ಚೆನ್ನರಾಯಪಟ್ಟಣ : ಚೆನ್ನರಾಯಪಟ್ಟಣದ ಪ್ರತಿಮಾ ಹೆಜ್ಜೆ ಕಲಾ ಸಂಘಟನೆಯು ನೂತನವಾಗಿ ನಿರ್ಮಿಸಿದ ‘ರಂಗ ಲೋಕ’ ರಂಗ ಮಂದಿರದ ಉದ್ಘಾಟನಾ ಸಮಾರಂಭವು ದಿನಾಂಕ 21-12-2023 ರಂದು ಚೆನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ರಾಘವೇಂದ್ರ ಸಾ ಮಿಲ್ ರಸ್ತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿದ್ದ ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಸದಾ ನಿಮ್ಮೊಂದಿಗಿರುತ್ತೇವೆ ಎಂದು ಆತ್ಮವಿಶ್ವಾಸ ತುಂಬಿದರು. ರಂಗ ಲೋಕದ ಗ್ರಂಥಾಲಯವನ್ನು ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿಯಾದ ಶ್ರೀ ಬಿ.ಕೆ.ಗಂಗಾಧರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಸಿ.ಕೆ.ಕುಸುಮ ರಾಣಿ ‘ರಂಗ ಲೋಕ’ ಉದ್ಘಾಟಿಸಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಚನ್ನರಾಯಪಟ್ಟಣದ ಕಿರುತೆರೆ, ಹಿರಿತೆರೆ ಹಾಗೂ ರಂಗಭೂಮಿ ನಟರಾದ ಶ್ರೀ ನಾಗರಾಜ್ ಕೋಟೆ “ಚನ್ನರಾಯಪಟ್ಟಣದಲ್ಲಿ ಒಂದು ರಂಗ ಮಂದಿರದ ಅವಶ್ಯಕತೆ ಇತ್ತು. ಅದನ್ನು ಪ್ರತಿಮಾ ಟ್ರಸ್ಟ್ ಸಾಧ್ಯವಾಗಿಸಿರುವುದು ತುಂಬಾ ಖುಷಿ ತಂದಿದೆ.” ಎಂದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಶ್ರೀ ಬಿ.ಎನ್.ವರಪ್ರಸಾದ ರೆಡ್ಡಿ ಮಾತನಾಡಿ “ಚನ್ನರಾಯಪಟ್ಟಣದಲ್ಲಿ ಏನಾದರೂ ಒಂದು ಹೊಸ ಬದಲಾವಣೆ ಹುಟ್ಟುತ್ತದೆ. ಅದಕ್ಕೆ ಎಂದಿಗೂ ಈ ನೆಲವನ್ನು ಮರೆಯಲು ಸಾಧ್ಯವಿಲ್ಲ.” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸಾರ್ವಜನಿಕ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ. ವಿ. ಮಹೇಶ್ ಟ್ರಸ್ಟಿನ ಕಾರ್ಯ ವೈಖರಿ ಮೆಚ್ಚಿ ಸದಾ ನಿಮ್ಮ ಜೊತೆಗೆ ಇರುತ್ತೇವೆ ಎಂದರು.
ಬಳಿಕ ಮಾತನಾಡಿದ ಪ್ರತಿಮಾ ಟ್ರಸ್ಟಿನ ಅಧ್ಯಕ್ಷರಾದ ಉಮೇಶ್ ತೆಂಕನಹಳ್ಳಿ “ನಮ್ಮ ಈ ರಂಗ ಲೋಕ ಬಹಳಷ್ಟು ಸಮಸ್ಯೆಗಳ ನಡುವೆ ಹುಟ್ಟಿದ್ದು, ಮೊದಲಿಗೆ ಜಾಗದ ಸಮಸ್ಯೆ. ಬಹಳಷ್ಟು ಹುಡುಕಾಟದ ನಂತರ ನಮ್ಮ ಟ್ರಸ್ಟ್‌ನ ಸಂಚಾಲಕರಾದ ಎ.ಎಲ್. ನಾಗೇಶ್ ಅವರು ತಮ್ಮ ಮನೆಯ ಮೇಲೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿ ವಿಚಾರವಾದರೆ, ನಿರ್ಮಾಣಕ್ಕೆ ಹಣಕಾಸು ಹೊಂದಿಸುವುದು ದೊಡ್ಡ ಸವಾಲಾಗಿತ್ತು. ಕೆಲವರ ಹತ್ತಿರ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಧನಸಹಾಯ ಕೇಳಲು ಹೋದಾಗ ಬರಿಗೈಲ್ಲಿ ಹಿಂದಿರುಗಿದ್ದೂ ಉಂಟು. ನಮ್ಮ ಕೆಲಸವನ್ನು ನೋಡಿ ತಮ್ಮ ಕೈಲಾದ ಸಹಾಯ ಮಾಡಿದವರೂ ಉಂಟು. ರಂಗ ಮಂದಿರದ ನಿರ್ಮಾಣ ಹಂತದಿಂದ ಕೊನೆಯವರೆಗೂ ಹಣ ಕಾಸಿನ ಸಮಸ್ಯೆ ಎದುರಿಸಿದ್ದೂ ಉಂಟು. ಇಂತಹ ಸಮಸ್ಯೆಯನ್ನು ನೀಗಿಸಲು ನಾವೇ ಇಟ್ಟಿಗೆ, ಸಿಮೆಂಟ್ ಹೊತ್ತು ಕೆಲಸ ಮಾಡಿದ್ದೇವೆ. ಗಾರೆ ಕಲಸುವವರು ಬರದಿದ್ದಾಗ, ಹೆಚ್ಚುವರಿ ಕಾರ್ಮಿಕರು ಬೇಕೆಂದಾಗ ನಾವೇ ಆ ಕೆಲಸಗಳನ್ನು ಖುಷಿಯಿಂದ ಮಾಡಿದ್ದೇವೆ. ಒಂಭತ್ತು ತಿಂಗಳ ಅವಿರತ ಶ್ರಮದ ಫಲವಾಗಿ ಒಂದೊಳ್ಳೆ ‘ರಂಗ ಲೋಕ’ ಸೃಷ್ಟಿಯಾಗಿದೆ. ಇನ್ನಾದರು ಸರ್ಕಾರಗಳು, ಅಧಿಕಾರಿಗಳು ನಮಗೆ ಸಹಾಯ ಮಾಡಲಿ.” ಎಂದು ಕೇಳಿಕೊಂಡರು.