ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಿನಾಂಕ 24-12-2023ರಂದು ಅಲ್ಲಿಯ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ “ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ಸ್ತುತ್ಯಾರ್ಹ” ಎಂದು ಹೇಳಿದರು.
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸ್ಥಾಪಕ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್’ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಯನ್ನು ಗೌರವಿಸಲಾಯಿತು. ಗೋಷ್ಠಿಗಳಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ದೇವಾಲಯ ನೃತ್ಯದ ಬಗ್ಗೆ, ಲಂಡನ್‌ನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಧ್ವನಿಸುರುಳಿ: ಸಜೀವ ಹಿಮ್ಮೇಳ ಸಂಗೀತ ಸೂಕ್ತವೇ’ ಎಂಬ ವಿಷಯದಲ್ಲಿ ಡಾ. ಸಾಗರ್ ತುಮಕೂರು, ವಿದ್ವಾನ್ ಪುಲಕೇಶಿ ಕಸ್ತೂರಿ ಬೆಂಗಳೂರು, ವಿ. ಯಶಾ ರಾಮಕೃಷ್ಣ, ವಿ. ಭ್ರಮರಿ ಶಿವಪ್ರಕಾಶ್, ಡಾ. ಸಹನಾ ಭಟ್ ಹುಬ್ಬಳ್ಳಿ, ಡಾ. ಚೇತನಾ ರಾಮಕೃಷ್ಣ ಮೈಸೂರು ಸಮನ್ವಯಕಾರರಾಗಿ ವಿ. ಸುಮಂಗಲಾ ರತ್ನಾಕರ್ ಭಾಗವಹಿಸಿದ್ದರು.
ರಾಜೇಶ್ ಟಿ.ಕೆ. ಬೆಂಗಳೂರು ಹಾಗೂ ಶ್ರೀಜಿತ್ ಕೃಷ್ಣ ಚೆನ್ನೈ ಬಳಗದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರ್ ಪ್ರಸ್ತಾವಿಸಿದರು. ವಿ. ಪಾವನ ಪ್ರಾರ್ಥಿಸಿ, ವಿ. ಮಾನಸಿ ಸುಧೀರ್ ಬಳಗದವರಿಂದ ಪುಷ್ಪಾಂಜಲಿ ನೃತ್ಯ ನಡೆಯಿತು. ಕಾರ್ಯಾಧ್ಯಕ್ಷ ವಿದ್ವಾನ್ ಯು.ಕೆ. ಪ್ರವೀಣ್ ವಂದಿಸಿದರು. ಸಮ್ಮೇಳನ ಸಮಿತಿ ಪದಾಧಿಕಾರಿಗಳು ಇದ್ದರು.
ದಿನಾಂಕ 25-12-2023ರಂದು ದೇಗುಲದ ಆವರಣದಲ್ಲಿ ಜರಗಿದ ಕರಾವಳಿ ಭರತನಾಟ್ಯ ಕಲಾವಿದರ ನೃತ್ಯ ಸಮ್ಮೇಳನ ‘ನೃತ್ಯೋತ್ಕರ್ಷ’ ಸಮಾರೋಪದಲ್ಲಿ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ರಾವ್ ಅವರಿಗೆ ‘ನೃತ್ಯೋತ್ಕರ್ಷ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಮೋಹನ್ ಕುಮಾರ್ “ಕಲೆಯಲ್ಲಿ ಶಿವನನ್ನು ಕಂಡವನು ನಾನು, ದೇವರನ್ನು ಸದಾ ನೆನೆದು ಎಲ್ಲರಿಗೂ ನಾಟ್ಯಶಾಸ್ತ್ರ ಹೇಳಿಕೊಟ್ಟಿದ್ದೇನೆ. ಇಳಿ ವಯಸ್ಸಿನಲ್ಲಿ ನೃತ್ಯ ಮಾಡಲು ಸಾಧ್ಯವಾಗದಿದ್ದರೂ ಕಿರಿಯರ ನೃತ್ಯ ನೋಡಿ ಆನಂದಿಸುತ್ತಿದ್ದೇನೆ. ಭರತನಾಟ್ಯ ನಮ್ಮ ನೆಲದ ಸಂಸ್ಕೃತಿಯ ಪ್ರತಿರೂಪ. ಕರಾವಳಿಯಲ್ಲಿ ಶಾಸ್ತ್ರೀಯ ಕಲೆ ಉಳಿಸಿ, ಬೆಳೆಸಲು ಸಾಕಷ್ಟು ಶ್ರಮಿಸಲಾಗಿದೆ. ನೃತ್ಯ ಕಲೆಯನ್ನು ಎಲ್ಲರೂ ಉಳಿಸಿ” ಎಂದರು.
ಚಂದ್ರಶೇಖರ ನಾವಡ ಅಭಿನಂದನಾ ಭಾಷಣ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಉದ್ಯಮಿ ಡಾ. ಹರಿಕೃಷ್ಣ ಪಾಣಾಜೆ, ಸಮ್ಮೇಳನಾಧ್ಯಕ್ಷ ಪ್ರೊ. ಕೆ. ರಾಮಮೂರ್ತಿ ರಾವ್, ಸಮ್ಮೇಳನ ಸಮಿತಿ ಅಧ್ಯಕ್ಷ ಕಮಲಾಕ್ಷ ಆಚಾರ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಯು.ಕೆ. ಪ್ರವೀಣ್ ಸ್ವಾಗತಿಸಿ, ಶ್ರೀವಿದ್ಯಾ ರಾಧಾಕೃಷ್ಣ ನಿರೂಪಿಸಿ, ಸುಧೀರ್ ರಾವ್ ಕೊಡವೂರು ವಂದಿಸಿದರು. ‘ಹಾಡೊಂದು ಭಾವ ಹಲವು’ ಹಾಡುಗಾರಿಕೆ, ತ್ರಿವಳಿ ನೃತ್ಯ, ನೃತ್ಯ ರಸಪ್ರಶ್ನೆ, ಆಶು ಅಭಿನಯ ಹಾಗೂ ನೃತ್ಯದಲ್ಲಿ ಲಯ, ಭರತನಾಟ್ಯ ಕಾರ್ಯಕ್ರಮ ಸವಾಲುಗಳು-ಪರಿಹಾರ ಮತ್ತು ಭರತನಾಟ್ಯ ಪ್ರದರ್ಶನಕ್ಕೆ ಶಾಸ್ತ್ರದ ಪ್ರಮುಖ್ಯತೆ ಎಂಬ ವಿಷಯದಲ್ಲಿ ವಿಚಾರಗೋಷ್ಠಿಗಳು ನಡೆದವು.