ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ದಿನಾಂಕ 19-02-2024 ರಂದು ನಿಧನರಾದ ಹಿರಿಯ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 24-02-2024ರ ಶನಿವಾರದಂದು ಮಂಗಳೂರಿನ ಎಸ್. ಡಿ. ಎಂ. ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾಂಸ ಡಾ. ಪ್ರಭಾಕರ ಜೋಷಿ “ಸಾಮಾನ್ಯರ ಜೀವನದ ಜೀವಂತ ಪಾತ್ರಗಳು ಕೆ. ಟಿ. ಗಟ್ಟಿ ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ರೀತಿಯಲ್ಲಿ ಇರುತ್ತಿದ್ದವು. ಅವರ ಎಲ್ಲಾ ಸಾಹಿತ್ಯದ ಸಮಗ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಕಲಿಕೆಯ ಪಾಠವಾಗಬೇಕು.” ಎಂದು ನುಡಿದರು.
ಪ್ರಾಧ್ಯಾಪಕ ಡಾ. ಶ್ರುತಕೀರ್ತಿರಾಜ್ ಮಾತನಾಡಿ “ಸಾಹಿತಿ ಕೆ. ಟಿ. ಗಟ್ಟಿ ಅವರು ದಿನದ ನಿತ್ಯ ಕರ್ಮ ಬಿಟ್ಟರೆ ಇಪ್ಪತ್ನಾಲು ಗಂಟೆಗಳ ಸಮಯ ಬರವಣಿಗೆಗೆ ಮೀಸಲಿಟ್ಟಿದ್ದರು. ಸಮಯ ಮಿಕ್ಕಿದರೆ ಕೃಷಿಯಲ್ಲಿ ತೊಡಗುತ್ತಿದ್ದರು. ಆದುದರಿಂದ ಅವರ ಬರಹಗಳು ನೈಜತೆಯ ಆಗರವಾಗಿದ್ದುವು.” ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯದ ಬೆಳವಣಿಗೆಗೆ ಮತ್ತು ಅಧ್ಯಯನಕ್ಕೆ ಸಾಹಿತಿ ಒಬ್ಬರು ಹೇಗೆ ಕೊಡುಗೆ ಯಾಗಬಲ್ಲರು ಎಂಬುದಕ್ಕೆ ಕೆ.ಟಿ. ಗಟ್ಟಿ ಉದಾಹರಣೆ.” ಎಂದು ಹೇಳಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ನುಡಿನಮನ ಸಲ್ಲಿಸಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ತೋನ್ಸೆ ಪುಷ್ಕಳ ಕುಮಾರ್, ಚಂದ್ರಶೇಖರ ನಾವಡ, ಸುಬ್ರಾಯ ಭಟ್, ಗಣೇಶ್ ಜಿ., ರಘು ಇಡ್ಕಿದು, ದಯಾನಂದ ರಾವ್ ಕಾವೂರು, ರೇಮಂಡ್ ಡಿಕುನ್ಹ ತಾಕೊಡೆ, ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ ಉಡುಪ, ಸುರತಲ್ ಹೋಬಳಿ ಅಧ್ಯಕ್ಷೆ ಗುಣವತಿ ಉಪಸ್ಥಿತರಿದ್ದರು.