ಬ್ರಹ್ಮಾವರ : ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಆಯೋಜಿಸಿಕೊಂಡಿರುವ ಯಕ್ಷಗಾನದ ಪೂರ್ವರಂಗದ ‘ಒಡ್ಡೋಲಗ’ ಕಾರ್ಯಕ್ರಮವು ದಿನಾಂಕ 14 ನವೆಂಬರ್ 2026ರಂದು ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾಪೋಷಕರಾದ ಆ್ಯಂಡ್ರ್ಯು ಡಿ ಸಿಲ್ವ ಮಾತನಾಡಿ “ಯಕ್ಷಗಾನದಲ್ಲಿ ಮೂಲ ಸತ್ವ ಅಳಿದಿದೆ. ಬೆರಳೆಣಿಕೆಯ ಸಂಘ ಸಂಸ್ಥೆಗಳು ಇದನ್ನು ಮತ್ತೆ ಎತ್ತಿ ಹಿಡಿದು ಸಾರುತ್ತಿದೆ. ಯಕ್ಷಗಾನದ ಅತ್ಯಂತ ಶ್ರೇಷ್ಠ ಸೌಂದರ್ಯ ಭಾಗ ರಂಗದಿಂದ ಮರೆಯಾಗಿದೆ. ಮೂಲ ಸತ್ವವನ್ನು ಪೋಷಿಸಬೇಕಾದ ಮೇಳಗಳು ಪ್ರೇಕ್ಷಕರತ್ತ ವಾಲಿದೆ. ನೇರ ಕಥಾಭಾಗಕ್ಕೆ ಪ್ರವೇಶ ಮಾಡುವ ಮೇಳಗಳು ಅಲ್ಲಲ್ಲಿ ಸಂಪ್ರದಾಯದ ಸ್ವಾರಸ್ಯವನ್ನು ತೂರಿಸಿಯಾದರೂ ಪರಂಪರೆಯ ಒಡ್ಡೋಲಗ ಹಾಗೂ ಇನ್ನಿತರ ಯಕ್ಷ ಪ್ರಕಾರವನ್ನು ಉಳಿಸಬೇಕಾದ ಜವಾಬ್ಧಾರಿ ಹೊರುವಂತಾಗಬೇಕು. ಹಿಂದಿನ ಪ್ರಾಜ್ಞರು ಅತ್ಯಂತ ಸುಂದರವಾಗಿ ಹಾಕಿಕೊಟ್ಟ ಪೂರ್ವರಂಗ ಮತ್ತೆ ಆಗಾಗ ರಂಗದಲ್ಲಿ ವಿಜೃಂಬಿಸಬೇಕು. ಅದಕ್ಕಾಗಿ ಪ್ರತೀ ಕಲಾವಿದರಿಗೂ ಪೂರ್ವರಂಗದ ಅರಿವು ಅತ್ಯಗತ್ಯ” ಎಂದು ಹೇಳಿದರು.

“ಯಕ್ಷಗಾನವನ್ನು ನೋಡುವ ಕಲೆ ಪೂರ್ವರಂಗದಿಂದ ಸಿದ್ಧಿಸುತ್ತದೆ. ಯಕ್ಷಗಾನದ ಕಥಾ ಬಾಗಕ್ಕೆ ಸತ್ವವನ್ನು ಪೂರ್ವರಂಗ ಒದಗಿಸುತ್ತದೆ. ಒಳ್ಳೆಯ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಇಂತಹ ಭಾಗವನ್ನು ಬಿಟ್ಟು ಪ್ರಸಂಗ ಭಾಗವನ್ನು ಪ್ರವೇಶಿಸುವ ಕಾಲಘಟ್ಟಕ್ಕೆ ನಾವು ತಲುಪಿರುವುದು ನಿಜಕ್ಕೂ ಅಘಾತಕರ ಸಂಗತಿ” ಎಂದು ಸಂಸ್ಥೆಯ ಪ್ರಾಂಶುಪಾಲ ರಾಘವೇಂದ್ರ ಎ. ಹೇಳಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಮನೋಮಯ್ ಕಾರಂತ್, ಸನ್ನಿಧಿ ಹೊಳ್ಳ, ಶ್ರೀಶಾಸ್ತ ಗಾಣಿಗ ಉಪಸ್ಥಿತರಿದ್ದರು. ಬಳಿಕ ‘ಒಡ್ಡೋಲಗ’ ಪ್ರಸ್ತುತಿಗೊಂಡಿತು.

