕಾರಕ್ಕೆ ಜಾಗವಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಕತೆ ಇದು. ಇದನ್ನು ಮಂಗಳಾ ಎನ್. ಮತ್ತು ಶಾಂತಾ ನಾಗರಾಜ ರಂಗರೂಪಕ್ಕೆ ತಂದಿದ್ದಾರೆ. ಶಶಿಧರ್ ಅಡಪ ಅವರ ವಿನ್ಯಾಸವಿದೆ. ಗಜಾನನ ಟಿ. ನಾಯ್ಕ್ ಅವರ ಸಂಗೀತವಿದೆ. ಮಂಗಳಾ ಎನ್. ನಿರ್ದೇಶನ ಮಾಡಿದ್ದಾರೆ. ಟಿಕೇಟುಗಳು ರಂಗಶಂಕರದ ಕೌಂಟರ್ ನಲ್ಲಿ ಮತ್ತು ಬುಕ್ ಮೈ ಶೋ ನಲ್ಲಿ ಲಭ್ಯವಿದೆ.