ಖ್ಯಾತ ಹಿರಿಯ ನಾಟ್ಯಗುರು ರೇವತಿ ನರಸಿಂಹನ್ ಅವರ ಬಳಿ ಬದ್ಧತೆಯಿಂದ ನಾಟ್ಯಾಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ ಧನ್ಯ ಕಶ್ಯಪ್. ಶ್ರೀ ಮುರಳೀಧರ್ ಮತ್ತು ವೀಣಾ ಅವರ ಪುತ್ರಿಯಾದ ಧನ್ಯ, ಕಳೆದ 13 ವರ್ಷಗಳಿಂದ ನಿಷ್ಠೆಯಿಂದ ನೃತ್ಯ ಕಲಿಯುತ್ತಿದ್ದು, ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾಳೆ. ನೃತ್ಯದ ವಿವಿಧ ಆಯಾಮಗಳನ್ನು ಅರಿತಿರುವ ಧನ್ಯ 13-01-2024ರ ಶನಿವಾರದಂದು ಸಂಜೆ 5.30 ಗಂಟೆಗೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ವಿದ್ಯುಕ್ತವಾಗಿ ತನ್ನ ‘ರಂಗಪ್ರವೇಶ’ವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಅವಳ ಮೋಹಕ ನೃತ್ಯವನ್ನುವೀಕ್ಷಿಸಲು ಕಲಾರಸಿಕರೆಲ್ಲರಿಗೂ ಆದರದ ಸ್ವಾಗತ.
ಧನ್ಯಳಿಗೆ ಬಾಲ್ಯದಿಂದಲೂ ನೃತ್ಯಾಸಕ್ತಿ. ಸಾಂಸ್ಕೃತಿಕ ಪರಿಸರದಲ್ಲಿ ಹುಟ್ಟಿ-ಬೆಳೆದು ಬಂದ ಅವಳ ಕಲಾಪೋಷಣೆಗೆ ನೀರೆರೆದವರು ಅವಳ ತಂದೆ-ತಾಯಿ. ಏಕಾಗ್ರ ನಿಷ್ಠೆಯಿಂದ ನೃತ್ಯದ ಕಲಿಕೆಯಲ್ಲಿ ಅಪರಿಮಿತ ಶ್ರದ್ಧೆ ತೋರಿದ ಧನ್ಯ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ‘ಡಿಸ್ಟಿಂಕ್ಷನ್’ ಗಳಿಸಿದ್ದಲ್ಲದೆ, ಸಂಗೀತ ವಿದುಷಿ ವಾಣಿ ಕಿರಣ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ಶ್ರೇಷ್ಟಾಂಕಗಳನ್ನು ಗಳಿಸಿದ ಹೆಮ್ಮೆ ಅವಳದು. ‘ವಿದ್ವತ್’ ಪರೀಕ್ಷೆಗೆ ತಯಾರಾಗಿರುವ ಇವಳಿಗೆ ನೃತ್ಯ ಸಂಯೋಜನೆಯಲ್ಲಿ ಅಪಾರ ಆಸಕ್ತಿ. ತಾನು ಕಲಿಯುತ್ತಿರುವ ‘ನಾಟ್ಯ ನಿಕೇತನ’ ನೃತ್ಯಶಾಲೆಯ ಎಲ್ಲಾ ವಾರ್ಷಿಕ ಕಾರ್ಯಕ್ರಮಗಳಲ್ಲೂ ಪ್ರಮುಖ ಪಾತ್ರಗಳನ್ನು ವಹಿಸಿದ್ದಾಳೆ. ‘ಸರ್ವಂ ಕೃಷ್ಣ ಮಯಂ’ ಅಪೂರ್ವ ನೃತ್ಯರೂಪಕದಲ್ಲಿ ಸ್ಮರಣೀಯ ನೃತ್ಯಪ್ರದರ್ಶನ ನೀಡಿದ್ದಾಳೆ. ಅವಳ ಕಲಾತಪಸ್ಸಿಗೆ ಗುರು ರೇವತಿ ಅವರ ಆಶೀರ್ವಾದ ಮತ್ತು ವಿಶೇಷ ಮಾರ್ಗದರ್ಶನವಿದ್ದು, ಧನ್ಯ ವಿನಮ್ರ ವಿದ್ಯಾರ್ಥಿನಿಯಾಗಿ ಪರಿಶ್ರಮದಿಂದ ಅಭ್ಯಾಸ ಮಾಡುತ್ತಿದ್ದಾಳೆ.
ಜ್ಯೋತಿ ಕೇಂದ್ರೀಯ ವಿದ್ಯಾಲಯ ಶಾಲೆ, ಶ್ರೀ ಕುಮಾರನ್ಸ್ ಕಾಂಪೋಸಿಟ್ ಕಾಲೇಜಿನಲ್ಲೂ ಉತ್ತಮ ವಿದ್ಯಾರ್ಥಿನಿಯಾಗಿದ್ದು, ಓದಿನ ಜೊತೆ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದವಳು ಧನ್ಯ. ಪ್ರಸ್ತುತ ಬಿ.ಎಂ.ಎಸ್. ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಮೂರನೇ ಸೆಮಿಸ್ಟರಿನಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಚಿಗುರು, ನಾಟ್ಯ ಸುಧಾ ಲಹರಿ, ಜಕ್ಕೋ ಕಲ್ಚುರಲ್ ಇವೆಂಟ್, ಇಸ್ರೋ ಸಾಂಸ್ಕೃತಿಕ ಕಾರ್ಯಕ್ರಮ, ತಂಜಾವೂರಿನ ಬೃಹದೀಶ್ವರ ದೇವಾಲಯದ ಬೃಹನ್ ನಾಟ್ಯಾಂಜಲಿ ಮುಂತಾದೆಡೆ ನಾಟ್ಯಪ್ರದರ್ಶನಗಳನ್ನು ಪ್ರಸ್ತುತಿ ಪಡಿಸಿದ ವೈಶಿಷ್ಟ್ಯ ಇವಳದು. ಪ್ರವಾಸ, ಪೇಯಿಂಟಿಂಗ್ ಮತ್ತು ಕರಕುಶಲ ಕಲೆ ಇವಳ ಹವ್ಯಾಸಗಳು. ಹಗಲಿರುಳೂ ನೃತ್ಯವನ್ನೇ ಕುರಿತು ಧ್ಯಾನಿಸುವ ಧನ್ಯ, ಭವಿಷ್ಯದಲ್ಲಿ ತಾನೊಬ್ಬ ಅತ್ಯುತ್ತಮ ನೃತ್ಯ ಕಲಾವಿದೆಯಾಗಿ ಬೆಳೆದು, ನೃತ್ಯರಂಗದಲ್ಲಿ ಸಾಧನೆಗೈಯುವ ಕನಸು ಅವಳದು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.