ಮಂಗಳೂರು: ಮಂಗಳೂರಿನ ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ‘ತ್ರಿಂಶೋತ್ಸವ’ದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -7’ ಇದರ ಅಂಗವಾಗಿ ‘ನೃತ್ಯ ಸಂಯೋಜನಾ ತಂತ್ರಗಾರಿಕೆ’ ಮತ್ತು ‘ಭರತನಾಟ್ಯ ಪ್ರಸ್ತುತಿಯಲ್ಲಿ ಪ್ರಸ್ತುತ’ ಎಂಬ ವಿಷಯದ ಕುರಿತು ಸಂವಾದಾತ್ಮಕ ಪ್ರಾತ್ಯಕ್ಷಿಕೆಯಿಂದ ಕೂಡಿದ ವಿಚಾರ ಸಂಕಿರಣ ‘ಜ್ಞಾನಸುಧಾ’ ದಿನಾಂಕ 21-07-2024 ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಮಾತನಾಡಿ “ನಾಟ್ಯಾರಾಧನಾ ಕಲಾ ಕೇಂದ್ರದ ‘ತ್ರಿಂಶೋತ್ಸವ’ದ ಸಂದರ್ಭದಲ್ಲಿ ಭರತನಾಟ್ಯ ಸಂಬಂಧಿತ ಹಲವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಈ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆದಿರುವುದು ಸಂತಸ ತಂದಿದೆ.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರವಿಶಂಕರ್ ರಾವ್ ಮಾತನಾಡಿ “ಭಾರತನಾಟ್ಯ ಕಲಾವಿದರು ಭರತನಾಟ್ಯದ ಇತಿಹಾಸ ತಿಳಿದಿರಬೇಕು. ಇದು ಕಲಾವಿದರ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.” ಎಂದುರು.
ಬೆಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದ ಪಾರ್ಶ್ವನಾಥ್ ಉಪಾಧ್ಯೆ ಇವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ 36 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು.