ಮೈಸೂರು : ಮೈಸೂರಿನ ‘ಕಲಾ ಸುರುಚಿ’ ಪ್ರಸ್ತುತಪಡಿಸುವ ‘ನೆರಳು’ ನಾಟಕದ ಪ್ರಥಮ ಪ್ರದರ್ಶನ ದಿನಾಂಕ 01-10-2023 ರಂದು ಸಂಜೆ ಘಂಟೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗ ಮಂದಿರದಲ್ಲಿ ನಡೆಯಲಿದೆ.
ಖ್ಯಾತ ಕವಿ ರಾಮಚಂದ್ರ ಶರ್ಮಾ ವಿರಚಿತ ಈ ನಾಟಕವನ್ನು ಧನಂಜಯ.ಎನ್ ನಿರ್ದೇಶಿಸಿದ್ದಾರೆ. ತೇಜಸ್ವಿನಿ ಎ.ಆರ್ ಸಂಗೀತ ಸಂಯೋಜನೆಯ ಈ ನಾಟಕದಲ್ಲಿ ಗಾಯಕರಾಗಿ ತೇಜಸ್ವಿನಿ ಎ.ಆರ್, ಸುರಭಿ ಎ ಮತ್ತು ಲಿಖಿತಾ ಎಸ್.ಗೌಡ ಸಹಕರಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯನ್ನು ನರಸಿಂಹ ಕುಮಾರ್ ಕೆ. ನಿರ್ವಹಿಸಲಿದ್ದು, ಪ್ರಸಾಧನದಲ್ಲಿ ಸುರಭಿ.ಎ ಸಹಕರಿಸಲಿದ್ದಾರೆ. ನಾಟಕದ ಬೆಳಕು ಮತ್ತು ಮೇಲ್ವಿಚಾರಣೆ ರಮೇಶ್ ಬಾಬು ಗುಬ್ಬಿ ಅವರದ್ದು.
ರಂಗದ ಮೇಲೆ ಲಲಿತಾಳ ಪಾತ್ರದಲ್ಲಿ ಲಿಖಿತಾ ಎಸ್.ಗೌಡ, ಭಾಗ್ಯಮ್ಮನಾಗಿ ಎಂ.ವಿಜಯಲಕ್ಷ್ಮಿ, ಕಮಲಳಾಗಿ ರಕ್ಷಿತಾ ರಾವ್ ಆರ್, ಲಲಿತಾಳ ಧ್ವನಿಯಾಗಿ ಸುರಭಿ ಬಿ, ಶ್ರೀನಿವಾಸನಾಗಿ ವಿನೋದ್ ಕುಮಾರ್ ಎ.ವಿ ಹಾಗೂ ರಾಮಚಂದ್ರನಾಗಿ ವರ್ಚಸ್ ಬಿ.ವಿ ಅಭಿನಯಿಸಲಿದ್ದಾರೆ.
ನಾಟಕದ ಸಾರಾಂಶ:
ಮನುಷ್ಯ ಅನುಮಾನವೆಂಬ ರೋಗಕ್ಕೆ ಬಲಿಯಾದರೆ ಬದುಕು ಹೇಗೆ ನರಕವಾಗುತ್ತದೆ ಎಂಬುದನ್ನು ಪ್ರಸ್ತುತ ನಾಟಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಲಲಿತಳಿಗೆ ಒಳ್ಳೆಯ ಗಂಡನಿದ್ದಾನೆ, ಆರೈಕೆ ಮಾಡುವ ಅಮ್ಮ, ಅಕ್ಕರೆಯ ತಮ್ಮ, ತಂಗಿ ಎಲ್ಲರೂ ಇದ್ದಾರೆ. ನೋಡಿದವರು ಮೆಚ್ಚುವ ಹಾಗೆ ನೆಮ್ಮದಿಯಾಗಿ ಸಂಸಾರ ಮಾಡುವ ಎಲ್ಲ ಅನುಕೂಲಗಳು ಇವೆ. ಆದರೆ ಮನಸ್ಸು ಗೊಂದಲದ ಗೂಡಾಗಿದೆ. ಕೆಲವು ಸನ್ನಿವೇಶಗಳು ಮತ್ತು ಸಂದರ್ಭಗಳು ನಮ್ಮ ಅಸ್ತಿತ್ವವನ್ನೇ ಪ್ರಶ್ನೆ ಮಾಡಿ ನಮ್ಮನ್ನು ಬೆತ್ತಲು ಮಾಡಿಬಿಡುತ್ತವೆ. ಲಲಿತಾಳ ಸಂತೋಷವನ್ನು ಕಸಿದುಕೊಂಡದ್ದು ಯಾರು?ಅವಳ ಅನುಮಾನಕ್ಕೆ ಅರ್ಥವಿದೆಯೇ? ಅಥವಾ ಆಕೆಯ ಅನುಮಾನಕ್ಕೆ ಇಂಬು ಕೊಡುವಂತೆ ಇತರರು ವರ್ತಿಸಿದರೆ? ಸ್ವಯಂಕೃತ ಅಪರಾಧಕ್ಕೆ ಆಕೆಯೇ ಬಲಿಯಾದಳೆ? ನಮ್ಮ ವ್ಯಕ್ತಿತ್ವ ಹೇಗಿರಬೇಕು? ಹಿರಿಯರ ಪಾತ್ರವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತದೆ ಈ ನಾಟಕ.
ಸಿ.ರಾಮಚಂದ್ರ ಶರ್ಮ:
ಆಧುನಿಕ ಕನ್ನಡ ಕಾವ್ಯ ಲೋಕದಲ್ಲಿ ಶರ್ಮೆರದು ಅತ್ಯಂತ ಪ್ರಮುಖ ಹೆಸರು. ಗೋಪಾಲಕೃಷ್ಣ ಅಡಿಗರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ಬರೆದು ತಮ್ಮ ಛಾಪನ್ನು ಮೂಡಿಸಲು ಪ್ರಯತ್ನಿಸಿದ ಕವಿ. ಸುಮಾರು ಆರು ದಶಕಗಳ ಕಾಲ ಕಾವ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ಅಮೋಘವಾದುದು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ಬಿ.ಎಡ್ ಪದವಿಗಳನ್ನು ಪಡೆದ ಶರ್ಮರು ಕೆಲಕಾಲ ಬೆಂಗಳೂರಿನ ಹೈಸ್ಕೂಲೊಂದರಲ್ಲಿ ಅಧ್ಯಾಪಕರಾಗಿದ್ದರು. ನಂತರ ಶರ್ಮರ ವಿದೇಶ ಯಾತ್ರೆ ಆರಂಭವಾಯಿತು. ಕೆಲಕಾಲ ಇಥಿಯೋಪಿಯಾದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು ನಂತರ ಇಂಗ್ಲೆಂಡಿಗೆ ಬಂದರು. ಅಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಮನಃಶಾಸ್ತ್ರ ಅಧ್ಯಯನ ಮಾಡಿದರು. ಮನಃಶಾಸ್ತ್ರಜ್ಞರಾಗಿ ಕೆಲಸಮಾಡಿ 1982ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು. ‘ಸೆರಗಿನ ಕೆಂಡ’, ‘ವೈತರಣಿ’, ‘ಬಾಳಸಂಜೆ’ ಮತ್ತು ‘ನೀಲಿ ಕಾಗದ’ ಇವರ ಪ್ರಮುಖ ನಾಟಕಗಳು.
ನಿರ್ದೇಶಕ ಎನ್. ಧನಂಜಯ:
ಮೈಸೂರಿನ ಹವ್ಯಾಸಿ ರಂಗಭೂಮಿ ಕಲಾವಿದ. ನಟನಾಗಿ, ನಿರ್ದೇಶಕನಾಗಿ ಮೈಸೂರಿನ ಎಲ್ಲ ರಂಗ ತಂಡಗಳ ಜೊತೆ ಒಡನಾಟವಿದೆ. ಈ ಹಿಂದೆ ಕಲಾ ಸುರುಚಿಗೆ ‘ಮನವೆಂಬ ಮರ್ಕಟ’ ನಾಟಕವನ್ನು ನಿರ್ದೇಶಿಸಿದ್ದರು. ‘ಹಂಸಗೀತೆ’, ‘ಗೆಲಿಲಿಯೋ’, ‘ತುಘಲಕ್’, ‘ಸದಾರಮೆ’, ‘ಹರಕೆಯ ಕುರಿ’, ‘ಆಷಾಢದಲ್ಲಿ ಒಂದು ದಿನ’, ‘ಹಾವು ಏಣಿ’, ‘ಸುಳಿವಾತ್ಮ ಎನ್ನೊಳಗೆ’ ಇತ್ಯಾದಿ ಇವರು ಅಭಿನಯಿಸಿರುವ ಪ್ರಮುಖ ನಾಟಕಗಳು.