ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಇದರ 5 ನೇ ಸಂಚಿಕೆಯನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವರ್ಗದವರ ಸಮ್ಮುಖದಲ್ಲಿ ದಿನಾಂಕ 18-12-2023 ರಂದು ಬಿಡುಗಡೆಗೊಳಿಸಲಾಯಿತು. ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು.
ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಮಾತನಾಡಿ “ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟಲು ಕ್ರಿಯೇಟಿವ್ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು.” ಎಂದು ಕರೆ ನೀಡಿದರು.
‘ನಿನಾದ’ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ. ಕೆ, ಉಪನ್ಯಾಸಕ ವರ್ಗದವರು, ನ್ಯೂಸ್ ಕಾರ್ಕಳದ ಜ್ಯೋತಿ ರಮೇಶ್, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ ನಿರೂಪಿಸಿ, ವಂದಿಸಿದರು.