ಬೆಂಗಳೂರು: ದಿನಾಂಕ 19-09-2023 ರಂದು ಎ.ಡಿ.ಎ. ರಂಗಮಂದಿರದಲ್ಲಿ ನಡೆದ ‘ಲೀಲಾ ನಾಟ್ಯ ಕಲಾವೃಂದ’ದ ಯಶಸ್ವೀ 47ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿವಿಧ ಆಕರ್ಷಕ ನೃತ್ಯಾವಳಿಗಳು ಕಣ್ಮನ ಸೆಳೆದವು. ಸುಮಾರು 150 ಮಂದಿ ನೃತ್ಯಾಕಾಂಕ್ಷಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ ನಲಿವಿನ ಹೆಜ್ಜೆ-ಗೆಜ್ಜೆಗಳ ಸಮೂಹ ನೃತ್ಯಾರ್ಪಣೆಯ ಸೌಂದರ್ಯಕರ ನೋಟ ಮುದನೀಡಿತು.
ಪುಟಾಣಿ ಮಕ್ಕಳಿಂದ ಹಿಡಿದು ಹದಿಹರೆಯದ ಲಲನೆಯರರೂ ಅಂದವಾದ ಅಲಂಕಾರ, ಸುಮನೋಹರ ವೇಷಭೂಷಣಗಳಲ್ಲಿ ಶೋಭಿಸಿ ರಂಗದ ಮೇಲೆ ವಿವಿಧ ಸುಂದರ ಕೃತಿಗಳನ್ನು ನಿರೂಪಿಸಿದರು. ಅಂಗಶುದ್ಧ-ಲವಲವಿಕೆಯ ನರ್ತನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ಕೊನೆಯಲ್ಲಿ ಪ್ರಸ್ತುತವಾದ ‘ನವರಸ ರಾಮಾಯಣ’-ನೃತ್ಯರೂಪಕದ ವಿಶೇಷವೆಂದರೆ, ಇದು ಕೇವಲ ನೃತ್ಯ ನಾಟಕವಾಗಿರದೆ, ‘ಮಾರ್ಗಂ’ ಸಂಪ್ರದಾಯದ ‘ವರ್ಣ’ ಸ್ವರೂಪ-ವಿನ್ಯಾಸಗಳಲ್ಲಿ, ಅದರ ಎಲ್ಲ ಶಾಸ್ತ್ರೀಯ ವ್ಯಾಕರಣಾಂಶಗಳನ್ನೂ ಒಳಗೊಂಡು ನಿರೂಪಿತವಾದ ಹೊಸ ಪ್ರಯೋಗವಾಗಿತ್ತು. ನೃತ್ತ-ನೃತ್ಯ ಮತ್ತು ಅಭಿನಯಗಳ ಮೆರುಗಿನಲ್ಲಿ ರಾಮಾಯಣದ ಹಲವು ರಸಘಟ್ಟಗಳನ್ನು ಪ್ರದರ್ಶಿಸಲಾಯಿತು.
ಭರತನಾಟ್ಯದಲ್ಲಿ ‘ನವರಸ’ಗಳು ತನ್ನದೇ ಆದ ವಿಶೇಷ ಸ್ಥಾನ-ವೈಶಿಷ್ಟ್ಯಗಳನ್ನು ಪಡೆದಿವೆ. ಶೃಂಗಾರ, ಹಾಸ್ಯ, ಭಯಾನಕ, ಕ್ರೋಧ, ವೀರ, ಅದ್ಭುತ, ಭೀಭತ್ಸ, ಕರುಣಾ ಮತ್ತು ಶಾಂತ ಮುಂತಾದ ಒಂಭತ್ತು ರಸಗಳನ್ನು ರಾಮಾಯಣದ ವಿವಿಧ ಪ್ರಸಂಗಗಳು, ಘಟನೆಗಳಲ್ಲಿ ಹೊರಹೊಮ್ಮುವ ಸಂದರ್ಭಗಳನ್ನು ಕಲಾವಿದರು ಪರಿಣಾಮಕಾರಿಯಾಗಿ ಚಿತ್ರಿಸಿದರು. ಅಶೋಕವನದಲ್ಲಿ ಕುಳಿತ ದುಃಖತಪ್ತ ಸೀತಾದೇವಿಯು, ನಡೆದು ಹೋದ ಎಲ್ಲ ಘಟನೆಗಳನ್ನು ನೆನೆಯುತ್ತ ಹೋದಂತೆ ಇಡೀ ರಾಮಾಯಣದ ಕಥಾನಕವು ಸಿಂಹಾವಲೋಕನ ಕ್ರಮದಲ್ಲಿ ಒಂದೊಂದೇ ಅರಳುತ್ತ ಹೋಗುವುದಲ್ಲದೆ, ಆ ಘಟನೆಯಲ್ಲಿನ ಪ್ರಧಾನರಸವನ್ನು ರಸವತ್ತಾಗಿ ಕಂಡರಿಸಲಾಯಿತು.
ದಶರಥನ ಪುತ್ರಕಾಮೇಷ್ಟಿ ಯಾಗ, ಪಾಯಸ ಪ್ರಾಪ್ತಿಯಿಂದ ಪ್ರಾರಂಭವಾಗಿ, ಶ್ರೀರಾಮ-ಲಕ್ಷ್ಮಣ ಉಳಿದ ಸೋದರರ ಜನನ, ವಿಶ್ವಾಮಿತ್ರನ ಯಾಗ ಸಂರಕ್ಷಣೆ, ಅಹಲ್ಯ ಶಾಪ ವಿಮೋಚನೆ, ಸೀತಾ ಸ್ವಯಂವರ, ವನವಾಸ, ಸೀತಾಪಹರಣ, ಆಂಜನೇಯನ ಸಮುದ್ರ ಲಂಘನ, ಲಂಕಾದಹನ ಮತ್ತು ಶ್ರೀರಾಮ ಪಟ್ಟಾಭಿಷೇಕದ ಸುಮನೋಹರ ದೃಶ್ಯಗಳವರೆಗೂ ಸಂಕ್ಷಿಪ್ತವಾಗಿ ಸಾಗಿತು. ಪ್ರತಿ ಘಟನೆಯ ನಡುನಡುವೆ ನೃತ್ಯ ನಿಪುಣೆಯರಿಂದ ಕಲಾತ್ಮಕ ನೃತ್ತಗಳ ನಿರೂಪಣೆ, ಕಥಾ ಬೆಳವಣಿಗೆಯ ಘಟನಾ ಮಾಲೆಯು ಮಧ್ಯೆ ಕೊಂಡಿಯಂತೆ ಬೆಸೆಯಿತು.
ಪ್ರತಿಯೊಬ್ಬ ಪಾತ್ರಧಾರಿಗಳೂ ಸಹಜಾಭಿನಯದಿಂದ ಕಂಗೊಳಿಸಿದರು. ಅಗತ್ಯವಿದ್ದಕಡೆ ಪರಿಕರಗಳನ್ನು ಬಳಸಿದ್ದು ವಿಶೇಷವಾಗಿತ್ತು. ವರ್ಣದ ಹಂದರದೊಳಗೆ ರೂಹುತಳೆದ ಈ ನೃತ್ಯರೂಪಕದ ವಿನ್ಯಾಸ, ಸಂಯೋಜನೆ ಸೊಗಸಾಗಿತ್ತು. ಕಲಾವಿದೆಯರಿಗೆ ಸೂಕ್ತ ತರಬೇತಿ-ಕೌಶಲ್ಯಗಳ ಹಿನ್ನಲೆಯಲ್ಲಿ ಶ್ರಮಿಸಿದ ಗುರುತ್ರಯರಾದ ಹಿರಿಯ ಗುರು ಲೀಲಾವತಿ ಉಪಾಧ್ಯಾಯ ಮತ್ತು ಅವರ ಮಗ ಉದಯಕೃಷ್ಣ ಉಪಾಧ್ಯಾಯ ಹಾಗೂ ಸೊಸೆ ಅನುರಾಧ ಉಪಾಧ್ಯಾಯ ಅವರ ಪ್ರತಿಭಾ ಸಂಪನ್ನತೆ ಎದ್ದು ಕಾಣುತ್ತಿತ್ತು. ಸಫಲ-ಸಾರ್ಥಕ ನೃತ್ಯಾರ್ಪಣೆ ಕಾರ್ಯಕ್ರಮಕ್ಕಾಗಿ ‘ಲೀಲಾ ನಾಟ್ಯ ಕಲಾವೃಂದ’ದ ಇಡೀ ತಂಡ ಅಭಿನಂದನಾರ್ಹರು.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.