ಕಾಸರಗೋಡು : ಮಹಿಳೆಯರ ಸಾಧನೆ ಗುರುತಿಸಲ್ಪಡಬೇಕು. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಬಹಳಷ್ಟು ಸಾಧನೆಗಳನ್ನು ಮಾಡುತ್ತಿದ್ದು, ಯಾರಿಗೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಮೂಲಕ ಕಾಸರಗೋಡಿನ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಮುಂಚೂಣಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.” ಎಂದು ರಂಗನಟಿ ರೂಪಶ್ರೀ ವರ್ಕಾಡಿ ಹೇಳಿದರು.

ಅವರು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ದಸರಾ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ವೈಭವ ‘ನವ ವನಿತಾ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2024ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಉದ್ಘಾಟಿಸಿ ಮಾತನಾಡಿದರು.


ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದೆ ಸುಶೀಲ ಮಾಧವ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ನಾರಿ ಚಿನ್ನಾರಿ ಗೌರವ ಅಧ್ಯಕ್ಷೆ ತಾರಾ ಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ವೈದ್ಯ ಡಾ. ಬಿ. ಎಸ್. ರಾವ್ ಅವರನ್ನು ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಗೌರವಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ದಂತ ವೈದ್ಯೆ ಡಾ. ರೇಖಾ ಮಯ್ಯ ಮಾತನಾಡಿ “ನಗು ಮತ್ತು ಆತ್ಮ ವಿಶ್ವಾಸ ಪರಸ್ಪರ ಬೆಸೆದುಕೊಂಡಾಗ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರಲ್ಲದೆ ಕಾಸರಗೋಡಿನಲ್ಲಿ ಮಹಿಳೆಯರಿಗಾಗಿಯೇ ಒಂದು ವೇದಿಕೆಯನ್ನು ನಿರ್ಮಾಣ ಮಾಡಿ ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಕಾರ್ಯ ಅಭಿನಂದಾನರ್ಹ.” ಎಂದರು.


ಸಮಾರೋಪ ಮಾತುಗಳನ್ನಾಡಿದ ರಂಗ ಚಿನ್ನಾರಿಯ ಸಂಚಾಲಕ ಹಾಗೂ ನಿರ್ದೇಶಕರಾದ ಕಾಸರಗೋಡು ಚಿನ್ನಾ “ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಈ ವೇದಿಕೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ. ಅಲ್ಲದೆ ಸಾಧಕರ ಮನೆಯಲ್ಲಿಯೇ ‘ಗೃಹ ಸಲ್ಲಾಪ’ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.” ಎಂದರು. ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತ್ಯನಾರಾಯಣ, ಕೆ. ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಶ್ಯಾನುಭೋಗ್ ಸ್ವಾಗತಿಸಿ, ನಾರಿ ಚಿನ್ನಾರಿ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿ, ಶ್ರೀಮತಿ ಸರ್ವಮಂಗಳ ವಂದಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಯಲಕ್ಷ್ಮೀ, ರಶ್ಮಿ ದೀಪಕ್ ಇವರಿಂದ ನೃತ್ಯ, ಜಯಲಕ್ಷ್ಮೀ ರಾಜೇಶ್, ರಶ್ಮೀ ದೀಪಕ್, ದೇವಿಕಾ, ಕಾವ್ಯ ಪ್ರದೀಪ್ ಇವರಿಂದ ಸಮೂಹ ನೃತ್ಯ, ಶರಣ್ಯಾ ನಾರಾಯಣನ್ ಇವರಿಂದ ಭಾವ ನೃತ್ಯ, ದೇವಿಕಾ ಇವರಿಂದ ಮಲಯಾಳಂ ಹಾಡು, ಡಾ. ಯು. ಮಹೇಶ್ವರಿ ಇವರಿಂದ ಆಶು ಭಾಷಣ ನಿರ್ವಹಣೆ ಹಾಗೂ ನಾರಿ ಚಿನ್ನಾರಿ ಸದಸ್ಯೆಯರಿಂದ ಹುಲಿ ಕುಣಿತ ಪ್ರದರ್ಶನಗೊಂಡಿತು.



