ಬೆಂಗಳೂರು : ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ನಾಲ್ಕುದಶಕಗಳಿಂದ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಇವರು, ‘ಕೂಚಿಪುಡಿ ಪರಂಪರ ಫೌಂಡೇಷನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು. ಇವರ ಇತ್ತೀಚಿನ ಅದ್ಭುತ ನೃತ್ಯರೂಪಕ ಪ್ರಯೋಗ ‘ನಂದನಾರ್’ ದೇಶ-ವಿದೇಶಗಳಲ್ಲಿ ಹಲವಾರು ಬಾರಿ ಪ್ರದರ್ಶಿತವಾಗಿ ಮನೆಮಾತಾಗಿದೆ.
ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದ ದೀಪಾ, ತಮ್ಮ ‘ಕೂಚಿಪುಡಿ ಪರಂಪರಾ ಫೌಂಡೇಷನ್’ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾಗಿ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಮೂವತ್ತು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು.
ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು.ಎಸ್., ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕೂಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಈ ನೃತ್ಯೋತ್ಸವವು ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಇದೀಗ ‘ನಾಟ್ಯ ಪರಂಪರ’ ಹನ್ನೆರಡನೆಯ ನೃತ್ಯೋತ್ಸವ – 2025ರ ಸಂಭ್ರಮಾಚರಣೆ ದಿನಾಂಕ 31 ಅಕ್ಟೋಬರ್ 2025ರ ಶುಕ್ರವಾರ ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನ ಸಭಾಂಗಣದಲ್ಲಿ ವಿಜ್ರುಂಭಣೆಯಿಂದ ನಡೆಯಲಿದೆ. ವಿಶಾಖಪಟ್ಟಣದ ಸಾಂಪ್ರದಾಯಕ ಕುಚಿಪುಡಿ ಕುಟುಂಬದ ಹಿರಿಯ ಕುಚಿಪುಡಿ ಗುರು ಡಾ. ಪಸುಮರ್ತಿ ವೆಂಕಟರಮಣ ಮತ್ತು ಶ್ರೀಮತಿ ಅನುರಾಧಾ ವೆಂಕಟರಮಣನ್ – ಭರತನಾಟ್ಯ ನೃತ್ಯಜ್ಞೆ – ಬೆಂಗಳೂರು, ಇವರುಗಳ ಕಲಾಸೇವೆಯನ್ನು ಗುರುತಿಸಿ, ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದು. ನಂತರ ನೃತ್ಯ ಕಲಾವಿದೆ ಸಂಯುಕ್ತ ಮತ್ಸ ಮತ್ತು ಹೈದರಾಬಾದಿನ ಆಕುಂಡಿ ಶ್ರೀ ಸೌಮ್ಯ (ಪದ್ಮಭೂಷಣ ಗುರು ಡಾ. ವೆಂಪಟಿ ಚಿನ್ನಸತ್ಯಂ ಅವರ ಮಗಳಾದ ಶ್ರೀಮತಿ ಬಾಲ ತ್ರಿಪುರಸುಂದರಿ ಅವರ ಶಿಷ್ಯೆಯರು) ಇವರಿಂದ ಕೂಚಿಪುಡಿ ಯುಗಳ ನೃತ್ಯ ಪ್ರದರ್ಶನ, ಕೇರಳದ ಡಾ. ಸ್ನೇಹ ಶಶಿಕುಮಾರ್ ಮತ್ತು ಕೂಚಿಪುಡಿ ನೃತ್ಯಜ್ಞೆ ದೀಪಾ ಶಶೀಂದ್ರನ್ ಶಿಷ್ಯೆಯಾದ ಬೆಂಗಳೂರಿನ ಡಾ. ಸ್ಮೃತಿ ವಿಷ್ಣು ಇವರಿಂದ ಕೂಚಿಪುಡಿ ಏಕವ್ಯಕ್ತಿ ನೃತ್ಯ ಪ್ರದರ್ಶನ ಹಾಗೂ ಹೈದರಾಬಾದಿನ ಆರತಿ ಶಂಕರ್ ಮತ್ತು ಅವರ ಶಿಷ್ಯೆಯರಿಂದ ಕಥಕ್ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.






ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ -ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ ಮತ್ತು ಗುರು ಜಯಂತಿ ಈಶ್ವರಪುತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ನಯನ ಮನೋಹರವಾದ ಕಾರ್ಯಕ್ರಮವನ್ನು ಬೆಂಗಳೂರಿನ ಕೆ.ಪಿ.ಎಫ್. ಲೈಫ್ ಟ್ರಸ್ಟಿ, ಕೂಚಿಪುಡಿ ನೃತ್ಯಜ್ಞೆ ಆಚಾರ್ಯ ದೀಪಾ ಶಶೀಂದ್ರನ್ ಆಯೋಜಿಸಿದ್ದಾರೆ. ಬೆಂಗಳೂರಿನ ಈ ಕೂಚಿಪುಡಿ ಪರಂಪರ ಫೌಂಡೇಷನ್ ಒಂದು ಲಾಭರಹಿತ ಪ್ರತಿಷ್ಠಾನವಾಗಿದ್ದು, ಇದರ ಲೈಫ್ ಟ್ರಸ್ಟಿಯಾದ ಕೂಚಿಪುಡಿ ನೃತ್ಯಜ್ಞೆ ದೀಪಾ ಶಶೀಂದ್ರನ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾವಿದರನ್ನು ಒಗ್ಗೂಡಿಸಿ, ಇವರಿಗೆ ವ್ಯವಸ್ಥಿತ ಕೂಚಿಪುಡಿ ನೃತ್ಯ ತರಬೇತಿ ಮತ್ತು ನೃತ್ಯ ಸಂಯೋಜನೆಯನ್ನು ಬದ್ಧತೆಯಿಂದ ಕಲಿಸಿಕೊಡುವ ಅವಿರತ ಕೈಂಕರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ [email protected]/ 9845315272. www.kuchipudiparamparafoundation.com , Kuchipudiparamaparafoundation youtubchannel, ಇವರನ್ನು ಸಂಪರ್ಕಿಸಬಹುದು.

– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
