ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 07-01-2024ನೇ ರವಿವಾರದಂದು ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ “ಡಾ. ಅಮೃತ ಸೋಮೇಶ್ವರರ ಗ್ರಂಥಗಳಲ್ಲಿರುವ ಮಾಹಿತಿ ಸಾರ್ವಕಾಲಿಕವಾಗಿದ್ದು, ಅವುಗಳು ಕರಾವಳಿಯ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯಾಗಿ ಉಳಿಯಲಿವೆ. ಅಮೃತರು ವ್ಯಕ್ತಿತ್ವ, ವಿನಯ ಮತ್ತು ವಿದ್ವತ್ತಿನ ಅಪೂರ್ವ ಸಂಗಮ. ಕರಾವಳಿಯಲ್ಲಿ ಲಲಿತ ಕಲಾ ಮಹಾವಿದ್ಯಾಲಯ ಸ್ಥಾಪಿಸುವುದು ಅವರ ಕನಸಾಗಿತ್ತು. ಅಂತಹ ಮಹಾವಿದ್ಯಾಲಯವನ್ನು ಸ್ಥಾಪಿಸಿದರೆ ಕರಾವಳಿ ಭಾಗದ ಸಂಸ್ಕೃತಿ ಉಳಿಸಲು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.” ಎಂದು ಹೇಳಿದರು.
ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ಡಾ. ಅಮೃತ ಸೋಮೇಶ್ವರ ಅವರು ಬರೆಯದ ವಿಷಯವೇ ಇಲ್ಲ. ವಿಷಯದಲ್ಲಿ ಖಚಿತವಾಗಿದ್ದರು. ತಮ್ಮ ನಿಲುವನ್ನು ಬಿಟ್ಟು ಕೊಡುತ್ತಿರಲಿಲ್ಲ. ಪುರಾಣಕ್ಕೆ ಹೊಸ ಅರ್ಥ ಹಾಗೂ ಹೊಸರೂಪ ನೀಡಿದ ಅಪರೂಪದ ವ್ಯಕ್ತಿ.”ಎಂದು ಹೇಳಿದರು.
ಹಿರಿಯ ಕವಿ, ಸಾಹಿತಿ ವಸಂತ ಕುಮಾರ್ ಪೆರ್ಲ ಮಾತನಾಡಿ “ಎಲ್ಲರನ್ನೂ ಒಳಗೊಳ್ಳುವ ಜನಪ್ರಿಯ ವ್ಯಕ್ತಿತ್ವ ಅಮೃತ ಸೋಮೇಶ್ವರರದ್ದು ಅವರು ಸಾಹಿತ್ಯದ ಎಲ್ಲಾ ಆಯಾಮಗಳಲ್ಲೂ ಕೈಯಾಡಿಸಿದ ಮೇಧಾವಿಯಾಗಿದ್ದರು.”ಎಂದು ಹೇಳಿದರು.
ಪ್ರೊ. ಎ.ವಿ. ನಾವಡ ಮಾತನಾಡಿ “ಡಾ. ಅಮೃತ ಸೋಮೇಶ್ವರ ಅವರ ವ್ಯಕ್ತಿತ್ವ ಮತ್ತು ಮನೋಧರ್ಮ ಆಶ್ಚರ್ಯ ಮೂಡಿಸುತ್ತಿತ್ತು. ಎಲ್ಲವನ್ನು ಒಪ್ಪಿಕೊಂಡು ರಾಜಿಯಾಗುವ ಮನೋಧರ್ಮ ಅವರದ್ದಾಗಿರಲಿಲ್ಲ. ತುಳು ಪಾಡ್ಡನ ಸಂಪುಟದಂತಹ ಅವರ ಆಯ್ದ ಪುಸ್ತಕಗಳನ್ನು ಮರು ಪ್ರಕಟಿಸುವ ಆವಶ್ಯಕತೆ ಇದೆ” ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ನುಡಿನಮನ ಸಲ್ಲಿಸುತ್ತಾ “ಡಾ. ಅಮೃತರು ಮಹಾನ್ ಶಕ್ತಿ. ತುಳು, ಕನ್ನಡ ಮತ್ತು ಇತರ ಭಾಷೆಗಳಿಗೆ ಅವರು ನೀಡಿದ ಕೊಡುಗೆ ಅಪಾರ.” ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಎಚ್. ವಿನಯ ಆಚಾರ್ಯ, ನಿವೃತ್ತ ಅಧ್ಯಾಪಕಿ ಹಾಗೂ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ, ಕೇಂದ್ರ ಸಮಿತಿಯ ಡಾ. ಮಾಧವ ಎಂ.ಕೆ., ಜಿಲ್ಲಾ ಕಾರ್ಯಕಾರಿ ಸಮಿತಿಯ ಸನತ್ ಕುಮಾರ್ ಜೈನ್, ಯೋಗೀಶ್ ಶೆಟ್ಟಿ ಜಪ್ಪು ಮೊದಲಾದವರು ಪಾಲ್ಗೊಂಡಿದ್ದರು.